ಹೈಟೆಕ್ ಮೀನು ಮಾರುಕಟ್ಟೆ ಕಾಮಗಾರಿ ಆರಂಭಿಸಿ
ಉಡುಪಿ: ಇಲ್ಲಿನ ನಗರಸಭೆ ವ್ಯಾಪ್ತಿಯ ಹೈಟೆಕ್ ಮೀನು ಮಾರುಕಟ್ಟೆ ಕಾಮಗಾರಿ ಶೀಘ್ರ ಪ್ರಾರಂಭಿಸುವಂತೆ ಒತ್ತಾಯಿಸಿ ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್ ನೇತೃತ್ವದ ನಿಯೋಗ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಇತ್ತೀಚಿಗೆ ಮನವಿ ಸಲ್ಲಿಸಿತು.
ನಗರಸಭಾ ವ್ಯಾಪ್ತಿಯ ಪ್ರಮುಖ ಮೀನು ಮಾರುಕಟ್ಟೆ ಕಾಮಗಾರಿ ಆರಂಭದಲ್ಲೇ ಸ್ಥಗಿತಗೊಂಡಿದ್ದು, ಬಳಿಕ ಬೀಡಿನಗುಡ್ಡೆಯಲ್ಲಿ ತಾತ್ಕಾಲಿಕ ಶೆಡ್ಡಿಗೆ ಸ್ಥಳಾಂತರಗೊಂಡಿರುವ ಮೀನು ಮಾರಾಟಗಾರರು ಇದೀಗ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಮೀನುಗಾರರ ಅಭಿವೃದ್ಧಿ ಮಂಡಳಿ ಮತ್ತು ರಾಜ್ಯ ಸರ್ಕಾರ ಸಹಯೋಗದೊಂದಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ಕೈಗೆತ್ತಿಕೊಂಡಿದ್ದು, 2012 ಫೆಬ್ರವರಿಯಲ್ಲಿ ಶಿಲಾನ್ಯಾಸ ನಡೆಸಿತ್ತು. ವರ್ಷ ಕಳೆದರೂ ಈತನಕ ಯಾವುದೇ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತಿಲ್ಲ. ಕಳೆದ 1 ವರ್ಷದಿಂದ ಬೀಡಿನಗುಡ್ಡೆಯಲ್ಲಿ ತಾತ್ಕಾಲಿಕ ಮೀನು ಮಾರುಕಟ್ಟೆಯಲ್ಲಿ ಅವ್ಯವಸ್ಥೆಯ ನಡುವೆ ಮಹಿಳೆಯರು ಹೀನಾಯ ಸ್ಥಿತಿಯಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದಾರೆ ಎಂದು ಮಹಿಳಾ ಮೀನುಗಾರರು ಶಾಸಕರ ಗಮನ ಸೆಳೆದರು.
ಮನವಿ ಸ್ವೀಕರಿಸಿ ಮಾತನಾಡಿದ ಪ್ರಮೋದ್ ಮಧ್ವರಾಜ್, ನಗರ ಮೀನು ಮಾರುಕಟ್ಟೆ ಕಾಮಗಾರಿಗೆ ತುರ್ತು ಚಾಲನೆ ನೀಡುವ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳ ಜೊತೆಗೆ ಚರ್ಚಿಸಲಾಗಿದ್ದು, ರು. 2 ಕೋಟಿ ವೆಚ್ಚದಲ್ಲಿ ಮೀನು ಮಾರುಕಟ್ಟೆ ನಿರ್ಮಾಣಗೊಳ್ಳಲಿದೆ. ಕೇಂದ್ರ ಸರ್ಕಾರದ ನಿಯಮದಂತೆ ಹೈಟೆಕ್ ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ಮೀನು ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಉಡುಪಿ ಮತ್ತು ದ.ಕ. ಜಿಲ್ಲಾ ಮೀನು ಮಾರಾಟ ಒಕ್ಕೂಟ ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ, ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ಉಪಾಧ್ಯಕ್ಷೆ ಅಪ್ಪಿ ಎಂ. ಬಂಗೇರ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಆನಂದ್, ಜತೆ ಕಾರ್ಯದರ್ಶಿ ಜಯಂತಿ ಗುರದಾಸ್ ಬಂಗೇರ, ಸಂಘದ ಸಲಹೆಗಾರರಾದ ರಮೇಶ್ ಕಿದಿಯೂರು, ಸುರೇಶ್ ಬಿ. ಕುಂದರ್, ಜಿಪಂ ಸದಸ್ಯ ದಿವಾಕರ್ ಕುಂದರ್, ನಗರಸಭಾ ಸದಸ್ಯ ನಾರಾಯಣ್ ಪಿ. ಕುಂದರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

