ನದಿ ಪಾತ್ರದಲ್ಲಿ ಪ್ರತಿವರ್ಷ 'ನೆರೆ' ಹೊರೆ
ಮೂಲ್ಕಿ: ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರತಿವರ್ಷ ಕೂಡ ಮೂಲ್ಕಿ ಸುತ್ತಮುತ್ತ ನೆರೆ ಹಾವಳಿ ಮಾಮೂಲಾಗಿದೆ.
ಕಟೀಲು, ಕೆಮ್ರಾಲ್, ಪಂಜ, ಕೊಯಿಕುಡೆ, ಶಿಬರೂರು ಕಿಲೆಂಜೂರು, ನಡುಗೋಡು, ಉಲ್ಯ, ಹಳೆಯಂಗಡಿ, ಸಸಿಹಿತ್ಲು ಪರಿಸರದಲ್ಲಿ ನಂದಿನಿ ನದಿಯು ಹರಿಯುತ್ತಿದ್ದು ಮೂಲ್ಕಿಯ ಮಾನಂಪಾಡಿ, ಚಿತ್ರಾಪು, ಬಪ್ಪನಾಡು, ಸಂಕಲಕರಿಯ ಪ್ರದೇಶಗಳಲ್ಲಿ ಶಾಂಭವಿ ನದಿಯು ಹರಿಯುತ್ತಿದ್ದು ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ನದಿಯಲ್ಲಿ ನೀರು ಉಕ್ಕಿ ನೆರೆ ಸೃಷ್ಟಿಸುತ್ತದೆ.
ಕಳೆದ ವರ್ಷ ಆಗಸ್ಟ್ನಲ್ಲಿ ಕೆಮ್ರಾಲ್ ಪಂಚಾಯ್ತಿ ವ್ಯಾಪ್ತಿಯ ಪಂಜ, ಕೊಯಿಕುಡೆಯ ಉಲ್ಯದಲ್ಲಿ ನಂದಿನಿ ನದಿಗೆ ಹಾಕಲಾಗಿದ್ದ ತಡೆಗೋಡೆ ಕುಸಿದು ಬಿದ್ದು ನೀರು ಒಳ ನುಗ್ಗಿ ಸುಮಾರು 50 ಮನೆಗಳು ಜಲಾವೃತವಾಗಿದ್ದಲ್ಲದೆ ಸುಮಾರು 300 ಎಕರೆ ಕೃಷಿ ಭೂಮಿಯಲ್ಲಿ ಫಸಲು ನೀರು ಪಾಲಾಗಿತ್ತು.
ಇನ್ನೂ ಮುಗಿಯದ ಕಾಮಗಾರಿ: ಇದರಿಂದ ಎಚ್ಚೆತ್ತುಕೊಂಡಂತೆ ಕಾಣುವ ನೀರಾವರಿ ಇಲಾಖೆ ನಂದಿನಿ ನದಿಗೆ ತಡೆಗೋಡೆ ನಿರ್ಮಿಸಲು ಹಣ ಮಂಜೂರು ಮಾಡಿದೆ. ಆದರೆ ಕಾಮಗಾರಿ ಕುಂಟತ್ತಾ ಸಾಗಿರುವುದರಿಂದ, ಮಳೆಯೂ ಶುರುವಾಗಿರುವುದರಿಂದ, ಈ ಬಾರಿಯೂ ಕಳೆದ ವರ್ಷದ ಪರಿಸ್ಥಿತಿಯೇ ಸಂಭವಿಸಬಹುದು.
ತಾತ್ಕಾಲಿಕ ತೇಪೆ: ಪ್ರತಿವರ್ಷದಂತೆ ಕಟೀಲು ದೇವಳ ಪರಿಸರದಲ್ಲಿ, ಶಿಬರೂರು, ಕಿಲೆಂಜೂರು, ನಡುಗೋಡಿನಲ್ಲಿ ನದಿ ನೀರು ಉಕ್ಕಿ ನೆರೆಯಾಗುವುದು ಮಾಮಾಲಾಗಿದ್ದು ನದಿಗೆ ಅಲ್ಲಲ್ಲಿ ನಿರ್ಮಿಸಿದ ತಡೆಗೋಡೆಗಳಲ್ಲಿ ಕಸ ತುಂಬಿ ಹಾಗೂ ಹಲಗೆಯು ಇಲ್ಲದಿರುವುದರಿಂದ ನೀರು ಒಳ ನುಗ್ಗುವ ಸಾಧ್ಯತೆಯಿದೆ.
ಈ ಬಗ್ಗೆ ಇಲಾಖೆ ಮುನ್ನೆಚರಿಕೆ ವಹಿಸಿದರೆ ನೆರೆ ತಪ್ಪಿಸಬಹುದು. ಕಟೀಲು ಸಮೀಪದ ಸಸಿಹಿತ್ಲುವಿನಲ್ಲಿ 38 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಪರಕಟ್ಟೆ ಕಿಂಡಿ ಅಣೆಕಟ್ಟಿನ ತಡೆಗೋಡೆ ಕಳೆದ ಬಾರಿ ಒಡೆದು ನೀರು ಒಳ ನುಗ್ಗಿ ಆ ಪರಿಸರದಲ್ಲಿ ತುಂಬಾ ಹಾನಿಯಾಗಿತ್ತು. ಕಟೀಲಿನಲ್ಲಿ ನದಿ ಬದಿ ಬಾವಿಯು ನೀರಿನಿಂದ ಮುಳುಗಿ ನೀರು ಸರಬರಾಜಿಗೂ ತೊಂದರೆಯಾಗಿತ್ತು. ತಾತ್ಕಾಲಿಕವಾಗಿ ತೇಪೆ ಕಾರ್ಯ ನಡೆದಿದ್ದು ಬಿರುಸಿನಲ್ಲಿ ನೀರು ಒಳನುಗ್ಗಿದಲ್ಲಿ ಈ ಬಾರಿಯು ಕೂಡ ಹಾನಿ ತಪ್ಪಿದ್ದಲ್ಲ.
ಪ್ರತಿ ವರ್ಷ ಮಳೆಗಾಲದಲ್ಲಿ ನದಿ ಸಮೀಪದ ತಗ್ಗುಪ್ರದೇಶಗಳು ಜಲಾವೃತವಾಗುವುದು ಸಾಮಾನ್ಯವಾಗಿದೆ.
ಸಂಬಂಧಪಟ್ಟ ಇಲಾಖೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸದೆ ಶಾಶ್ವತ ಯೋಜನೆ ರೂಪಿಸಿದಲ್ಲಿ ಮಾತ್ರ ಮಳೆಗಾಲದಲ್ಲಿ ಸಂಭವಿಸುವ ನಷ್ಟವನ್ನು ತಪ್ಪಿಸಬಹುದು.
ಸಸಿಹಿತ್ಲಿನಲ್ಲಿ ಪ್ರತಿ ಬಾರಿಯೂ ಸಮುದ್ರದಲ್ಲಿ ನೀರಿನ ಅಬ್ಬರದಿಂದ ಸಮುದ್ರ ಬದಿಯಲ್ಲಿನ ಮನೆಗಳಿಗೆ ಹಾಗೂ ಮರಗಿಡಗಳಿಗೆ ಹೆಚ್ಚಿನ ಹಾನಿಯಾಗುತ್ತಿದ್ದು ತಾತ್ಕಾಲಿಕವಾಗಿ ಸಮುದ್ರ ತೀರದಲ್ಲಿ ಕಲ್ಲು ಹಾಕುವ ಕಾರ್ಯ ನಡೆಯುತ್ತಿದೆ.
ಆದರೆ ಸಮುದ್ರದ ಅಲೆಗೆ ತಡೆಗೋಡೆಯು ನಿಲ್ಲದಿರುವುದರಿಂದ ಇದೊಂದು ಗಂಭೀರ ಸಮಸ್ಯೆಯಾಗಿದ್ದು ಶಾಶ್ವತ ಯೋಜನೆಯ ಅಗತ್ಯವಿದೆ.
ಸಂಕಲಕರಿಯ, ಮೂಲ್ಕಿಯ ಬಪ್ಪನಾಡು, ಚಿತ್ರಾಪು, ಕೊಳಚಿಕಂಬಳ, ಮಾನಂಪಾಡಿ ಮತ್ತು ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮಟ್ಟು ಪರಿಸರದಲ್ಲಿ ನದಿಯಲ್ಲಿ ಹೂಳು ತುಂಬಿದೆ ಹಾಗೂ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಇಲ್ಲದಿರುವುದರಿಂದ ನೀರು ಒಳನುಗ್ಗುವ ಸಾಧ್ಯತೆಯಿದೆ.
ನಗರಗಳದ್ದೂ ಇನ್ನೊಂದು ಸಮಸ್ಯೆ: ನಪಂ ಹಾಗೂ ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ನದಿ ನೀರು ಒಳನುಗ್ಗುವುದು ಸಮಸ್ಯೆಯಾದರೆ ಪಟ್ಟಣಗಳಲ್ಲಿ ಚರಂಡಿಯದ್ದೇ ಸಮಸ್ಯೆ.
ಚರಂಡಿಯಲ್ಲಿನ ಹೂಳನ್ನು ತೆಗೆಯದಿರುವುದರಿಂದ ಮತ್ತು ಒಳ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ನೀರು ತುಂಬಿ ಮನೆಯೊಳಗೆ ನುಗ್ಗುವುದು, ರಸ್ತೆ ಮೇಲೆ ಹರಿಯುವುದು ಸಾಮಾನ್ಯ.
ಈಗಾಗಲೇ ಈ ಪರಿಸರದಲ್ಲಿ ಮಳೆ ಆರಂಭವಾಗಿದ್ದರೂ ಇನ್ನೂ ನಗರ ಪಂಚಾಯಿತಿ ಆಗಲಿ, ಗ್ರಾಮ ಪಂಚಾಯಿತಿಯಾಗಲಿ ಚರಂಡಿಯ ಹೂಳು ತೆಗೆಸುವ ಕಾರ್ಯಕ್ಕೆ ಮುಂದಾಗಿಲ್ಲ.
ಪ್ರಕಾಶ್ ಮೂಲ್ಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

