ದಕ್ಷಿಣ ಕನ್ನಡ ಜಿಲ್ಲೆಗೆ ದಾಖಲೆ ಸಚಿವರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಮೊತ್ತ ಮೊದಲ ಬಾರಿಗೆ ಎಂಬಂತೆ 3 ಸಚಿವ ಸ್ಥಾನ ದಕ್ಕಿದೆ. ಉಡುಪಿಗೆ ಸಚಿವ ಸ್ಥಾನ ದಕ್ಕಿದ್ದರೂ ಸಚಿವರ ವಾಸಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು! ಒಟ್ಟಾರೆ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಭರ್ಜರಿ ಸಚಿವರನ್ನು ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಕೊಡುಗೆ ನೀಡಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಬಿ.ರಮಾನಾಥ ರೈ, ಮಂಗಳೂರು ಶಾಸಕ ಯು.ಟಿ. ಖಾದರ್, ಮೂಡುಬಿದರೆ ಶಾಸಕ ಅಭಯಚಂದ್ರ ಜೈನ್ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಪುತ್ತೂರಿನ ಮಾಜಿ ಶಾಸಕರೂ ಆಗಿರುವ ಕಾಪು ಶಾಸಕ ವಿನಯಕುಮಾರ್ ಸೊರಕೆ ಸಚಿವ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ನಾಲ್ವರು ಸಚಿವರು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿರುವುದು ವಿಶೇಷ.
ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಶಕ್ತಿ ಕೇಂದ್ರ ಆಗಿದ್ದರೂ ಬಿಜೆಪಿ ಸರ್ಕಾರದ ಅಂತಿಮ ಸಚಿವ ಸಂಪುಟದಲ್ಲಿ ಜಿಲ್ಲೆಯ ಯಾರೊಬ್ಬ ಶಾಸಕರಿಗೂ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ.
ನೀಲಿ ಚಿತ್ರ ಹಗರಣ ವಿವಾದದಿಂದ ಸಚಿವರಾಗಿದ್ದ ಕೃಷ್ಣ ಜೆ.ಪಾಲೆಮಾರ್ ರಾಜಿನಾಮೆ ನೀಡಿದ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಸಿ.ಟಿ. ರವಿ ಅವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದರು.
ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಂಟ್ವಾಳದಿಂದ ಬಿಜೆಪಿಯಲ್ಲಿ ಗೆದ್ದಿದ್ದ ಬಿ.ನಾಗರಾಜ ಶೆಟ್ಟಿ ಸಚಿವರಾಗಿದ್ದರು.
ಕಾರ್ಕಳ ಕ್ಷೇತ್ರದಿಂದ ಗೆದ್ದ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದಾಗ ದಕ್ಷಿಣ ಕನ್ನಡ ಜಿಲ್ಲೆ (ಉಡುಪಿ ಮತ್ತು ದಕ್ಷಿಣಕನ್ನಡ ವಿಭಜನೆ ಮುನ್ನ)ಗೆ ಮುಖ್ಯಮಂತ್ರಿ ಮಾತ್ರವಲ್ಲದೆ 4 ಸಚಿವ ಸ್ಥಾನ ಲಭಿಸಿದ್ದು ಇದುವರೆಗಿನ ದಾಖಲೆ. ಆದರೆ ವಿಭಜನೆಯಾದ ಬಳಿಕ ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಮೂರು ಸಚಿವ ಸ್ಥಾನ ಲಭಿಸಿರುವುದು ದಾಖಲೆ.
1972-78ರವರೆಗೆ ದೇವರಾಜ ಅರಸ್ ಸರ್ಕಾರದಲ್ಲಿ ಕಾರ್ಕಳ ಕ್ಷೇತ್ರದ ವೀರಪ್ಪ ಮೊಯ್ಲಿ, ಸುರತ್ಕಲ್ ಕ್ಷೇತ್ರದ ಸುಬ್ಬಯ್ಯ ಶೆಟ್ಟಿ, 1978ರಿಂದ 83ರವರೆಗೆ ದೇವರಾಜ ಅರಸ್ ಮತ್ತು ಗುಂಡುರಾವ್ ಮುಖ್ಯಮಂತ್ರಿ ಸಚಿವ ಸಂಪುಟದಲ್ಲಿ ಬೆಳ್ತಂಗಡಿ ಗಂಗಾಧರ ಗೌಡ, ಸುಬ್ಬಯ್ಯ ಶೆಟ್ಟಿ, ವೀರಪ್ಪ ಮೊಯ್ಲಿಗೆ ಸಚಿವ ಸ್ಥಾನ ಲಭಿಸಿತ್ತು.
83ರರಿಂದ 85ರವರೆಗೆ ಜನತಾ ಪಕ್ಷ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಸಂಪುಟದಲ್ಲಿ ಅಮರನಾಥ ಶೆಟ್ಟಿ ಸಚಿವರಾಗಿದ್ದರು. 1989-91 ವೀರೇಂದ್ರ ಪಾಟೀಲ್, 91-92 ಬಂಗಾರಪ್ಪ ಮುಖ್ಯಮತ್ರಿ ಸಂಪುಟದಲ್ಲಿ ಮಂಗಳೂರಿನ ಬ್ಲೇಸಿಯಸ್ ಡಿಸೋಜ, ಕಾರ್ಕಳದ ವೀರಪ್ಪ ಮೊಯ್ಲಿ ಸಚಿವರಾಗಿದ್ದರು.
1992-94 ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಬಂಟ್ವಾಳ ರಮಾನಾಥ ರೈ, ಕಾಪು ವಸಂತ ವಿ. ಸಾಲ್ಯಾನ್, ಉಡುಪಿ ಮನೋರಮಾ ಮಧ್ವರಾಜ್, ಮಂಗಳೂರಿನ ಬ್ಲೇಸಿಯಸ್ ಡಿಸೋಜ ಸಚಿವರಾಗಿದ್ದರು.
1994-99 ಜೆಡಿಎಸ್ ಸರ್ಕಾರಲ್ಲಿ ಅಮರನಾಥ ಶೆಟ್ಟಿ, ಉಡುಪಿಯಲ್ಲಿ ಬ್ರಹ್ಮಾವರ ಜಯಪ್ರಕಾಶ್ ಹೆಗ್ಡೆ, 1999-2004ರವರೆಗೆ ಎಸ್ಎಂ ಕೃಷ್ಣ ಅವಧಿಯಲ್ಲಿ ರಮಾನಾಥ ರೈ ಸಚಿವರಾಗಿದ್ದರು.
-ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

