ಯುಪಿಸಿಎಲ್ ಪರ ತಿಂಗಳೆ ಹೇಳಿಕೆ: ರೈತ ಸಂಘ ಅಸಮಾಧಾನ
ಉಡುಪಿ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅವರು ಇತ್ತೀಚೆಗೆ ಯುಪಿಸಿಎಲ್‌ನಿಂದ ಮೆಸ್ಕಾಂಗೆ ಹೆಚ್ಚಿಗೆ ವಿದ್ಯುತ್ ನೀಡಲು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದೇನೆ ಎಂದು ಹೇಳಿರುವುದು ಪಡುಬಿದ್ರಿ ಪರಿಸರದಲ್ಲಿ ಈ ಯೋಜನೆಯ ವಿರುದ್ಧ ಪ್ರಾಮಾಣಿಕ ಹೋರಾಟ ನಡೆಸಿದ ಬಿಜೆಪಿ ಕಾರ್ಯಕರ್ತರು ತಲೆ ತಗ್ಗಿಸುವಂತಾಗಿದೆ ಎಂದು ರಾಜ್ಯ ರೈತ ಸಂಘ ಹೇಳಿದೆ.
ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೆ ಜನವಿರೋಧಿ ಕಲ್ಲಿದ್ದಲು ಆಧಾರಿತ ಯುಪಿಸಿಎಲ್‌ನ್ನು ಅನಿಲಾಧಾರಿತ ಸ್ಥಾವರವನ್ನಾಗಿ ಪರಿವರ್ತಿಸುತ್ತೇವೆ ಅಥವಾ ಇಲ್ಲಿಂದ ಓಡಿಸುತ್ತೇವೆ ಎಂದು ಭರವಸೆ ನೀಡಿದ್ದ ದಿ.ಡಾ. ಆಚಾರ್ಯರ ಮಾತನ್ನು ನಂಬಿ ಬಿಜೆಪಿ ಕಾರ್ಯಕರ್ತರು ಕಾಪುವಿನಲ್ಲಿ ಬಿಜೆಪಿಯ ಲಾಲಾಜಿ ಮೆಂಡನ್ ಅವರನ್ನು ಶಾಸಕರನ್ನಾಗಿ ಆರಿಸಿದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯುಪಿಸಿಎಲ್ ಅನಿಲಾಧಾರಿತವಾಗಲಿಲ್ಲ, ಬದಲಿಗೆ ಕಲ್ಲಿದ್ದಲು ಆಧಾರಿತ ಸ್ಥಾವರಕ್ಕೆ ಇನ್ನೂ ಹೆಚ್ಚಿನ ಬೆಂಬಲ ಸಿಕ್ಕಿತು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಿಜಯಕುಮಾರ್ ಹೆಗ್ಡೆ ಆರೋಪಿಸಿದ್ದಾರೆ.
ಜೋಗದಲ್ಲಿ ಉತ್ಪಾದನೆಯಾಗುವ ಶುದ್ಧ ವಿದ್ಯುತ್ತನ್ನು ಕಡಿಮೆ ದರದಲ್ಲಿ ನಿರಂತರವಾಗಿ ಶಿವಮೊಗ್ಗ ಜಿಲ್ಲೆಗೆ ಕಳುಹಿಸಿ, ಉಡುಪಿ ಜಿಲ್ಲೆಗೆ ಜನಜೀವನದ ಅನಾರೋಗ್ಯಕ್ಕೆ ಕಾರಣವಾಗುತ್ತಿರುವ ಯುಪಿಸಿಎಲ್ ಸ್ಥಾವರದಿಂದ ವಿದ್ಯುತ್ ಪಡೆಯಲಾಗುತ್ತಿದೆ. ಈಗ ಹೆಚ್ಚುವರಿ ವಿದ್ಯುತ್ತಿಗೆ ಅದೂ ಭಾರಿ ಬೆಲೆಯಲ್ಲಿ ಯಪಿಸಿಎಲ್‌ಗೆ ಭಿಕ್ಷೆ ಬೇಡುವ ನಾಚಿಕೆಗೇಡಿನ ಸ್ಥಿತಿ ನಿರ್ಮಾಣವಾಗಿದೆ. ವಿಕ್ರಮಾರ್ಜುನ ಹೆಗ್ಡೆ ಅವರು ತಮ್ಮ ಬೇಡಿಕೆಯ ಮೂಲಕ ತಾವು ಕೂಡ ಯುಪಿಸಿಎಲ್ ಸ್ಥಾವರಕ್ಕೆ ಪೂರಕವಾಗಿದ್ದೇನೆ ಎಂದು ಸಾಬೀತು ಮಾಡಿದ್ದಾರೆ.
ಆದ್ದರಿಂದ ಅಂದು ಯುಪಿಸಿಎಲ್ ವಿರುದ್ಧ ಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ನಿಲುವನ್ನು ಕೂಡಲೆ ಪ್ರಕಟಿಸಬೇಕು ಎಂದು ಹೆಗ್ಡೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

