ಪರ್ಯಾಯಕ್ಕೆ ಸಜ್ಜು: 23ರಂದು ಮುಖಮಂಟಪ ಉದ್ಘಾಟನೆ
ಉಡುಪಿ: 2014 ಜ.18ರಂದು ಉಡುಪಿ ಕೃಷ್ಣಮಠದ ಪರ್ಯಾಯ ಆಡಳಿತ - ಪೂಜಾಧಿಕಾರ ಸ್ವೀಕರಿಸಲಿರುವ ಕಾಣಿಯೂರು ಮಠದ ಪರ್ಯಾಯೋತ್ಸವಕ್ಕೆ ಮಠವು ಸಕಲ ರೀತಿಯಲ್ಲಿ ಸಿದ್ಧಗೊಳ್ಳುತ್ತಿದೆ. ಇದರ ಅಂಗವಾಗಿ ಮಠದ ಮುಂಭಾಗದ ಮುಖಮಂಟಪವನ್ನು ಸುಂದರವಾಗಿ ನವೀಕರಿಸಲಾಗಿದೆ. ಅದರ ಉದ್ಘಾಟನಾ ಸಮಾರಂಭ ಮೇ 23ರಂದು ಸಂಜೆ ನಡೆಯಲಿದೆ.
ಈ ಬಗ್ಗೆ ಕೃಷ್ಣಾಪುರ ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಅಂದು ಶ್ರೀಮಠದ ಉಪಾಸ್ಯ ದೇವರಾದ ಯೋಗಾರೂಢ ನರಸಿಂಹ ದೇವರ ಜಯಂತಿ ಕೂಡ ಆಗಿದ್ದು, ಆ ಪ್ರಯುಕ್ತ ಬೆಳಗ್ಗೆ ಪ್ರತಿವರ್ಷದಂತೆ ಶ್ರೀಮಠದಲ್ಲಿ ಶ್ರೀನರಸಿಂಹ ಜಯಂತ್ಯುತ್ಸವ ನಡೆಯಲಿದೆ. ಈ ಬಗ್ಗೆ ಬೆಳಗ್ಗೆ 8 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5.50ಕ್ಕೆ ಮಠದ ನೂತನ ಮುಖಮಂಟಪವನ್ನು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಉದ್ಘಾಟಿಸಲಿದ್ದಾರೆ. ಕೃಷ್ಣಮಠದ ಹಾಲಿ ಪರ್ಯಾಯ ಪೀಠಾಧೀಶರಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕಾಣಿಯೂರು ಶ್ರೀಗಳು ಆಶೀರ್ವಚನ ನೀಡಲಿದ್ದಾರೆ.
ಇದೇ ಸಂದರ್ಭ ಕಾಣಿಯೂರು ಶ್ರೀಗಳು ತಮ್ಮ ಗುರುಗಳ ಹೆಸರಿನಲ್ಲಿ ಆರಂಭಿಸಿರುವ ಶ್ರೀವಿದ್ಯಾಸಮುದ್ರ ತೀರ್ಥ ಪ್ರಶಸ್ತಿಯನ್ನು ಪ್ರಥಮವಾಗಿ ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂಚಾರ್ಯಾರಿಗೆ ಮತ್ತು ನರಸಿಂಹಾನುಗ್ರಹ ಪ್ರಶಸ್ತಿಯನ್ನು ಸಮಾಜ ಸೇವಕ ಮಂಗಳೂರಿನ ಶ್ರೀನಿವಾಸ್ ಗ್ರೂಫ್ ಆಫ್ ಕಾಲೇಜಸ್ ಅಧ್ಯಕ್ಷ ರಾಘವೇಂದ್ರ ರಾವ್ ಅವರಿಗೆ ನೀಡಿ ಗೌರವಿಸಲಾಗುತ್ತದೆ.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ನಿವೃತ್ತ ಅಡ್ವೋಕೇಟ್ ಜನರಲ್ ಕೆ.ಎಂ. ನಟರಾಜ್ ಮತ್ತು ಹೊರನಾಡು ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಷಿ, ಶಾಸಕರು, ಸಂಸದರು ಭಾಗವಹಿಸುತ್ತಾರೆ.
ಆಧುನಿಕ- ಪಾರಂಪರಿಕ ಶೈಲಿಯ ಮುಖಮಂಟಪ
ಸೋದೆ ಮಠದ ಒಳಾಂಗಣವು ಅತ್ಯಂತ ಸುಂದರ ಕಾಷ್ಠಶಿಲ್ಪಗಳಿಂದ ಕೂಡಿದ್ದು, ಅದೇ ಶೈಲಿಯಲ್ಲಿ ಮಠದ ಮುಖಮಂಟಪವನ್ನು ಕಾಂಕ್ರೀಟ್ನಲ್ಲಿ ಆದರೆ ಪ್ರಾಚೀನ ಪಾರಂಪರಿಕ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಕೃಷ್ಣಮಠದ ಅನೇಕ ನಿರ್ಮಾಣಗಳನ್ನು ಮಾಡಿರುವ ಆದ್ರ ಮೂಲದ ಕುಮಾರಸ್ವಾಮಿ ಎಂಬವರು ಇದರ ವಾಸ್ತುವನ್ನು ರಚಿಸಿದ್ದಾರೆ. ಈ ಮುಖಮಂಟಪ ನಿರ್ಮಾಣಕ್ಕೆ ಸುಮಾರು ರು. 45 ಲಕ್ಷ ವೆಚ್ಚ ತಗುಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

