ಉಡುಪಿ

ಉಡುಪಿ: ಇಂದು ಶಾಲೆಗಳಿಗೆ ರಜೆ ಘೋಷಣೆ

Published On :

ಉಡುಪಿ:  ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರವೂ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಈ ಪ್ರಯುಕ್ತ ಮುಂಜಾಗರೂಕ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಶನಿವಾರ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
ತಗ್ಗು ಪ್ರದೇಶ, ನದಿ, ಸಮುದ್ರ ತೀರದ ಜನರು, ಮೀನುಗಾರರು, ಕೃಷಿಕರು ಮುಂಜಾಗರೂಕತೆಯಿಂದ ಇರುವಂತೆ ಕೂಡ ಜಿಲ್ಲಾಧಿಕಾರಿ ಅವರು ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಗುರುವಾರ ರಾತ್ರಿ ಜೋರಾಗಿ ಸುರಿದ ಮಳೆಯು ಶುಕ್ರವಾರವು ಮುಂದುವರಿದಿದೆ. ಶುಕ್ರವಾರ ಮುಂಜಾನೆಯ ಅಲ್ಲಲ್ಲಿ ಗಾಳಿ ಸಹಿತ ಮಳೆಯಾದ ಕಾರಣ ಮರಗಳು ಧರೆಗೆ ಉರುಳಿದೆ ಜೊತೆಗೆ ಮನೆಗಳು ಕೂಡ ಜಖಂಗೊಂಡಿವೆ. ಈ ನಡುವೆ ಸಮುದ್ರದ ಅಲೆಗಳು ಅಬ್ಬರವು ಜೋರಾಗಿದ್ದು, ಕುಂದಾಪುರ, ಉಡುಪಿ ಹಾಗೂ ಕಾರ್ಕಳ ತಾಲೂಕಿನ ಕಡಲ ತೀರದ ಸಮೀಪದ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.   ಶುಕ್ರವಾರ ಮುಂಜಾನೆ ಸುರಿದ ಗಾಳಿ ಮಳೆಯಿಂದಾಗಿ ಉಡುಪಿ ತಾಲೂಕಿನ ಅಲೆವೂರು ಗ್ರಾಮದ ಪದ್ದು ಪೂಜಾರ್ತಿ ಅವರ ಮನೆಯ ಮೇಲೆ ಹೆಬ್ಬೆಲಸು ಮರ ಉರುಳಿ ರು. 8,990 ನಷ್ಟವಾಗಿದೆ. ಪಾದೂರು ಗ್ರಾಮದ ಸುಂದರಿ ಮೂಲ್ಯ ಅವರ ಮನೆ ಮೇಲೆ ಮರ ಬಿದ್ದು ರು. 20 ಸಾವಿರ ಹಾನಿಯಾಗಿದೆ.
ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಸಂಪ ಅವರ ಮನೆಯ ಸಿಮೆಂಟ್ ಶೀಟು ಹಾರಿ ಹೋಗಿ ರು. 50 ಸಾವಿರ ನಷ್ಟ ಉಂಟಾಗಿದೆ.  ಕುಂದಾಪುರ ತಾಲೂಕಿನ ಖಾರ್ವಿಕೇರಿ ಗ್ರಾಮದ ಗಿರಿಜಾ ಅವರ ಮನೆಯ ಹೆಂಚು ಗಾಳಿ ಮಳೆಗೆ ಹಾರಿ ಹೋಗಿದ್ದು ಸುಮಾರು ರು. 20 ಸಾವಿರ ನಷ್ಟ, ಕೋಟೇಶ್ವರದ ಕೋಡಿ ಗ್ರಾಮದ ರಾಮಶೆಟ್ಟಿ ಅವರ ಮನೆಯ ಮೇಲೆ ಸಾಗುವಾನಿ ಮರ ಉರುಳಿ ರು. 10 ಸಾವಿರ ನಷ್ಟ, ಹಾರ್ದಳ್ಳಿ ಗ್ರಾಮದ ಚೀರೂ ಕುಲಾಲ್ತಿ ಅವರ ಮನೆಯು ಭಾಗಶಃ ಹಾನಿಯಾಗಿ ರು. 5 ಸಾವಿರ ನಷ್ಟ ಉಂಟಾಗಿದೆ. ಕೋಟ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಹಿರೇ ಮಹಾಲಿಂಗೇಶ್ವರ ರಥಬೀದಿ ಸಮೀಪ ಇರುವ 100 ವರ್ಷಕ್ಕೂ ಹಿಂದಿನ ಆಲದ ಮರ ಧರೆಗೆ ಉರುಳಿದೆ.
ಮಳೆ ವಿವರ: ಶುಕ್ರವಾರ ಮುಂಜಾನೆವರೆಗೂ 24 ಗಂಟೆಗಳಲ್ಲಿ 79.86 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 54.4 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 81.8 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 103.4 ಮಿ.ಮೀ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.