ಉಡುಪಿ

ಕಡಲು ಸೇರುತ್ತಿದೆ ತ್ರಾಸಿ ಪ್ರವಾಸಿ ತಾಣ

Published On :

ಕುಂದಾಪುರ: ತ್ರಾಸಿಯಲ್ಲಿ ಸಮುದ್ರ ಆರ್ಭಟ ಹೆಚ್ಚಿದ್ದು ಅಲ್ಲಿನ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ಸಮುದ್ರ ದಂಡೆಗೆ ಹೊಂದಿಕೊಂಡು ನಿರ್ಮಿಸಲಾಗಿರುವ ಪ್ರವಾಸಿ ತಾಣ ಭಾಗಶಃ ಕಡಲಿನ ಪಾಲಾಗಿದೆ.
 ಸಮುದ್ರದ ಉಬ್ಬರದ ಅಲೆಗಳು ಒಂದೇ ಸವನೆ ಪ್ರವಾಸಿ ತಾಣದ 250 ಮೀಟರ್ ಉದ್ದದ ಕಾಲುದಾರಿಗೆ ಅಪ್ಪಳಿಸುತ್ತಿರುವುದರಿಂದ ಅದರ ತಳಪಾಯದ ಅಡಿಯ ಮರಳು ಕೊರೆತವಾಗಿ ಪ್ರವಾಸಿ ತಾಣದ ಪ್ರಮುಖ ಆಕರ್ಷಣೆಯಾದ ನಡೆದಾರಿ ಉದ್ದಕ್ಕೂ ಕಡಲು ಸೇರುವ ಅಪಾಯ ಸೃಷ್ಟಿಯಾಗಿದೆ.
 ಒಂದು ಸ್ಥಳದಲ್ಲಿ ಕಡಲು ಮುಂದೆ ಬಂದ ಪರಿಣಾಮವಾಗಿ ದಂಡೆ ಕುಸಿದು, ಅದರ ಮೇಲಿನ ಮೇಲಿನ ಸೀಟು ಮತ್ತು ಒಂದು ತೆಂಗಿನ ಮರ ಕಡಲಿನ ಒಡಲು ಸೇರಿದೆ. ಕಳೆದ ನಾಲ್ಕು ದಿನಗಳಿಂದ ಇಲ್ಲಿ ಕಡಲಿನ ಅಲೆಗಳು ರೌದ್ರಾವತಾರ ತಾಳಿವೆ. ಭರತದ ಸಮಯದಲ್ಲಿ ಅಲೆಗಳು ಪ್ರವಾಸಿ ತಾಣದ ಎತ್ತರದ ದಂಡೆಗೆ ಬಡಿದು ಅಲ್ಲಿನ ರಕ್ಷಣೆಗಾಗಿ ಕಟ್ಟಿದ್ದ ಕಲ್ಲು ಮತ್ತು ನಡೆದಾರಿಯನ್ನು ಕೊರೆಯುತ್ತಿವೆ. ಮಂಗಳವಾರ ಸಂಜೆ ಹೊತ್ತಿಗೆ ದಂಡೆಯುದ್ದಕ್ಕೂ ಕುಸಿತ ಉಂಟಾಗಿದೆ.
 ಇದೇ ಸ್ಥಿತಿ ಇನ್ನೂ ಒಂದೆರಡು ದಿನ ಮುಂದುವರಿದರೆ ಪ್ರವಾಸಿ ತಾಣದ ಬಹುಭಾಗ ಕಡಲಿನ ಪಾಲಾಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಲಿದೆ.
ಶಾಸಕ ಭೇಟಿ: ಮಂಗಳವಾರ ರಾತ್ರಿ ಶಾಸಕ ಕೆ. ಗೋಪಾಲ ಪೂಜಾರಿ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
 ಜಿಲ್ಲಾಧಿಕಾರಿ ನಿರ್ದೇಶನದಂತೆ ಬುಧವಾರ ನಿರ್ಮಿತಿ ಕೇಂದ್ರದ ಅಧಿಕಾರಿ ದಿನೇಶ್, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಥೋಡ್ ಇಲ್ಲಿಗೆ ಬಂದು ಪರಿಹಾರ ಕ್ರಮದ ಬಗ್ಗೆ ಚರ್ಚಿಸಿದರು. ಕಡಲತೀರ ರಕ್ಷಣಾ ಪೊಲೀಸ್ ನಿರೀಕ್ಷಕ ಕೆ. ತಾರಾನಾಥ, ಗಂಗೊಳ್ಳಿ ಠಾಣಾಧಿಕಾರಿ ಎಸ್. ಸಂಪತ್ ಕುಮಾರ್ ಮತ್ತು ಸಿಬ್ಬಂದಿ, ಗಂಗೊಳ್ಳಿಯ 24್ಗ7 ಹೆಲ್ಪ್‌ಲೈನ್‌ನ ಮಹಮದ್ ಇಬ್ರಾಹಿಂ ಸ್ಥಳದಲ್ಲಿದ್ದು, ಇಲ್ಲಿಗೆ ಬರುವ ಪ್ರವಾಸಿಗಳು ಯಾವುದೇ ಅಪಾಯಕ್ಕೆ ಸಿಲುಕದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವರು. ಜಿಲ್ಲಾ ಪಂಚಾಯಿತಿ ಸದಸ್ಯ ಅನಂತ ಮೊವಾಡಿ, ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಸದಸ್ಯ ಎಸ್. ಜನಾರ್ದನ, ತ್ರಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ನಾಯಕ್, ವಂಡ್ಸೆ ಕಂದಾಯ ನಿರೀಕ್ಷಕ ಶಂಕರ ಶೆಟ್ಟಿ, ಬೈಂದೂರು ಕಂದಾಯ ನಿರೀಕ್ಷಕ ರವಿ, ಗ್ರಾಮ ಕರಣಿಕ ಗೌಡಪ್ಪ ಗೌಡ ಸ್ಥಳಕ್ಕೆ ಭೇಟಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.