ಮಾನಸಾ ವಿದ್ಯಾರ್ಥಿ ನಿಲಯಕ್ಕೆ 10 ಫ್ಯಾನ್ ಕೊಡುಗೆ
ಉಡುಪಿ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 2012- 13 ನೇ ಸಾಲಿನಲ್ಲಿ ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದ್ದು, ಬ್ಯಾಂಕಿನ ವಾರ್ಷಿಕ ಆದಾಯ ಶೇ. 1ರಷ್ಟನ್ನು ಸಾಂಸ್ಥಿಕ ಸಾಮಾಜಿಕ ಹೊಣೆ ವಿಭಾಗದ ಮೂಲಕ ಸಮಾಜಕ್ಕೆ ಸಮರ್ಪಿಸುತ್ತಿದ್ದು, ಅದರಂತೆ ಬಂಟಕಲ್ಲು ಸಮೀಪದ ಪಾಂಬೂರು ಮಾನಸಾ ಬುದ್ಧಿಮಾಂದ್ಯ ಮಕ್ಕಳ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿ ನಿಲಯಕ್ಕೆ ಹತ್ತು ಫ್ಯಾನುಗಳನ್ನು ನೀಡಲಾಯಿತು. ಬ್ಯಾಂಕಿನ ಶಿರ್ವ ಶಾಖೆಯ ಹಿರಿಯ ಪ್ರಬಂಧಕ ವಲೇರಿಯನ್ ಅರಾನ್ನಾ ಅವರು ಮಾನಸಾ ಕೇಂದ್ರದ ಅಧ್ಯಕ್ಷೆ ರೆಮಿಡಿಯಾ ಡಿಸೋಜಾ ಅವರಿಗೆ ಈ ಕೊಡುಗೆಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾನಸ ಕೇಂದ್ರದ ಉಪಾಧ್ಯಕ್ಷ ಆಲ್ಫೋನ್ಸ್ ಡಿಕೋಸ್ತಾ, ಟ್ರಸ್ಟಿಗಳಾದ ವಿಲಿಯಂ ಮಚಾದೊ, ಆಲನ್ ಡಿಸೋಜಾ, ಕೇಂದ್ರದ ವಾರ್ಡನ್ ಸಿಸ್ಟರ್ ವಾಸಂತಿ, ಸ್ಟೇಟ್ ಬ್ಯಾಂಕಿನ ಸಿಬ್ಬಂದಿ ಆಶಾ ಕೆ., ಶ್ಯಾಮ್ರಾಜ್, ರವಿ ಉಪಸ್ಥಿತರಿದ್ದರು. ರೆಮಿಡಿಯಾ ಡಿಸೋಜ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ರಾಘವೇಂದ್ರ ವಂದಿಸಿದರು.
ಪುಸ್ತಕ, ಲೇಖನ ಸಾಮಗ್ರಿ ವಿತರಣೆ
ಹೆಬ್ರಿ: ಹಿರ್ಗಾನ ಮುರೂರು ಬಿ.ಎಂ. ಶಾಲೆಯ ಮಕ್ಕಳಿಗೆ ದಾನಿಗಳಾದ ಸಿರಿಯಣ್ಣ ಶೆಟ್ಟಿ, ಅಶೋಕ ನಾಯಕ್,ಚೇತನ್ ಶೆಟ್ಟಿ, ಸಂತೋಷ ಶೆಟ್ಟಿ, ಜಾರ್ಜ್ ಮಿನೇಜಸ್, ಉದಯ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿಯವರು ಕೊಡುಗೆಯಾಗಿ ನೀಡಿದ ಲೇಖನ ಸಾಮಗ್ರಿ ಮತ್ತು ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು. ಹಿರ್ಗಾನ ಗ್ರಾಪಂ ಅಧ್ಯಕ್ಷೆ ರೇವತಿ ಶೆಟ್ಟಿ ಮಕ್ಕಳಿಗೆ ಪುಸ್ತಕ ವಿತರಿಸಿದರು. ಹರೀಶ್ಚಂದ್ರ ಕುಲಾಲ್, ಮುಖ್ಯ ಶಿಕ್ಷಕಿ ಲಿಲ್ಲಿಪಿಂಟೋ, ಉಷಾ, ಸುಂದರಿ, ಶಿಕ್ಷಕರಾದ ಅಣ್ಣಪ್ಪ ಉಪಸ್ಥಿತರಿದ್ದರು.
ಆಯುರ್ವೇದ ಕಾಲೇಜಿನಲ್ಲಿ ವಿಶ್ವ
ಪರಿಸರ ದಿನ: ವನಮಹೋತ್ಸವ
ಉಡುಪಿ: ವಿಶ್ವ ಪರಿಸರ ದಿನದ ಪ್ರಯುಕ್ತ ಇಲ್ಲಿನ ಕುತ್ಪಾಡಿಯ ಎಸ್ಡಿಎಂ ಆಯುರ್ವೇದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದ ದಿ.ಡಾ. ಸೇತು ಮಾಧವಮೂರ್ತಿ ಸಂಸ್ಮರಣಾರ್ಥ ವನಮಹೋತ್ಸವ ನಡೆಸಲಾಯಿತು. ಅರುಣಾಚಲ ಪ್ರದೇಶದ ಭಾರತೀಯ ಅರಣ್ಯ ಸಂರಕ್ಷಣಾಧಿಕಾರಿ ದಾಮೋದರ್ ಮತ್ತು ಹಿರಿಯ ವೈದ್ಯರು, ಆಯುರ್ವೇದದಲ್ಲಿ ಉಪಯೋಗಿಸಲ್ಪಡುವ ಸುಮಾರು 150ರಷ್ಟು ವನಸ್ಪತಿಗಳನ್ನು ಕಾಲೇಜು ಆವರಣದಲ್ಲಿ ನೆಟ್ಟರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಯು.ಎನ್. ಪ್ರಸಾದ್ ವಹಿಸಿದ್ದರು. ಕಾಲೇಜಿನ ದ್ರವ್ಯಗುಣ ವಿಭಾಗ ಮುಖ್ಯಸ್ಥ ಡಾ.ಟಿ. ಶ್ರೀಧರ ಬಾಯರಿ ಪರಿಸರ ದಿನಾಚರಣೆ ಬಗ್ಗೆ ಮಾಹಿತಿ ನೀಡಿದರು. ಆಸ್ಪತ್ರೆ ವೈದ್ಯಾಧಿಕಾರಿ ಡಾ.ವೈ.ಎನ್. ಶೆಟ್ಟಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಪಾಲಕ ಡಾ.ಬಿ.ಆರ್. ದೊಡ್ಡಮನಿ ಇದ್ದರು. ಡಾ. ಅರ್ಚನಾ ಪಾಣೇಕರ್ ಸ್ವಾಗತಿಸಿದರು. ಡಾ. ಶ್ರೀಲತಾ ರಾವ್ ವಂದಿಸಿದರು. ಡಾ. ಮಾನಸ, ಡಾ. ವಿಷ್ಣು ಕೆ. ಕರ್ತ ನಿರೂಪಿಸಿದರು.
ಉಡುಪಿ: ಸಂಧ್ಯಾವಂದನೆ ಶಿಬಿರ
ಉಡುಪಿ: ಇಲ್ಲಿನ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆ ಹಾಗೂ ದೇವಳದ ವತಿಯಿಂದ ಇತ್ತೀಚೆಗೆ 3 ದಿನಗಳ ಕಾಲ ಸಂಜೆ ಸಂಧ್ಯಾವಂದನೆ ಶಿಬಿರ ನಡೆಸಲಾಯಿತು. ಶಿಬಿರದಲ್ಲಿ ಊರ ಹಾಗೂ ಪರವೂರ ವಟುಗಳು ಭಾಗವಹಿಸಿದರು. ಚೇಂಪಿ ರಾಮಚಂದ್ರ ಅನಂತ ಭಟ್ಟ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಹೆಬ್ರಿ: ಅಂಚೆ ಪಾಲಕರಿಗೆ ಸನ್ಮಾನ
ಹೆಬ್ರಿ: ಹೆಬ್ರಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಉಪ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ಕಾರ್ಕಳಕ್ಕೆ ವರ್ಗಾವಣೆಗೊಂಡ ಮುನಿಯಾಲು ಜಯಂತಿ ವೈ. ನಾಯಕ್ ಅವರಿಗೆ ಸನ್ಮಾನ ಮತ್ತು ಹೆಬ್ರಿಗೆ ವರ್ಗಾವಣೆಗೊಂಡು ಬಂದ ಪಿ.ಬಿ. ನಾರಾಯಣ ಅವರಿಗೆ ಸ್ವಾಗತ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಜವಳಿ ವರ್ತಕರ ಸಂಘದ ಅಧ್ಯಕ್ಷ ಯೋಗೀಶ್ ಭಟ್ ಮತ್ತಿತರರಿದ್ದರು.
ಆಸ್ತಿ ತೆರಿಗೆ; ದಂಡ ರಹಿತ ಪಾವತಿಗೆ ಜೂ.30 ಗಡುವು
ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿರುವ ಕಟ್ಟಡಗಳ ಮತ್ತು ಕೃಷಿಯೇತರ ನಿವೇಶನಗಳ ಮಾಲೀಕರು ಮತ್ತು ಅನುಭೋಗದಾರರು 2013- 14ನೇ ಸಾಲಿನ ಆಸ್ತಿ ತೆರಿಗೆಯನ್ನು ಜೂ.30ರೊಳಗೆ ಪಾವತಿಸಿದಲ್ಲಿ ದಂಡದಿಂದ ರಿಯಾಯತಿ ನೀಡಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ತಿಳಿಸಿದ್ದಾರೆ. ಜೂ. 30ರೊಳಗೆ ಪಾವತಿಸದಿದ್ದವರು ಜುಲೈಯಿಂದ ಪ್ರತಿ ತಿಂಗಳು ತಾವು ಪಾವತಿಸಬೇಕಾದ ತೆರಿಗೆಯ ಶೇ. 2ರಷ್ಟು ದಂಡ ತೆರಬೇಕಾಗಿರುತ್ತದೆ. 2012-13ನೇ ಸಾಲಿನ ವರೆಗಿನ ತೆರಿಗೆ ಪಾವತಿಸದಿರುವವರು ಕೂಡ ಕೂಡಲೆ ಬಾಕಿ ತೆರಿಗೆಯನ್ನು ದಂಡಸಹಿತ ಚಾಲ್ತಿ ಸಾಲಿನ ತೆರಿಗೆಯನ್ನು ಜೂ.30ರೊಳಗೆ ದಂಡನೆ ರಹಿತ ಪಾವತಿಸುವಂತೆ ಅವರು ಮನವಿ ಮಾಡಿದ್ದಾರೆ.
ಯಕ್ಷಗಾನ ತರಬೇತಿಗೆ ಅರ್ಜಿ ಆಹ್ವಾನ
ಬೆಳ್ಮಣ್: ಇಲ್ಲಿನ ವಂಜಾರಕಟ್ಟೆಯಲ್ಲಿ ಯಕ್ಷಗಾನ ಕಲಾವೃಂದದ ವತಿಯಿಂದ ಯಕ್ಷಲೋಕ ನಂದಳಿಕೆ, ಯಕ್ಷ ಶಿಕ್ಷಣದ ದ್ವಿತೀಯ ಹಂತದ ಯಕ್ಷಗಾನ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಜೂ. 16ರಿಂದ ಪ್ರತಿ ಭಾನುವಾರ ಬೆಳಗ್ಗೆ 9.30ರಿಂದ 12.30ರವರೆಗೆ ನಡೆಯಲಿದೆ. ಸಮರ್ಥ ತರಬೇತುದಾರರಿಂದ ನೃತ್ಯಗಾರಿಕೆ, ಅರ್ಥಗಾರಿಕೆ, ತಾಳ- ಲಯ, ಹಾವ- ಭಾವ, ಅಭಿನಯ, ಬಣ್ಣಗಾರಿಕೆ, ಸಂವಾದ, ಶಾಸ್ತ್ರೀಯ ತರಬೇತಿ ನೀಡಿ ಪ್ರಮಾಣ ಪತ್ರ ನೀಡಲಾಗುವುದು. ತರಬೇತಿ ಪೂರ್ಣ ಉಚಿತ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ಆಚಾರ್ಯ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳಿಗೆ ಪುಸ್ತಕ ಉಚಿತ ವಿತರಣೆ
ಉಡುಪಿ: ಶಿರ್ವ ಸಮೀಪದ ಮಟ್ಟಾರು ಯುಬಿಎಂಸಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳಿಂದ ಉಚಿತ ಪುಸ್ತಕಗಳನ್ನು ಇತ್ತೀಚಿಗೆ ವಿತರಿಸಲಾಯಿತು. ಶಿರ್ವ ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕೊನಾರ್ಡ್ ಕಸ್ತಲಿನೊ, ಶಿರ್ವ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಶಿರ್ವ, ತಾ.ಪಂ. ಮಾಜಿ ಸದಸ್ಯೆ ರೀತಾ ಮತಾಯಸ್, ಶಾಲಾ ಮುಖ್ಯ ಶಿಕ್ಷಕ ಪ್ರಕಾಶ್ ಎಡ್ವರ್ಡ್ ಕೋಟ್ಯಾನ್, ಪ್ರಶಾಂತಿ ಆಚಾರ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

