ಬಂಟ್ವಾಳ; ವೈಭವದ 'ಶ್ರೀನಿವಾಸ ಕಲ್ಯಾಣ ಮಹೋತ್ಸವ' ಸಂಪನ್ನ
ಬಂಟ್ವಾಳ: ಲೋಕಕಲ್ಯಾಣ ಮತ್ತು ಈ ಭಾಗದ ಸಮಸ್ತ ಜನತೆಗೆ ಸುಖ, ಶಾಂತಿ, ಸುಭಿಕ್ಷೆ, ಸಮೃದ್ಧಿ ಪ್ರಾರ್ಥಿಸಲು 'ಶ್ರೀನಿವಾಸ-ಪದ್ಮಾವತಿ ಕಲ್ಯಾಣಮಹೋತ್ಸವ' ಬಂಟ್ವಾಳದ ಬಸ್ತಿಪಡ್ಪು ಶ್ರೀನಿವಾಸ ನಗರದಲ್ಲಿ ಭಾನುವಾರ ಸಂಜೆ ಅದ್ದೂರಿಯಾಗಿ ಸಂಪನ್ನಗೊಂಡಿತು.
ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರನ್ನು ತಿರುಪತಿಯಿಂದಲೇ ಬರಮಾಡಿಸಿಕೊಂಡು ಅಲ್ಲಿಂದಲೇ ಬಂದಿದ್ದ ಪುರೋಹಿತ ಆನಂದ ತೀರ್ಥ ಆಚಾರ್ಯ ಪಗಡಾಲರ ನೇತೃತ್ವದ ವೈದಿಕರ ಉಸ್ತುವಾರಿಯಲ್ಲಿ ಕಲ್ಯಾಣಮಹೋತ್ಸವ ಸಂಪ್ರದಾಯಬದ್ಧವಾಗಿ ನೆರವೇರಿತು.
ಭೂ ಪ್ರಾರ್ಥನೆಯೊಂದಿಗೆ ಆರಂಭವಾಗಿ ಲಗ್ನಪ್ರಕ್ರಿಯೆ, ರಕಾಬಂಧನ, ಅಗ್ನಿ ಪ್ರತಿಷ್ಠಾಪನೆ, ಮಹಾಸಂಕಲ್ಪ, ಮಾಲಾರ್ಪಣೆ, ನೈವೇದ್ಯ ಅರ್ಪಣೆಗಳ ಮೂಲಕ ಮುಂದುವರಿದು ಕೊನೆಗೆ ನವದಂಪತಿಗೆ ಅಕ್ಷತಾರ್ಪಣೆಯೂ ನಡೆಯಿತು.
ಗೋವಿಂದ ಭಜನೆ: ಈ ಸಂದರ್ಭ ಗೋವಿಂದ..... ಹರಿಗೋವಿಂದ..... ವೆಂಕಟರಮಣ ಗೋವಿಂದ ಭಜನೆಯನ್ನು ಭಕ್ತರು ಸಾಮೂಹಿಕವಾಗಿ ಹಾಡಿ ಭಕ್ತಿಯ ಪರಾಕಾಷ್ಠೆ ಮೆರೆದರು.
ತಿರುಪತಿ ತಿರುಮಲ ದೇವಸ್ಥಾನ ಹಾಗೂ ಬಂಟ್ವಾಳ ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಈ ಸಮಾರಂಭ ನಡೆಯಿತು. ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಘಟಕ ಸಹಕಾರ ನೀಡಿತ್ತು.
ಸಮಿತಿ ಗೌರವಾಧ್ಯಕ್ಷ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಅಧ್ಯಕ್ಷ ರಾಜರಾಮ ನಾಯಕ್, ಪ್ರ.ಕಾರ್ಯದರ್ಶಿ ರಮೇಶ್ ಉಪಾಧ್ಯಾಯ ಸಹಿತ ಹಲವು ಪ್ರಮುಖರು ಹಾಜರಿದ್ದರು.
ಲಡ್ಡುಪ್ರಸಾದ: ಕೊನೆಗೆ ಶ್ರೀನಿವಾಸ ದೇವರಿಗೆ ಅರ್ಪಿಸಿದ , ತಿರುಪತಿಯಿಂದಲೇ ತರಲಾದ 10ಸಾವಿರ ಲಡ್ಡುಗಳನ್ನು ಪದ್ಮಾವತಿ ದೇವಿಗೆ ಸಮರ್ಪಿಸಿದ ಬಳೆ, ಕುಂಕುಮ, ಕನಕಾಭಿಷೇಕಕ್ಕೆ ಅರ್ಪಿಸಲಾದ ಕಾಣಿಕೆಯನ್ನು ಭಕ್ತರಿಗೆ ವಿತರಿಸಲಾಯಿತು.
ವೈಭವಪೂರ್ಣ ದಿಬ್ಬಣ: ಶನಿವಾರ ರಾತ್ರಿ ಬಂಟ್ವಾಳ ಪುರ ಪ್ರವೇಶಗೈದ ಶ್ರೀದೇವರ ಭಂಡಾರ ಸಹಿತ ಕಾಣಿಕೆ ಹುಂಡಿಯನ್ನು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಳದ ವಠಾದಲ್ಲಿ ಇರಿಸಲಾಗಿತ್ತು, ಭಾನುವಾರ ಮಧ್ಯಾಹ್ನ ಇಲ್ಲಿಂದ ತೆರೆದ ವಾಹನದಲ್ಲಿ ಶ್ರೀ ದೇವರನ್ನು ಬೈಪಾಸ್, ಭಂಡಾರಿಬೆಟ್ಟು ಮೂಲಕ ಬಿ.ಸಿ.ರೋಡಿನ ಪದ್ಮನಾಭ ನಗರಕ್ಕೆ ತರಲಾಯಿತು. ಬಳಿಕ ಇಲ್ಲಿಂದ ವಿವಿಧ ಭಜನೆ, ವಾದ್ಯಗೋಷ್ಠಿ, ಕಲಾತಂಡಗಳೊಂದಿಗೆ ವೈಭವಪೂರ್ಣ ದಿಬ್ಬಣದ ಮೆರವಣಿಗೆಯೂ ಶ್ರೀನಿವಾಸ ನಗರದ ಕಲ್ಯಾಣೋತ್ಸವದ ಮಂಟಪಕ್ಕೆ ತಂದು ಪ್ರತಿಷ್ಠಾಪಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

