ಉಡುಪಿ

ಮದ್ಯಪಾನ ನಿರ್ಮೂಲನೆಗೆ ಜನಜಾಗೃತಿ ಪರಿಹಾರ: ಕೋಟ

Published On :

ಉಡುಪಿ: ಮದ್ಯಪಾನ ಸಮಸ್ಯೆಯನ್ನು ಪರಿಹಾರ ಮಾಡುವುದು ಸರ್ಕಾರದ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಇದಕ್ಕೆ ಜನ ಜಾಗೃತಿಯೊಂದೇ ಪರಿಹಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಸಹಾಯಕತೆ ವ್ಯಕ್ತಪಡಿಸಿದರು.
 ಅವರು ಶುಕ್ರವಾರ ಪುರಭವನದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ವತಿಯಿಂದ ಉಡುಪಿಯ ಖ್ಯಾತ ಮನೋವೈದ್ಯ ಡಾ.ಪಿ. ವೆಂಕಟ್ರಾಯ ಭಂಡಾರಿ ಅವರಿಗೆ ಸಂಯಮ ಪ್ರಶಸ್ತಿ - 2013 ಪ್ರದಾನ ಸಮಾರಂಭದ ಅಧ್ಯಕ್ಷೆ ವಹಿಸಿ ಮಾತನಾಡಿದರು.  ರಾಜ್ಯ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ ವಾರ್ಷಿಕ ರು. 16 ರಿಂದ 17 ಸಾವಿರ ಕೋಟಿಗಳವರೆಗೆ ಆದಾಯವಿದೆ. ಆದರೆ, ಈ ಆದಾಯವೆಲ್ಲಾ ಮದ್ಯಪಾನದಿಂದ ಆಗುವ ಅನಾಹುತಗಳನ್ನು ತಡೆಗಟ್ಟುವುದಕ್ಕೆ ಗೃಹ ಇಲಾಖೆಯ ಮೂಲಕ ವ್ಯಯವಾಗುತ್ತದೆ ಎಂದು ಹೇಳಿದರು.  ಮದ್ಯಪಾನದಿಂದ ಆಗುವ ಅನಾಹುತಗಳನ್ನು ಹೊರತುಪಡಿಸಿದರೆ, ಇತರ ಅನಾಹುತಗಳನ್ನು ನಿರ್ವಹಿಸಲು ರಾಜ್ಯದಲ್ಲಿ ಈಗಿರುವ ಪೊಲೀಸ್ ಬಲದ ಶೇ. 15ರಷ್ಟು ಇದ್ದರೆ ಸಾಕಾಗುತ್ತದೆ ಎಂಬ ಅಚ್ಚರಿಯ ವಿಷಯ ಬಹಿರಂಗಗೊಳಿಸಿದರು.
 ಪ್ರಶಸ್ತಿ ಪ್ರದಾನ ಮಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಕುಡುಕರು ಮೂಲತಃ ಸಮಾಜಘಾತಕರಾಗಿರುವುದಿಲ್ಲ. ಅವರು ಸೇವಿಸುವ ಮದ್ಯ ಅವರನ್ನು ಕೊಲೆಗಾರರು, ಅತ್ಯಾಚಾರಿಗಳು, ಹಿಂಸಾ ಪ್ರಿಯರನ್ನಾಗಿ ಮಾಡುತ್ತದೆ ಎಂದರು.  ಪ್ರಶಸ್ತಿ ಸ್ವೀಕರಿಸಿದ ಡಾ. ಭಂಡಾರಿ ಅವರು, ಪ್ರಶಸ್ತಿಯೊಂದಿಗೆ ದೊರೆತ ರು. 1 ಲಕ್ಷವನ್ನು ತಾವು ಕೆಲಸ ಮಾಡುವ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಡವರಿಗಾಗಿ ಮೀಸಲಿಡುವುದಾಗಿ ಘೋಷಿಸಿದರು.
ಕರಪತ್ರ ಬಿಡುಗಡೆ: ಸಂಯಮ ಮಂಡಳಿಯು ಹೊರತಂದಿರುವ ಮದ್ಯಪಾನ ಜಾಗೃತಿ ಕರಪತ್ರಗಳನ್ನು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಎಸ್.ಟಿ. ರಮೇಶ್ ಬಿಡುಗಡೆ ಮಾಡಿದರು.  ಹಿರಿಯ ಪತ್ರಕರ್ತ ಎಂ.ವಿ. ಕಾಮತ್, 3ನೇ ಹಣಕಾಸು ಆಯೋಗ ಶಿಫಾರಸು ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಎ.ಜಿ. ಕೊಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ತೆಂಗು ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ, ರಾಜ್ಯ ಜನಜಾಗೃತಿ ಸಮಿತಿ ಅಧ್ಯಕ್ಷ ದೇವದಾಸ ಹೆಬ್ಬಾರ್, ತಾ.ಪಂ. ಅಧ್ಯಕ್ಷೆ ಗೌರಿ ಪೂಜಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಶರ್ಮ, ಧ.ಗ್ರಾ.ಯೋ. ಉಡುಪಿ ಜಿಲ್ಲಾ ನಿರ್ದೇಶಕ ದುಗ್ಗೇಗೌಡ ಇದ್ದರು.
 ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯದರ್ಶಿ ಎಚ್.ಬಿ. ದಿನೇಶ್ ಸ್ವಾಗತಿಸಿ, ಸಂಧ್ಯಾ ಕುಮಾರಿ ಸಂಯೋಜಿಸಿದರು. ಜಿಲ್ಲಾ ವಾರ್ತಾಧಿಕಾರಿ ಎಂ. ಜುಂಜಣ್ಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.