ಉಡುಪಿ

ನದಿ ಮಧ್ಯೆ ಸಿಲುಕಿದ್ದ ಯುವಕನ ರಕ್ಷಣೆ

Published On :

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ- ಕುಮಾರಾಧಾರ ನದಿ ಸಂಗಮ ಸ್ಥಳದ ಮಧ್ಯ ಭಾಗದಲ್ಲಿ ಸಿಲುಕಿಕೊಂಡಿದ್ದ ಯುವಕನನ್ನು ಸುಮಾರು 4 ಗಂಟೆ ಕಾಲ ಕಾರ್ಯಾಚರಣೆ ಬಳಿಕ ದಡ ಸೇರಿಸಿದ ಘಟನೆ ಶನಿವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
 ಮುಂಜಾನೆ 7 ಗಂಟೆಗೆ ಎಂದಿನಂತೆ ನದಿ ಸಂಗಮ ತಟದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಆಗಮಿಸಿದ ಭಕ್ತರು ದೇವಾಲಯ ಸಂದರ್ಶಿಸಿ, ನದಿಯ ನೀರಿನ ಮಟ್ಟವನ್ನು ವೀಕ್ಷಿಸುತ್ತಿದ್ದರು.
ಆ ವೇಳೆ ಉಭಯ ನದಿಗಳ ಸಂಗಮ ಸ್ಥಳದ ಮಧ್ಯ ಭಾಗದಲ್ಲಿ ಮುಳುಗಡೆಯಾಗಿರುವ ಬಂಡೆಕಲ್ಲಿನ ಮೇಲೆ ಓರ್ವ ವ್ಯಕ್ತಿ ನಿಂತಿರುವುದು ಕಂಡುಬಂತು. ನೀರಿನ ಸೆಳೆತಕ್ಕೆ ಸಿಲುಕುತ್ತಿದ್ದ ಆತ ನದಿಯಲ್ಲಿದ್ದ ಪೊದೆಯನ್ನು ಹಿಡಿದು ನಿಂತಿದ್ದ.  ಕೂಡಲೇ ಪೊಲೀಸ್ ಇಲಾಖೆ, ಅಗ್ನಿಶಾಮಕದಳ ಸಿಬ್ಬಂದಿಗೆ ದೂರು ನೀಡಲಾಯಿತು.
 ಅಗ್ನಿ ಶಾಮಕ ದಳ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿದರಾದರೂ, ತುಂಬಿ ಹರಿಯುತ್ತಿದ್ದ ನೀರಿನ ವೇಗವನ್ನು ಮೀರಿ ಈಜುವ ವಿಶ್ವಾಸವಿಲ್ಲದ ಕಾರಣ ನದಿಗಿಳಿಯುವ ಧೈರ್ಯ ತೋರಲಿಲ್ಲ.
 ಈ ಸಂದರ್ಭದಲ್ಲಿ ಅಗ್ನಿಶಾಮಕದ ದಳದ ಲೈಫ್ ಜಾಕೆಟ್ ಮತ್ತು ಟ್ಯೂಬ್ ದೋಣಿಯನ್ನು ಪಡೆದುಕೊಂಡ ಕಾಸಿಂ ಯಾನೆ ಪುತ್ತುಮೋನು ಸರಳೀಕಟ್ಟೆ ಮತ್ತು ಮಹಮ್ಮದ್ ಎಂಬವರು ನದಿಗೆ ಧುಮುಕಿದರು. ರಭಸವಾಗಿ ಹರಿಯುತ್ತಿದ್ದ ಹಾಗೂ ಅಪಾಯಕಾರಿ ಸುಳಿಗಳಿದ್ದ ನದಿಯ ಮಧ್ಯ ಭಾಗದಲ್ಲಿ ಪೊದೆ ಆಶ್ರಯದಲ್ಲಿ ಬಂಡೆಕಲ್ಲಿನಲ್ಲಿ ನಿಂತಿದ್ದ ವ್ಯಕ್ತಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ತಂಪು ಪಾನೀಯ ಮಾರಾಟ ಮಾಡುವ  ಲಕ್ಷ್ಮಣ ಎಂದು ತಿಳಿಯಿತು.
ಪ್ರತಿರೋಧ: ಆತನನ್ನು ಹಿಡಿಯಲು ಮುಂದಾದ ತಂಡದ ಯತ್ನಕ್ಕೆ ಪ್ರತಿರೋಧವೊಡ್ಡಿದ ಲಕ್ಷ್ಮಣನನ್ನು ಕಾಸಿಂ ತಂಡ ಬಲವಂತವಾಗಿ ಅಗ್ನಿಶಾಮಕದ ದಳದಿಂದ ಪಡೆದುಕೊಂಡಿದ್ದ ಲೈಫ್ ಜಾಕೆಟ್ ಧರಿಸುವಂತೆ ಮಾಡಿ ಬಂಡೆಕಲ್ಲಿನಿಂದ ನೀರಿಗೆ ದೂಡಿದರು.
 ನೀರಿನಲ್ಲಿ ತೇಲುತ್ತಾ ಸಾಗಿದ ಆತನನ್ನು ಘಟನಾ ಸ್ಥಳದಿಂದ ಸುಮಾರು 2 ಕಿ.ಮೀ. ದೂರದ ಕಂಗಿನಾರು ಬೆಟ್ಟು ಎಂಬಲ್ಲಿ ದಡ ಸೇರಿಸುವಲ್ಲಿ ಕಾಸಿಂ ಮತ್ತು ಮಹಮ್ಮದ್ ಯಶಸ್ವಿಯಾದರು. ರಕ್ಷಿಸಲ್ಪಟ್ಟ ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.
ಮಾನಸಿಕ ಅಸ್ವಸ್ಥ: ಈಜುಗಾರರಿಂದ ರಕ್ಷಿಸಲ್ಪಟ್ಟ ಲಕ್ಷ್ಮಣ ಮಾನಸಿಕ ಅಸ್ವಸ್ಥನಾಗಿದ್ದು, ಪೊಲೀಸರ ವಿಚಾರಣೆ ವೇಳೆ ತಾನು ಈಜಲೆಂದು ನೀರಿಗೆ ಧುಮುಕಿದೆ. ಈಜಲಾರದೆ ನೀರಿನಲ್ಲಿ ಕೊಚ್ಚಿ ಹೋದೆ. ನದಿ ಮಧ್ಯೆ ಬಂಡೆ ಕಲ್ಲಿನಲ್ಲಿ ಪೊದೆ ಆಶ್ರಯ ಪಡೆದುಕೊಂಡು ನಿಂತೆ ಎಂದು ಒಂದು ಕ್ಷಣದಲ್ಲಿ ಹೇಳಿದರೆ, ಮರುಕ್ಷಣ ತಾನು ಮೀನು ಹಿಡಿಯಲೆಂದು
 ಗಾಳ ಹಾಕುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದೆ. ನದಿ ಮಧ್ಯೆ ಸಿಲುಕಿಕೊಂಡೆ ಎಂದು ಭಿನ್ನ ಹೇಳಿಕೆ ನೀಡಿದ್ದಾನೆ. ಈತನ ಅನಾರೋಗ್ಯಕರ ಮನೋಸ್ಥಿತಿಯನ್ನು ಕಂಡ ಪೊಲೀಸರು ಆತನಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆತನ ಸಹೋದರನಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.