16ರಂದು ರಕ್ತದಾನಿಗಳ ದಿನಾಚರಣೆ
ಉಡುಪಿ: ಇಲ್ಲಿನ ಭಾರತೀಯ ರೆಡ್ಕ್ರಾಸ್ ಸಂಸ್ಥೆ 'ವಿಶ್ವ ರಕ್ತದಾನಿಗಳ ದಿನಾಚರಣೆ- 2013' ರೆಡ್ಕ್ರಾಸ್ ಭವನದಲ್ಲಿ ಜಿಲ್ಲಾಧಿಕಾರಿ ಎಂ.ಟಿ. ರೇಜು ಅಧ್ಯಕ್ಷತೆಯಲ್ಲಿ 16 ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಜಿಲ್ಲೆಯಲ್ಲಿ 25 ಕ್ಕೂ ಹೆಚ್ಚು ಬಾರಿ ಸ್ವಯಂ ರಕ್ತದಾನ ಮಾಡಿದ ದಾನಿಗಳನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಅರ್ಹ ರಕ್ತದಾನಿಗಳು ತಾವು ರಕ್ತ ನೀಡಿರುವ ದಾಖಲೆಯೊಂದಿಗೆ 14ರೊಳಗಾಗಿ: ಕಾರ್ಯದರ್ಶಿ, ಭಾರತೀಯ ರೆಡ್ಕ್ರಾಸ್ ಭವನ, ಅಜ್ಜರಕಾಡು, ಉಡುಪಿ ಇವರಲ್ಲಿ ಹೆಸರು ನೋಂದಾಯಿಸಿ ಸಮಾರಂಭದ ದಿನದಂದು ಕ್ಲಪ್ತ ಸಮಯದಲ್ಲಿ ಹಾಜರಿದ್ದು ಸನ್ಮಾನ ಸ್ವೀಕರಿಸಬೇಕು ಎಂದು, ಸಂಸ್ಥೆಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ರಾ.ಕ್ಲೆಸ್ಟ್ ಇಗ್ನೆನಿಯಂನ ಅಂತಿಮ ಸುತ್ತಿಗೆ ಎಂಐಟಿ
ಮಣಿಪಾಲ: ಕ್ವೆಸ್ಟ್ ಗ್ಲೋಬಲ್ ಸಂಸ್ಥೆಯ ನಡೆಸಿದ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಎಂಜಿನಿಯರಿಂಗ್ ವಿನ್ಯಾಸ ಸ್ಪರ್ಧೆ 'ಕ್ವೆಸ್ಟ್ ಇಗ್ನೆನಿಯಂ 2013'ರ ಅಂತಿಮ ಸುತ್ತಿಗೆ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡ ಪ್ರವೇಶ ಪಡೆದಿದೆ. 3ನೇ ವರ್ಷದ ಈ ಸ್ಪರ್ಧೆಗೆ 1413 ಪ್ರವೇಶಗಳು ಬಂದಿವೆ. ಕ್ವೆಸ್ಟ್ ಇಗ್ನೆನಿಯಂ ಸ್ಪರ್ಧೆಗೆ ಏರೊ ಎಂಜಿನ್ಸ್, ಏರೋಸ್ಪೇಸ್ ಮತ್ತು ಡಿಫೆನ್ಸ್, ಇಂಡಸ್ಟ್ರಿಯಲ್, ಆಯಿಲ್ ಮತ್ತು ಗ್ಯಾಸ್ ಪವರ್ ಜನರೇಷನ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಎಂಬೆಡೆಡ್ ಸಿಸ್ಟಮ್ಸ್ ವಿಭಾಗಗಳಲ್ಲಿ ಪ್ರವೇಶ ಆಹ್ವಾನಿಸಲಾಗಿತ್ತು. ಈ ವರ್ಷ ಈ ಸ್ಪರ್ಧೆಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಏರೋಸ್ಪೇಸ್ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿದೆ. ಆದ್ದರಿಂದ ಈ ವರ್ಷ ವಿಜೇತರು ಏರೋಸ್ಪೇಸ್ನ ಯುನೈಟೆಡ್ ಕಿಂಗ್ಡಂ ಘಟಕಕ್ಕೆ ಪ್ರಾಯೋಜಿತ ಪ್ರವಾಸ ಮಾಡುವ ಅವಕಾಶ ಜೊತೆಗೆ ರು. 1 ಲಕ್ಷ ನಗದು ಬಹುಮಾನ ಪಡೆಯಲಿದ್ದಾರೆ. ಅಂತಿಮ ಸುತ್ತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನುರಿತ ತಜ್ಞ ತೀರ್ಪುಗಾರರ ತಂಡದ ಎದುರು ತಮ್ಮ ವಿನ್ಯಾಸವನ್ನು ಪ್ರದರ್ಶಿಸಬೇಕು. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಸ್ನ 'ಫ್ಲೆಕ್ಸೊರ' ಎಂಬ ತಂಡ 14ರಂದು ತನ್ನ ವಿನ್ಯಾಸವನ್ನು ತಜ್ಞರ ಮುಂದೆ ಪ್ರದರ್ಶಿಸಲಿದೆ.
'ಯಕ್ಷಗಾನ ಮೇಳದಿಂದ ಪರಂಪರೆ ಮುಂದುವರಿಕೆ'
ಬ್ರಹ್ಮಾವರ: ವಾಣಿಜ್ಯ ವ್ಯವಹಾರದೊಂದಿಗೆ ಸಾಂಸ್ಕೃತಿಕ ಪರಂಪರೆ ಮುಂದುವರಿಸಿಕೊಂಡು ಹೋಗುವ ಒಂದು ವ್ಯವಹಾರವಿದ್ದರೆ ಅದು ಯಕ್ಷಗಾನ ಮೇಳಗಳು ಮಾತ್ರ. ಇಂತಹ ಮೇಳಗಳನ್ನು ಪ್ರೋತ್ಸಾಹಿಸುವುದು ಅವುಗಳ ಉಳಿವಿನ ದೃಷ್ಟಿಯಿಂದ ಅಗತ್ಯವಾಗಿದೆ ಎಂದು ಯಕ್ಷಗಾನ ವಿಮರ್ಶಕ ಎಸ್.ವಿ. ಉದಯ ಕುಮಾರ ಶೆಟ್ಟಿ ಹೇಳಿದ್ದಾರೆ.
ಇತ್ತೀಚೆಗೆ ಇಲ್ಲಿನ ಸಾಸ್ತಾನದ ಗೋಳಿಗರಡಿ ಮೇಳದ ಕೊನೆಯ ದೇವರ ಸೇವೆಯಂದು ಮೇಳಕ್ಕೆ ಗೋಳಿಗರಡಿ ಕ್ಷೇತ್ರ ಮಹಾತ್ಮೆ ಪ್ರಸಂಗಕರ್ತ ಚಂದ್ರಕಾಂತ ಶೆಟ್ಟಿ ಕಾಲ್ತೋಡು ಮತ್ತು ಬ್ರಹ್ಮಭಂಟ ಶಿವರಾಯ ಪ್ರಸಂಗಕರ್ತ ನಾಗರಾಜ ಶೆಟ್ಟಿ, ಕ್ಷೇತ್ರದ ಪಾತ್ರಿ ಶಂಕರ ಪೂಜಾರಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಮೇಳದ ವ್ಯವಸ್ಥಾಪಕ ಜಿ. ವಿಠಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಶಂಕರ ಕುಲಾಲ್ ಸ್ವಾಗತಿಸಿದರು.
ಗಣಪಯ್ಯ ಆಚಾರ್ ವಂದಿಸಿದರು. ಬಳಿಕ ದೇವರ ಕೊನೆಯ ದೇವರ ಸೇವೆಯಾಟ ನೆರವೇರಿತು.
ಯೋಗ ಸ್ವಾಸ್ಥ್ಯ ಕೇಂದ್ರ ಉದ್ಘಾಟನೆ
ಉಡುಪಿ: ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥಾನದ ಸ್ವಾಮಿ ವಿವೇಕಾನಂದ ಜಿಲ್ಲಾ ಯೋಗ ಸ್ವಾಸ್ಥ್ಯ ಕೇಂದ್ರ ಉದ್ಘಾಟನೆ ಇತ್ತೀಚೆಗೆ ಉಡುಪಿಯಲ್ಲಿ ನಡೆಯಿತು. ಉಡುಪಿಯ ಶ್ರೀಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಅನಂತ ವೈದಿಕ ಕೇಂದ್ರದ ಚೇಂಪಿ ರಾಮಚಂದ್ರ ಅನಂತ ಭಟ್ ಉದ್ಘಾಟಿಸಿದರು.
ಕಾರ್ಕಳದ ವೇದವ್ಯಾಸ ಯೋಗ ಪ್ರತಿಷ್ಠಾನ ಕಾರ್ಯದರ್ಶಿ, ಯೋಗಗುರು ಡಾ.ಕೆ. ರಾಘವೇಂದ್ರ ಆರ್. ಪೈ ಮಾರ್ಗದರ್ಶನ ನೀಡಿದರು.
ನರಸಿಂಹಮೂರ್ತಿ ಆಚಾರ್ಯ, ಗೋವರ್ಧನ ಭಟ್, ರಮೇಶ ಭಟ್, ವೆಂಕಟೇಶ ಮಲ್ಯ, ಬಿ.ಸಿ. ಪೈ, ಡಾ. ಸುಮಾ ವಿ. ಮಲ್ಯ, ಹರಿದಾಸ ನಾಯಕ್, ಚಂದ್ರಕಲಾ ನಾಯಕ್ ಇದ್ದರು.
ಇದೇ ಸಂದರ್ಭ ಯೋಗಗುರು ಡಾ.ಕೆ. ರಾಘವೇಂದ್ರ ಆರ್. ಪೈ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ರಾಘವೇಂದ್ರ ಪೈ ಸ್ವಾಗತಿಸಿದರು. ರಾಮಚಂದ್ರ ಭಟ್ ನಿರೂಪಿಸಿದರು.
ಭಕ್ರೇಮಠ ಸುತ್ತುಪೌಳಿ ಶಿಲಾನ್ಯಾಸ
ಹೆಬ್ರಿ: ಸುಮಾರು ರು. 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಮುದ್ರಾಡಿ ಭಕ್ರೇಮಠ ಭದ್ರಕಾಳಿ ದುರ್ಗಾಪರಮೇಶ್ವರಿ ಸನ್ನಿಧಿಯ ಸುತ್ತುಪೌಳಿ ಶಿಲಾನ್ಯಾಸ ಸೋಮವಾರ ನಡೆಯಿತು. ಕೇಂದ್ರ ಸರ್ಕಾರದ ಆರ್ಥಿಕ ಇಲಾಖಾ ಜಂಟಿ ಕಾರ್ಯದರ್ಶಿ ಕೆ.ಪಿ. ಕೃಷ್ಣನ್ ಶಿಲಾನ್ಯಾಸ ನೆರವೇರಿಸಿ, ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾಮಗಾರಿ ಆರಂಭಕ್ಕೆ ಆರ್ಥಿಕ ಸಹಾಯ ನೀಡಿದರು. ಪಾದೂರು ಲಕ್ಷ್ಮೀನಾರಾಯಣ ತಂತ್ರಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಮಠದ ಆಡಳಿತ ಮೊಕ್ತೇಸರ ಡಾ. ಮುದ್ರಾಡಿ ವಾಸುದೇವ ಭಟ್ ಕ್ಷೇತ್ರದ ಕಾರಣಿಕ ಮತ್ತು ನೂತನವಾಗಿ ನಿರ್ಮಾಣವಾಗುವ ಸುತ್ತುಪೌಳಿಯ ವಿವರ ನೀಡಿದರು. ಜಿ.ಪಂ. ಸದಸ್ಯ ಎಂ. ಮಂಜುನಾಥ ಪೂಜಾರಿ, ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ, ವಿಷ್ಣುಮೂರ್ತಿ ಆಚಾರ್ಯ, ಲಕ್ಷ್ಮೀನಾರಾಯಣ ಭಟ್ ಇದ್ದರು.
ಪೂರ್ಣಪ್ರಜ್ಞ ಕಾಲೇಜ್ ವಿದ್ಯಾರ್ಥಿ ನಿಲಯ ಉದ್ಘಾಟನೆ
ಉಡುಪಿ: ಯುಜಿಸಿಯ ಆರ್ಥಿಕ ಅನುದಾನದಿಂದ ನಿರ್ಮಾಣಗೊಂಡ ಪೂರ್ಣಪ್ರಜ್ಞ ಕಾಲೇಜಿನ ನೂತನ ವಿದ್ಯಾರ್ಥಿ ನಿಲಯಯವನ್ನು ಸೋಮವಾರ ಇಲ್ಲಿನ ಅದಮಾರು ಮಠದ ಮಠಾಧೀಶ, ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಪ್ರಾಂಶುಪಾಲ ಸದಾಶಿವ ರಾವ್, ನ್ಯಾಯವಾದಿ ಪ್ರದೀಪ್ ಕುಮಾರ್, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಮಾಧವಿ ಭಂಡಾರಿ, ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮದಾಸ ಆರ್ಯ, ಪಿಐಎಂ ನಿರ್ದೇಶಕ ಡಾ.ಎಂ.ಆರ್. ಹೆಗಡೆ, ಅದಮಾರು ಮಠ ದಿವಾನ ವೆಂಕಟರಮಣ ಮುಚ್ಚಿಂತಾಯ, ಆಡಳಿತಾಧಿಕಾರಿ ಎಸ್.ಎಲ್. ಕಾರ್ಣಿಕ್, ಆಡಳಿತ ಮಂಡಳಿ ಸದಸ್ಯ ಕರ್ನಲ್ ರಾಮಚಂದ್ರರಾವ್, ಎಂಜಿನಿಯರ್ ರಾಘವೇಂದ್ರ ರಾವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

