ಕಹಿ ಘಟನೆ ಮರೆತು ಮತ್ತೆ ಮಣಿಪಾಲಕ್ಕೆ ಬರುವಳೇ?
ವಿಶೇಷ ವರದಿ
ಕ.ಪ್ರ.ವಾರ್ತೆ , ಉಡುಪಿ ಜು. 5
ಇತ್ತೀಚೆಗೆ ಮೂವರು ದುರುಳರಿಂದ ಅಮಾನವೀಯವಾಗಿ ಅತ್ಯಾಚಾರಕ್ಕೊಳಗಾದ ಮಣಿಪಾಲ ವಿವಿಯ 4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಗುರುವಾರ ಸಂಜೆ ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಗೊಂಡು ತನ್ನ ತವರೂರು ಕೇರಳಕ್ಕೆ ಹಿಂದಿರುಗಿದ್ದಾಳೆ. ಇದೀಗ ಆಕೆ ಮತ್ತೆ ಕಹಿ ಘಟನೆಯನ್ನು ಮರೆತು ಮಣಿಪಾಲಕ್ಕೆ ಆಗಮಿಸಿ, ಒಂದು ವರ್ಷ ಬಾಕಿ ಇರುವ ವೈದ್ಯ ಕೋರ್ಸ್ ಮುಗಿಸಲು ಸಾಧ್ಯವೇ ನೋಡಬೇಕು.
ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿನಿಯ ಸಹಪಾಠಿಗಳ ಪ್ರಕಾರ, ಆಕೆಗೆ ತನ್ನ ಜೀವನದಲ್ಲಿ ಎಂದೂ ಮರೆಯಲಾಗದ ಅತ್ಯಂತ ಭೀಭತ್ಸ ಘಟನೆ ನಡೆದ ಮಣಿಪಾಲದಲ್ಲಿ ಮತ್ತೆ ಶಿಕ್ಷಣ ಮುಂದುವರಿಸುವ ಇಚ್ಛೆ ಇಲ್ಲ. ಮಣಿಪಾಲದ ಸಹವಾಸವೇ ಸಾಕು ಎನ್ನುತ್ತಿದ್ದಾಳೆ. ಕಲಿಕೆಯಲ್ಲಿ ಚುರುಕಾಗಿರುವ ಆಕೆ ತನ್ನ ಕೊನೆಯ ವರ್ಷದ ಎಂಬಿಬಿಎಸ್ ಶಿಕ್ಷಣವನ್ನು ಬೇರೆ ಯಾವುದಾದರೂ ಮೆಡಿಕಲ್ ಕಾಲೇಜಿನಲ್ಲಿ ಮುಂದುವರಿಸಲು ಬಯಸಿದ್ದಾಳೆ.
ನೆರಳಿನಂತೆ ಬೆನ್ನು ಬಿಡದೇ ಕಾಡುವ ಆ ಕಹಿ ಘಟನೆಯ ನೆನಪನ್ನು ಹೊತ್ತು ಮತ್ತದೇ ಕ್ಯಾಂಪಸ್ಗೆ ಹೋಗುವುದು, ತನಗೇನೂ ಆಗಿಲ್ಲವೆಂಬಂತೆ ವರ್ತಿಸುವುದು, ಪ್ರಶ್ನಾರ್ಥಕವಾಗಿ ನೋಡುವ ಸಹಪಾಠಿಗಳನ್ನು ಎದುರಿಸುವುದು ಬಹುಶಃ ಆಕೆಗೆ ಸಾಧ್ಯವಿಲ್ಲ ಎಂದೆನ್ನಿಸಿರಬೇಕು.
ಸಹಪಾಠಿಗಳಿಂದ ಬೆಂಬಲ: ಆದರೆ ಆಕೆಯ ಸಹಪಾಠಿಗಳು ಮಾತ್ರ ಆಕೆಗೆ ಇನ್ನಿಲ್ಲದಂತೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೆ ಮಣಿಪಾಲಕ್ಕೆ ಬಂದು ಶಿಕ್ಷಣ ಮುಂದುವರಿಸಬೇಕು ಎಂದವರು ಆಕೆಯನ್ನು ಒತ್ತಾಯಿಸಿದ್ದಾರೆ. ಅತ್ಯಾಚಾರಕ್ಕೊಳಗಾಗಿರುವ ವಿದ್ಯಾರ್ಥಿನಿ ಯಾರೂ ಎಂಬುದು ಹೊರಪ್ರಪಂಚಕ್ಕೆ ಗೊತ್ತಿಲ್ಲ, ಮಾತ್ರವಲ್ಲ ಆಕೆಯ ಕಾಲೇಜಿನ ಕೆಲವೇ ಕೆಲವು ವಿದ್ಯಾರ್ಥಿಗಳನ್ನು ಬಿಟ್ಟರೇ ಬೇರೆ ಯಾರಿಗೂ ಗೊತ್ತಿಲ್ಲ. ಆದ್ದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ತಾವು ಜತೆಗಿದ್ದೇವೆ ಎಂದು ಸಹಪಾಠಿಗಳು ಆಕೆಗೆ ಧೈರ್ಯ ತುಂಬಿದ್ದಾರೆ. ಮುಂದೇನು ಮಾಡುತ್ತಾಳೆಂದು ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

