ಅಭಿವೃದ್ಧಿಯಲ್ಲೂ, ಗೊಂದಲದಲ್ಲೂ ರಾಜ್ಯ ನಂ.1
ಸುಳ್ಯ: ಸರ್ಕಾರಕ್ಕೆ ನಿರಂತರವಾಗಿ ಎದುರಾಗಿರುವ ಕಂಟಕಗಳಿಂದ ನಾವು ಪಾಠ ಕಲಿತಿದ್ದೇವೆ. ನಾಲ್ಕು ಮುಕ್ಕಾಲು ವರ್ಷದ ಕೆಟ್ಟ ಪಾಠ ರಿಪೇರಿ ಮಾಡಿ ಮುಂದಿನ ಚುನಾವಣೆಯಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳನ್ನು ಗೆಲ್ಲಿಸಿ ರಾಜ್ಯವನ್ನು ಅಭಿವೃದ್ಧಿಯಲ್ಲಿ ಗುಜರಾತನ್ನು ಮೀರಿಸಿ ನಂ.1 ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುಳ್ಯದಲ್ಲಿ ಮಿನಿ ವಿಧಾನಸೌಧ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅಭಿವೃದ್ಧಿಯಲ್ಲೂ ಗೊಂದಲದಲ್ಲೂ ರಾಜ್ಯ ಮೊದಲನೇ ಸ್ಥಾನದಲ್ಲಿದೆ. ಆದರೆ ಗೊಂದಲ ನಿವಾರಣೆ ಶಕ್ತಿ ನಮಗೆ ಬಂದಿದೆ. ಕ್ಷೇತ್ರದ ಕಾರ್ಯಕರ್ತರು ಹೇಳುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಗೆಲ್ಲಿಸಿ ಮಾದರಿ ಆಡಳಿತ ನೀಡುತ್ತೇವೆ ಎಂದು ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ: ಕಾಂಗ್ರೆಸ್, ಜೆಡಿಎಸ್ನಿಂದ ಬಂದ ಅನೇಕರು ನಮಗೆ ಆಸ್ತಿ. ಅವರು ಮಾರ್ಗದರ್ಶನವನ್ನೂ ಮಾಡುತ್ತಾರೆ. ಆದರೆ ಮತ್ತೆ ಕೆಲವರು ಸ್ವಾರ್ಥಿಗಳಾಗಿ ಕಂಟಕ ತಂದೊಡ್ಡುತ್ತಿದ್ದಾರೆ ಎಂದ ಅವರು, ಕಾಂಗ್ರೆಸ್ ಗುಂಪುಗಾರಿಕೆಯಿಂದ ನರಳುತ್ತಿದೆ. ಕೋಲಾರದಿಂದ ತುಂಬಾ ಜನ ನಾಯಕರು ಒಗ್ಗಟ್ಟಿನ ಹೆಸರು ಹೇಳಿ ಬಸ್ ಹತ್ತಿದರು. ಆದರೆ ಆ ಬಸ್ನಲ್ಲಿ ವೀರಪ್ಪ ಮೊಯ್ಲಿ ಯಾಕೆ ಇರಲಿಲ್ಲ? ಎಸ್.ಎಂ. ಕೃಷ್ಣ ಯಾಕೆ ಇರಲಿಲ್ಲ? ದಲಿತರಿಗೆ ಕಾಂಗ್ರೆಸ್ನಲ್ಲಿ ಅನ್ಯಾಯ ಆಗಿದೆ ಎಂದು ಖರ್ಗೆಯವರೇ ಯಾಕೆ ಅಲವತ್ತುಕೊಳ್ಳುತ್ತಾರೆ ಎಂದರು.
ರಾಜ್ಯಪಾಲರಿಗೆ ಒಳ್ಳೆದಾಗುತ್ತೆ: ಗ್ರಾಮೀಣ ಪ್ರದೇಶದ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ 94 ಸಿ ಕಾನೂನಿಗೆ ತಿದ್ದುಪಡಿ ತಂದು ಸರ್ಕಾರಿ ಜಾಗದಲ್ಲಿ ವಾಸಿಸುವ ಭೂಮಿಯ ಹಕ್ಕನ್ನು ಅವರಿಗೆ ನೀಡುವ ಮಸೂದೆ ಜಾರಿಗೆ ತಂದಿದೆ. ಆದರೆ ನಗರ ಪ್ರದೇಶದಲ್ಲಿ ಇದು ಜಾರಿಗೆ ಬಂದಿಲ್ಲ. ಇದಕ್ಕೂ ಕಾನೂನು ತಿದ್ದುಪಡಿ ತಂದು ಅದು ರಾಜ್ಯಪಾಲರ ಮುಂದಿದೆ. ಅವರು ಅದನ್ನು ಪಾಸ್ ಮಾಡಿದರೆ ಅವರಿಗೂ ಅವರ ಕುಟುಂಬಕ್ಕೂ ಒಳ್ಳೆದಾಗುತ್ತದೆ ಎಂದು ಈಶ್ವರಪ್ಪ ಹೇಳಿದರು.
ಕುಮ್ಕಿ ಜಮೀನು ಹಕ್ಕು ನಿರ್ಧರಿಸುವ ದೃಷ್ಟಿಯಿಂದ ಜಂಟಿ ಸರ್ವೇ ನಡೆಸಬೇಕಿದೆ. ಅದಕ್ಕಾಗಿ 1340 ಹೊಸ ಸರ್ವೇಯರ್ಗಳನ್ನು ಸರ್ಕಾರ ನೇಮಿಸಲಿದೆ. ಲೈಸನ್ಸ್ ಹೊಂದಿದ ಸರ್ವೇಯರ್ ಗಳ ಶುಲ್ಕವನ್ನು ರು. 300 ರಿಂದ 1000ಕ್ಕೆ ಏರಿಸಲಾಗುವುದು ಎಂದು ಹೇಳಿದರು.
ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಎನ್. ಮನ್ಮಥ, ತಾ.ಪಂ. ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ನ.ಪಂ. ಅಧ್ಯಕ್ಷೆ ಸುಮತಿ ನಾರಾಯಣ ಮುಖ್ಯ ಅತಿಥಿಗಳಾಗಿದ್ದರು.
ಜಿಲ್ಲಾಧಿಕಾರಿ ಎನ್. ಪ್ರಕಾಶ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯ್ ಪ್ರಕಾಶ್, ಬಾಲಭವನ ಅಧ್ಯಕ್ಷ ಸುಲೋಚನಾ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಭಿಷೇಕ್ ಗೋಯಲ್, ಸಹಾಯಕ ಕಮಿಷನರ್ ಎಚ್. ಪ್ರಸನ್ನ, ಜಿ.ಪಂ. ಎಂಜಿನಿಯರ್ ಗೋವಿಂದ ನಾಯ್ಕ ವಿಶೇಷ ಅಹ್ವಾನಿತರಾಗಿದ್ದರು. ಶಾಸಕ ಎಸ್. ಅಂಗಾರ ಸ್ವಾಗತಿಸಿ, ಪ್ರಸ್ತಾವನೆಗೈದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

