ದೊಂಡೇರಂಗಡಿ ಶ್ರೀರಾಮನಿಗೆ ಲಡ್ಡು ಹರಕೆ
ಉಡುಪಿ: ತಾವು ದೇವರಲ್ಲಿ ಬೇಡಿಕೊಂಡದ್ದು ಫಲಿಸಿದರೆ ಮುಡಿಯನ್ನೋ, ಹಣವನ್ನೋ ಅಥವಾ ವಸ್ತುಗಳ ರೂಪದಲ್ಲಿ ದೇವರಿಗೆ ಹರಕೆ ಸಮರ್ಪಿಸುವುದು ಸಾಮಾನ್ಯ.
ಅದೇ ರೀತಿ ಇಲ್ಲೊಂದು ಶ್ರದ್ಧಾಕೇಂದ್ರವಿದೆ, ಇಲ್ಲಿ ಭಕ್ತರು ದೇವರಿಗೆ ಹರಕೆಯ ರೂಪದಲ್ಲಿ ತಂದೊಪ್ಪಿಸುವುದು ಬೂಂದಿ ಲಡ್ಡುಗಳನ್ನು. ಅದೂ ಸಹಸ್ರಾರು ಸಂಖ್ಯೆಯಲ್ಲಿ!
ಉಡುಪಿ ತಾಲೂಕಿನ ಪೆರ್ಡೂರು ಸಮೀಪದ ದೊಂಡೇರಂಗಡಿ ಶ್ರೀರಾಮ ಮಂದಿರದಲ್ಲಿ ಇಂತಹ ಅಪರೂಪದ ಹರಕೆ ಪದ್ಧತಿ ಅನಾದಿ ಕಾಲದಿಂದಲೂ ನಡೆಯುತ್ತಿದೆ.
ಸುಮಾರು 119 ವರ್ಷಗಳ ಹಿಂದೆ ಇಲ್ಲಿ ಭಕ್ತರು ಭಜನೆ ಕಾರ್ಯಕ್ರಮ ನಡೆಸುತ್ತಿದ್ದರು ಎನ್ನುವುದಕ್ಕೆ ದಾಖಲೆಗಳಿವೆ. ಬಹುಶಃ ಅಂದಿನಿಂದಲೂ ಈ ಲಡ್ಡು ಹರಕೆ ನಡೆಯುತ್ತಿದೆ.
ವರ್ಷದಲ್ಲಿ ಒಂದು ನಿರ್ದಿಷ್ಟ ದಿನ ಈ ಹರಕೆ ಸಲ್ಲಿಸುವ ಕಾರ್ಯಕ್ರಮ ನಡೆಯುತ್ತದೆ. ಅಂದು ಹಗಲು ರಾತ್ರಿ ಭಕ್ತರು ಮಂದಿರಕ್ಕೆ ಬಂದು ಭಜನೆ ಮಾಡುತ್ತಾರೆ. ಮರುದಿನ ಬೆಳಗ್ಗೆ ಈ ಭಜನೆ ಕಾರ್ಯಕ್ರಮದ ಮಂಗಲೋತ್ಸವ ನಡೆಯುತ್ತದೆ. ನಂತರ ಅನ್ನಸಂತರ್ಪಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ದೇವರಿಗೆ ಭಕ್ತರು ಹರಕೆಯ ರೂಪದಲ್ಲಿ ತಂದೊಪ್ಪಿಸಿದ ಲಡ್ಡುಗಳನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ.
ಈ ಬಾರಿ 70,000 ಲಡ್ಡು: ಸಂತಾನ, ಉದ್ಯೋಗ, ಆರೋಗ್ಯ, ಜಾನುವಾರು, ಮನೆ ನಿರ್ಮಾಣ, ಶಿಕ್ಷಣ ಇತ್ಯಾದಿ ಭಾಗ್ಯಗಳನ್ನು ಕರುಣಿಸುವಂತೆ ಹೇಳಿಕೊಳ್ಳುವ ಈ ಲಡ್ಡು ಹರಕೆ ವರ್ಷದಿಂದ ವರ್ಷಕ್ಕೆ ಎಷ್ಟು ಪ್ರಸಿದ್ಧಿಯಾಗುತ್ತಿದೆ ಎಂದರೆ ಊರವರು ಮಾತ್ರವಲ್ಲದೆ ಹೊರಊರಿನವರು, ಹೊರ ಜಿಲ್ಲೆಯವರೂ ಇಲ್ಲಿಗೆ ಬಂದು ತಮ್ಮಾಸೆ ಈಡೇರಿದ್ದಕ್ಕೆ ತಮಗಿಷ್ಟ ಬಂದಷ್ಟು ಸಂಖ್ಯೆಯಲ್ಲಿ ಲಡ್ಡುಗಳನ್ನು ಒಪ್ಪಿಸುತ್ತಾರೆ.
ಪ್ರತಿವರ್ಷದಂತೆ ಈ ವರ್ಷ ಸುಮಾರು 70,000 ಲಡ್ಡುಗಳು ಹರಕೆಯ ರೂಪದಲ್ಲಿ ಶ್ರೀರಾಮ ದೇವರಿಗೆ ಸಲ್ಲಿಕೆಯಾಗಿದ್ದವು.
ಪ್ರಸ್ತುತ ಈ ರಾಮ ಮಂದಿರ ಗೌಡ ಸಾರಸ್ವತ ಸಮಾಜದ ಆಡಳಿತದಲ್ಲಿದ್ದರೂ ಇಲ್ಲಿ ಹರಕೆ, ಭಜನೆ, ಪೂಜೆ ಇತ್ಯಾದಿಗಳಲ್ಲಿ ಯಾವುದೇ ಜಾತಿ ವರ್ಗದ ಬೇಧವಿಲ್ಲ. ಇದು ಇಲ್ಲಿನ ಇನ್ನೊಂದು ವೈಶಿಷ್ಟವಾಗಿದೆ ಎನ್ನುತ್ತಾರೆ ಈ ಕಾರ್ಯಕ್ರಮಗಳ ಮುಂದಾಳುತ್ವ ವಹಿಸುವ ಕಾಶಿನಾಥ್ ಭಟ್ ಕಲ್ಯಾಣಪುರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

