ಉಡುಪಿ

ಸೇಡು ಮರೆಯಿರಿ, ಉತ್ತಮ ಆಡಳಿತ ಮೆರೆಯಿರಿ

Published On :

ಉಡುಪಿ: ಉಡುಪಿ ನಗರಸಭೆಯಲ್ಲಿ ಸದ್ಯದಲ್ಲಿಯೇ ಹೊಸ ಆಡಳಿತ ಆರಂಭವಾಗಲಿದೆ. ಕಳೆದ ಬಾರಿ ಆಡಳಿತ ನಡೆಸಿದ್ದ ಬಿಜೆಪಿ ಈ ಬಾರಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿದೆ. ಕಳೆದ ವರ್ಷ ವಿಪಕ್ಷದಲ್ಲಿ ಕುಳಿತಿದ್ದ ಕಾಂಗ್ರೆಸ್ ಕೈಗೆ ಅಧಿಕಾರ ಸಿಕ್ಕಿದೆ.
ಬರೇ ಇಷ್ಟೇ ಆಗಿದ್ದರೆ ನಗರಸಭೆಯಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಿ, ಕಾರ್ಯಕಲಾಪಗಳು ಸಹಜವಾಗಿ ನಡೆದು ಉಡುಪಿಯ ಜನತೆಗೆ ಒಳ್ಳೆಯ ಆಡಳಿತ ದೊರೆಯಬಹುದೇನೋ...
ಆದರೆ ಕಳೆದ 5 ವರ್ಷಗಳಲ್ಲಿ ನಗರಸಭೆಯ ಮಾಸಿಕಸಭೆಯ ಕಾರ್ಯಕಲಾಪವನ್ನು ವೀಕ್ಷಿಸಿದವರಿಗೆ, ಈ ಬಾರಿ ಕಾಂಗ್ರೆಸ್‌ನ ಸದಸ್ಯರು ಬಿಜೆಪಿ ಸದಸ್ಯರ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟರೆ, ನಗರಸಭೆ ಸಭೆಗಳು 'ರಣರಂಗ'ವಾಗುವ ಬಗ್ಗೆ ಸಂಶಯವೇ ಇಲ್ಲ.
ಇಂಥ ಲೇವಡಿ ಮಾತು ನಿಲ್ಲುವವೇ?; ಕಳೆದ ಬಾರಿ ನಗರಸಭೆಗೆ ಪ್ರಥಮ ಬಾರಿಗೆ ಬಿಜೆಪಿಯಿಂದ ಆರಿಸಿ ಬಂದ ಸದಸ್ಯರೊಬ್ಬರು ತಾನು ನಗರಸಭೆಯ ಸಾಮಾನ್ಯ ಸಭೆಯಲ್ಲಿದ್ದೇನೆ ಎಂಬೂದನ್ನೂ ಮರೆತು, ಕನಿಷ್ಠ ಎದ್ದು ಕೂಡ ನಿಲ್ಲದೆ, ಕುಳಿತಲ್ಲಿಂದಲೇ ವಿಪಕ್ಷದ ಸದಸ್ಯರಿಗೆ 'ಏಯ್ ಕುಲ್ಲುಂಬೆ' ಎಂದು ತುಳುವಿನಲ್ಲಿ ಹೀಯಾಳಿಸುತ್ತಿದ್ದುದು, ಅದಕ್ಕೆ ಅವರ ಸಮಾನಮನಸ್ಕ ಕೆಲವು ಸದಸ್ಯರು ಮೇಜುತಟ್ಟಿ ಪ್ರೋತ್ಸಾಹಿಸುತ್ತಿದ್ದುದು ಸಾಮಾನ್ಯವಾಗಿತ್ತು.
ಬಿಜೆಪಿಯ ಹಿರಿಯ ಸದಸ್ಯೆಯೊಬ್ಬರಂತೂ ನಗರಸಭೆಯ ಪಕ್ಷೇತರ ಏಕೈಕ ಸದಸ್ಯರೊಬ್ಬರ ಬಗ್ಗೆ, 'ಅವರ ಕೂದಲನ್ನು ನೋಡಿದರೆ ಅವರು ಗಂಡಸರೋ ಹೆಂಗಸರೋ ಎಂದು ಸಂಶಯ ಬರುತ್ತದೆ...'- ಎಂದು ಹೇಳಿ ತಮ್ಮದೇ ಪಕ್ಷದ ಇತರ ಸದಸ್ಯರೂ ಮುಜುಗರ ಪಡುವಂತೆ ಮಾಡಿದ್ದರು.
ಆಡಳಿತ ಪಕ್ಷದ ಕೆಲವು ಯುವ ಸದಸ್ಯರ ಬಗ್ಗೆ ಅದೇ ಪಕ್ಷದ ಹಿರಿಯ ಸದಸ್ಯರಿಗೆ ತೀವ್ರ ಅಸಮಾಧಾನವಿತ್ತು, ಆದರೂ ಏನೂ ಹೇಳುವುದಕ್ಕಾಗದೇ ಸುಮ್ಮನಿರುತ್ತಿದ್ದರು. ಸಭೆ ಮುಗಿದ ಮೇಲೆ ಪತ್ರಕರ್ತರ ಮುಂದೆ ಅನಧಿಕೃತವಾಗಿ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದರು.
ಸೇಡು ಬಿಟ್ಟು ಉತ್ತಮ ಆಡಳಿತ ನೀಡುವುದೇ ಕಾಂಗ್ರೆಸ್: ಬೆರಳೆಣಿಕೆಯ ವಿಪಕ್ಷ ಸದಸ್ಯರ ಮೇಲೆ ಆಡಳಿತ ಪಕ್ಷದ ಸದಸ್ಯರು ಮುಗಿಬೀಳುತ್ತಿದ್ದ ರೀತಿ, ಏಕವಚನ ಪ್ರಯೋಗ, ಬೇಕಾದಾಗಲೆಲ್ಲಾ ಆಡ್ವಾಣಿ, ಯಡಿಯೂರಪ್ಪ, ಡಾ. ಆಚಾರ್ಯರ ಹೆಸರನ್ನು ಬಳಸುತ್ತಿದ್ದವರು ಆಸ್ಕರ್, ಎಸ್.ಎಂ. ಕೃಷ್ಣ ಅವರ ಹೆಸರು ಕೇಳಿದಾಗಲೆಲ್ಲಾ ಸಿಡಿಮಿಡಿಗೊಳ್ಳುತ್ತಿದ್ದ ರೀತಿ ನಗರಸಭೆಯಲ್ಲಿ ಪ್ರಜಾಪ್ರಭುತ್ವದ ಕೊರತೆಯನ್ನು ತೋರಿಸುತ್ತಿತ್ತು.
ವಿಪಕ್ಷ ಕಾಂಗ್ರೆಸ್‌ನಲ್ಲಿದ್ದ ಬೆರಳೆಣಿಕೆಯ ಸದಸ್ಯರಂತೂ ಸಭೆಗೆ ಮೊದಲು  ಪ್ರಿ ಕೌನ್ಸಿಲ್ ಸಭೆ ನಡೆಸದೆ, ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಯಾವುದೇ ಸಿದ್ಧತೆಗಳನ್ನು ನಡೆಸದೆ ನೇರವಾಗಿ ಸಭೆಗೆ ಬಂದು ಆಡಳಿತ ಪಕ್ಷದವರಿಗೆ ಕೋಲು ಕೊಟ್ಟು ಪೆಟ್ಟು ತಿನ್ನವುದಂತೂ ಮಾಮೂಲಿಯಾಗಿತ್ತು.
 ಕಳೆದ ಬಾರಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದ ಬಿಜೆಪಿ ಈ ಬಾರಿ ಮದುಡಿದ ತಾವರೆಯಾಗಿ ವಿಪಕ್ಷ ಸ್ಥಾನದಲ್ಲಿ ಕೂರುತ್ತಿದೆ. ಅಸಹಾಯಕವಾಗಿ ವಿಪಕ್ಷ ಸ್ಥಾನದಲ್ಲಿ ಕುಳಿತಿರುತ್ತಿದ್ದ ಕಾಂಗ್ರೆಸ್ ಶಕ್ತಿ ತುಂಬಿಕೊಂಡು ಆಡಳಿತ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲಿದೆ. ಅಧಿಕಾರ ಇದೇ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರ ಮೇಲೆ ಸೇಡು ತೀರಿಸಿಕೊಳ್ಳ ಹೊರಟರೆ ನಗರಸಭೆಯ ಮಾಸಿಕ ಸಭೆಗಳು ಮತ್ತೆ ತಮ್ಮ ಘನತೆಯನ್ನು ಕಳೆದುಕೊಳ್ಳಲಿವೆ, ಪ್ರಜಾಪ್ರಭುತ್ವ ಅರ್ಥ ಕಳೆದುಕೊಳ್ಳಲಿದೆ. ಹೀಗಾಗದಿರಲಿ ಎನ್ನುವುದೇ 'ಕನ್ನಡಪ್ರಭ'ದ ಕಾಳಜಿ.
ನಾಲಗೆಯೇ ಹೊರಳದ  
ಸದಸ್ಯರಿದ್ದಾರೆ..!
ಕಳೆದ ನಗರಸಭೆಯಲ್ಲಿ ಮಾತು ಬಾರದ ಸದಸ್ಯರ ಸಂಖ್ಯೆ ದೊಡ್ಡದಿತ್ತು. ಅಂದರೆ ಕಳೆದ ಬಾರಿ ನಗರಸಭೆಗೆ ಆರಿಸಿ ಬಂದಿದ್ದ ಕೆಲವು ಮಂದಿ ಸದಸ್ಯರ ಸ್ವರವಾದರೂ ಹೇಗಿದೆ ಎಂಬದನ್ನು ಕೇಳುವ ಅವಕಾಶ 5 ವರ್ಷಗಳಲ್ಲಿ ಒಂದೇ ಒಂದು ಮಾಸಿಕ ಸಭೆಯಲ್ಲಿ ಒದಗಿ ಬಂದಿರಲಿಲ್ಲ, ಯಾಕೆಂದರೆ ಅವರು ಒಮ್ಮೆಯೂ ತುಟಿ ಬಿಟ್ಟಿರಲಿಲ್ಲ.
ಇನ್ನು ಕೆಲವು ಮಂದಿ ಮಹಿಳಾ ಸದಸ್ಯರಂತೂ ಹಿಂದೆ ಕುಳಿತು ಹರಟೆ ಹೊಡೆಯುವುದು ಅಥವಾ ಮೇಜು ಕುಟ್ಟಿ ಹಾಸ್ಯ ಮಾಡಲು ಎಂದು ತಿಳಿದುಕೊಂಡಂತಿತ್ತು. ಅಂತಹ ಅನೇಕ ಮಂದಿ ಸದಸ್ಯರು ಈ ಬಾರಿ ಅರ್ಹವಾಗಿಯೇ ಸೋತಿದ್ದಾರೆ, ಆದರೂ ಕೆಲವು ಮಂದಿ ಗೆದ್ದಿದ್ದಾರೆ.
ತಾವು ಸದಸ್ಯರಾಗಿ ಆಯ್ಕೆಯಾಗಿರುವುದು ತಮ್ಮ ವಾರ್ಡಿನ ಜನತೆಯ ಸಮಸ್ಯೆಗಳನ್ನು ನಗರಸಭೆಯಲ್ಲಿ ಚರ್ಚಿಸಲು ಎಂಬ ಪ್ರಜ್ಞೆ ಕೂಡ ಅವರಲ್ಲಿ ಇಲ್ಲ ಎನ್ನುವುದೇ ದುರಂತ.
ಮರಳಿ ಬಾರವೇ ಆ ದಿನಗಳು...
ತಮ್ಮ ವಿಚಾರವನ್ನು ತರ್ಕವಾಗಿ ಮಂಡಿಸುತ್ತಿದ್ದ ಡಾ.ವಿ.ಎಸ್. ಆಚಾರ್ಯ, ಎದುರು ಪಕ್ಷದವರಿಂದಲೂ ಗೌರವ ಪಡೆಯುತ್ತಿದ್ದ ಡಾ. ರಮಾನಂದ ಭಟ್, ಶುದ್ಧ ಕನ್ನಡದಲ್ಲಿ ಮಾತನಾಡುತ್ತಿದ್ದ ಗುಜ್ಜಾಡಿ ಪ್ರಭಾಕರ ನಾಯಕ್ ಮುಂತಾದವರು ಸದಸ್ಯರಾಗಿ ನಗರಸಭೆಯ ಸದನದ ಗೌರವವನ್ನು ಹೆಚ್ಚಿಸಿದವರು. ಅವರು ಬಳಸುತ್ತಿದ್ದ ಸದನ, ಕಾರ್ಯಕಲಾಪ, ಸದನದ ಬಾವಿ, ಪ್ರಶ್ನೋತ್ತರ ಸಮಯ, ಚುಕ್ಕಿಪ್ರಶ್ನೆ, ಗಮನ ಸೆಳೆವ ಸೂಚನೆ, ಗೊತ್ತುವಳಿ ಇತ್ಯಾದಿ ಸಾಂವಿಧಾನಿಕ ಶಬ್ದಗಳು ಅವರ ಕಾಲಕ್ಕೆ ಮುಗಿದು ಹೋಗಿವೆ. ಇಂದು ಆರಿಸಿ ಬರುತ್ತಿರುವ ಯುವ ಸದಸ್ಯರಿಗೆ ಈ ಶಬ್ದಗಳು ಬಿಡಿ, ಕನಿಷ್ಠ ಎದ್ದು ನಿಂತು ಮಾತನಾಡುವ ಶಿಷ್ಟಾಚಾರ ಕೂಡ ಇಲ್ಲ. ನಗರಸಭೆಯ ಸದಸ್ಯರಿಗೆ ಕನಿಷ್ಠ ಶಿಷ್ಟಾಚಾರ ಪಾಲಿಸುವ ತುರ್ತು ತರಬೇತಿಯ ಅಗತ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.