ಉಡುಪಿ

ಕಳಂಕಿತರಿಗೆ ಟಿಕೆಟ್ ನೀಡಿದ್ದು ಯಾಕೆ?

Published On :

ಸುಳ್ಯ: ಮಂತ್ರಿಮಂಡಲದಲ್ಲಿ ಕಳಂಕಿತರನ್ನು ಸೇರಿಸಿಕೊಂಡಿಲ್ಲ ಎಂದು ಪ್ರಚಾರ ಪಡೆಯುತ್ತಿರುವ ಸಿದ್ದರಾಮಯ್ಯ, ಕಳಂಕಿತರಿಗೆ ವಿಧಾನಸಭಾ ಟಿಕೆಟ್ ನೀಡಿ ಅವರು ಶಾಸಕರಾಗುವಂತೆ ಮಾಡಿದ್ದು ಯಾಕೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪ್ರಶ್ನಿಸಿದ್ದಾರೆ.
 ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಮತ ಪಡೆದು ಅಧಿಕಾರಕ್ಕೆ ಬರಲು ಕಳಂಕಿತರು ಬೇಕೆಂದಾದರೆ ಮಂತ್ರಿಮಂಡಲದಲ್ಲಿ ಕಳಂಕಿತರಿಲ್ಲ ಎನ್ನುವ ವಾದ ಅರ್ಥಹೀನ. ಕಳಂಕಿತರೆಂದಾದರೆ ಡಿ.ಕೆ. ಶಿವಕುಮಾರ್, ರೋಶನ್ ಬೇಗ್, ರಮೇಶ್ ಕುಮಾರ್, ಅನಿಲ್ ಲಾಡ್ ಅಂಥವರಿಗೆ ವಿಧಾನಸಭಾ ಟಿಕೆಟ್ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದರು.
ಹಾಸ್ಯಾಸ್ಪದ: ಕಳಂಕಿತರೆಂದು ಗುರುತಿಸಿಕೊಂಡಿದ್ದ ಮಾಲೂರು ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅಂಥವರಿಗೆ ನಮ್ಮ ಪಕ್ಷ ಟಿಕೆಟ್ ನೀಡಿಲ್ಲ. ಈಗ ನಮ್ಮಿಂದ ತಿರಸ್ಕೃತಗೊಂಡವರನ್ನು ಪಕ್ಷಕ್ಕೆ ಸೇರಿಸಿ ನಾವು ಕಳಂಕಿತರಲ್ಲ ಎಂದು ಹೇಳುವುದು ಹಾಸ್ಯಾಸ್ಪದ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿ ಕೇಂದ್ರ ಸರ್ಕಾರದ ಭ್ರಷ್ಟ ಇಮೇಜನ್ನು ಹೋಗಲಾಡಿಸಲು ಮಾಡುವ ನಾಟಕ ಇದು ಎಂದು ಡೀವಿ ವ್ಯಾಖ್ಯಾನಿಸಿದರು.
ಭವಿಷ್ಯವಿಲ್ಲ: ಕಾಂಗ್ರೆಸ್‌ನೊಳಗೆ ಈಗಲೇ ಎಲ್ಲವೂ ಸರಿಯಿಲ್ಲ. ಮಂತ್ರಿ ಸ್ಥಾನ ಸಿಗದ ಡಿ.ಕೆ.ಶಿವಕುಮಾರ್, ಅನಿಲ್ ಲಾಡ್ ಸುಮ್ಮನೆ ಕೂರುವವರಲ್ಲ. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ನಡುವೆ ಈಗಾಗಲೇ ಗುದ್ದಾಟ ಆರಂಭವಾಗಿದೆ. ಹೀಗಾಗಿ ಈ ಸರ್ಕಾರಕ್ಕೆ ದೊಡ್ಡ ಭವಿಷ್ಯವೇನೂ ಇಲ್ಲ. ಆದರೂ ನಾವು ಅವರ ಕಾರ್ಯಶೈಲಿ ನೋಡಿ ನಂತರ ಪ್ರತಿಕ್ರಿಯಿಸುತ್ತೇವೆ ಎಂದು ಹೇಳಿದರು.
ಲಿಕ್ಕರ್ ಲಾಬಿಯಲ್ಲಿ ಸಿದ್ದರಾಮಯ್ಯ: ರಾಜ್ಯದಲ್ಲಿ ನೀರಿನ ಸಮಸ್ಯೆ ಇದೆ. ಆದರೆ ನೀರಿನ ಸಮಸ್ಯೆ ಬಗ್ಗೆ ಮಾತನಾಡಬೇಕಾದ ಸಂದರ್ಭದಲ್ಲಿ ಅಗ್ಗದ ಮದ್ಯದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಲಿಕ್ಕರ್ ಲಾಬಿಗೆ ಮಣಿದಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಕಚೇರಿಯಲ್ಲಿ ಕುಳಿತು ಅಧಿಕಾರಿಗಳ ಸಭೆ ನಡೆಸಿದಾಕ್ಷಣ ಜನರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಸದಾನಂದ ಗೌಡ ಟೀಕಿಸಿದರು.
ಬಿಜೆಪಿ ಸದೆಬಡಿಯುವ ತಂತ್ರ: ಡೀವಿ
ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಕರಾವಳಿಗೆ ಹೆಚ್ಚು ಮಂತ್ರಿ ಸ್ಥಾನ ನೀಡಿರುವುದನ್ನು ಸ್ವಾಗತಿಸಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಆದರೆ ಇದು ಬಿಜೆಪಿಯನ್ನು ಸದೆಬಡಿಯಲು ಮಾಡುವ, ಬಿಜೆಪಿ  ಮೇಲೆ ಸವಾರಿ ಮಾಡುವ ತಂತ್ರವಾದರೆ ಅದನ್ನು ಸಮರ್ಥವಾಗಿ ಎದುರಿಸಲಾಗುವುದು ಎಂದು ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಅತ್ಯಂತ ಬಲಿಷ್ಠವಾಗಿದೆ ಮತ್ತು ಯಾವುದೇ ಹಂತದಲ್ಲಿ ಇವರು ಸೋಲಿನಿಂದ ಫೀನಿಕ್ಸ್ ಹಕ್ಕಿಯಂತೆ ಎದ್ದು ನಿಲ್ಲಬಲ್ಲರು ಎಂಬುದು ಕಾಂಗ್ರೆಸ್‌ನವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿಯೇ ಅವರು ನಮ್ಮ ಮೇಲೆ ಸವಾರಿ ಮಾಡಲು ಹೆಚ್ಚಿನ ಮಂತ್ರಿ ಸ್ಥಾನ ನೀಡಿರುವ ಸಂಶಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.