'ಜ್ಞಾನಪೀಠಿಗಳ ಕೃತಿ ಇತರ ಭಾಷೆಗಳಲ್ಲಿ ಅನುವಾದ'
ಬ್ರಹ್ಮಾವರ: ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಗಳನ್ನು ಭಾರತದ ಇತರೆ ಭಾಷೆಗಳಲ್ಲಿ ಅನುವಾದ ಮಾಡಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಮಂದಾರ್ತಿ ದುರ್ಗಾಪರಮೇಶ್ವರೀ ಕಲ್ಯಾಣ ಮಂದಿರದಲ್ಲಿ ಶನಿವಾರ ನಡೆದ ಉಡುಪಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇದಕ್ಕೂ ಮುನ್ನ ಸಮ್ಮೇಳನವನ್ನು ತೆಂಕನಿಡಿಯೂರು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗ ಮುಖ್ಯಸ್ಥ ಡಾ. ಗಣನಾಥ ಎಕ್ಕಾರು ಉದ್ಘಾಟಿಸಿದರು.
ಸಮ್ಮೇಳನದ ಅಧ್ಯಕ್ಷ ಹಾಸ್ಯ ಸಾಹಿತಿ ಕುಗೋ ಅವರು ಮಾತನಾಡಿ ಸಮ್ಮೇಳನಗಳಲ್ಲಿ ಕೇವಲ ಸಾಹಿತ್ಯಾಸಕ್ತರಲ್ಲದೇ ಜನರ ಸಮ್ಮಿಲನ ಆಗುವಂತಹ ವಾತಾವರಣ ಸೃಷ್ಟಿಯಾಗಬೇಕು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ, ಕನ್ನಡ ಪುಸ್ತಕಗಳ ಓದುವ ಹವ್ಯಾಸ ಬಗ್ಗೆ ಚರ್ಚೆ ನಡೆಯುತ್ತಾ ಇರಬೇಕು. ಕನ್ನಡಕ್ಕಾಗಿ ಏನೆಲ್ಲಾ ಒಳ್ಳೆಯದನ್ನು ಮಾಡಲು ಸಾಧ್ಯವೋ ಅದನ್ನು ಸಂಭ್ರಮದಿಂದ ಮಾಡುವ ಭಾಗ್ಯವಿರಬೇಕು. ಓದುವ ಅಭ್ಯಾಸವನ್ನು ಚಿಕ್ಕಂದಿನಲ್ಲಿಯೇ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪೋಷಕರು ಮತ್ತು ಅಧ್ಯಾಪಕರ ಪಾತ್ರ ಹಿರಿದು ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಮಹಾಬಲೇಶ್ವರ ರಾವ್, ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ಡಿ. ಮಂಜುನಾಥಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯಾಧ್ಯಕ್ಷ ಎಚ್. ಧನಂಜಯ ಶೆಟ್ಟಿ, ಹೆಗ್ಗುಂಜೆ ಗ್ರಾ.ಪಂ ಅಧ್ಯಕ್ಷೆ ಜಯಂತಿ ಎಸ್, ಕೋಟ ಹೋಬಳಿ ಕಸಾಪ ಅಧ್ಯಕ್ಷ ಎಚ್.ಸುದರ್ಶನ ಶೆಟ್ಟಿ ವೇದಿಕೆಯಲ್ಲಿದ್ದರು.
ಬೆಳಗ್ಗೆ ಹೆಗ್ಗುಂಜೆ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಎಸ್. ರಾಷ್ಟ್ರಧ್ವಜವನ್ನು ಆರೋಹಿಸಿದರು. ಕಸಾಪ ಕೋಟ ಹೋಬಳಿಯ ಅಧ್ಯಕ್ಷ ಎಸ್. ಸುದರ್ಶನ ಶೆಟ್ಟಿ ಪರಿಷತ್ತಿನ ಧ್ವಜ ಅರಳಿಸಿದರು. ಸ್ವಾಗತ ಸಮಿತಿಯ ಗೌರವ ಅಧ್ಯಕ್ಷ ಕೆ.ಎಂ. ಉಡುಪ ಸ್ವಾಗತಿಸಿದರು. ಉಡುಪಿ ತಾಲ್ಲೂಕು ಅಧ್ಯಕ್ಷ ಪ್ರೊ. ಉಪೇಂದ್ರ ಸೋಮಯಾಜಿ ವಂದಿಸಿದರು. ಅಧ್ಯಾಪಕ ನರೇಂದ್ರ ಕುಮಾರ ಕೋಟ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

