ಬಲಿಗಾಗಿ ಕಾಯುತ್ತಿದೆ ಕಲ್ಲುಕ್ವಾರಿ, ಕುಜೆ ಹೊಂಡ..
ಉಡುಪಿ: ಇನ್ನೇನೂ ಮಳೆಗಾಲ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಜೊತೆಗೆ ಉಡುಪಿ ಜಿಲ್ಲೆಯಾದ್ಯಂತ ಅಮಾಯಕ ಮಕ್ಕಳನ್ನು ಬಲಿ ತೆಗೆದುಕೊಳ್ಳಲು ಕಾಯುತ್ತಿರುವ ಕಲ್ಲು ಕ್ವಾರಿ, ಕುಜೆ (ಆವೆ ಮಣ್ಣು ತೆಗೆದುದರಿಂದ ಉಂಟಾಗುವ ಹೊಂಡ) ಹೊಂಡಗಳ ಬಗ್ಗೆ ಆತಂಕವೂ ಆರಂಭವಾಗಿದೆ...
ಕಳೆದ ವರ್ಷ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಇಂತಹ ಹೊಂಡಗಳಿಗೆ ಬಲಿಯಾದ ಮಕ್ಕಳ ಸಂಖ್ಯೆ 15. ಜೊತೆಗೆ ನೆರೆ ನೀರು, ನದಿ ನೀರಿನಲ್ಲಿ ಕೊಚ್ಚಿ ಹೋದವರು 7 ಮಂದಿ. ಒಟ್ಟು 22 ಮಂದಿಯನ್ನು ಜಿಲ್ಲೆಯಲ್ಲಿ ಹಿಂದಿನ ಮಳೆಗಾಲ ಬಲಿ ತೆಗೆದುಕೊಂಡಿತ್ತು
ಈ ವರ್ಷವೂ ಇಂತಹ ಮಾರಣ ಹೋಮ ನಡೆಯಲಿದೆಯೇ ಎಂದು ಯೋಚಿಸುವಾಗಲೇ ಮೈ ನಡುಕ ಆರಂಭವಾಗುತ್ತದೆ. ಕಾರಣ ಮಳೆಗಾಲದಲ್ಲಿಯೇ ಈ ದುರಂತಗಳೆಲ್ಲವೂ ಸಂಭವಿಸಿದ್ದರೂ, ಅದಕ್ಕೆ ಮಳೆಯನ್ನು ಬೈಯ್ಯುವಂತಿಲ್ಲ. ಯಾಕೆಂದರೇ ಇವುಗಳೆಲ್ಲವೂ ಪ್ರಕೃತಿ ವಿಕೋಪ ದುರಂತಗಳಲ್ಲ. ಬದಲಿಗೆ ಹೆಚ್ಚಿನವು ಮಾನವ ನಿರ್ಮಿತ ದುರಂತಗಳಾಗಿವೆ.
ಈ ಮಕ್ಕಳು ಬಲಿಯಾದ ಬಹುತೇಕ ಹೊಂಡಗಳು ಆವೆ ಮಣ್ಣು ತೆಗೆದು ಆಗಿರುವ ಭಾರಿ ಗಾತ್ರದ ಕೆರೆಗಳಾಗಿವೆ. ಕುಂದಾಪುರ, ಬ್ರಹ್ಮಾವರ ಕಡೆಗಳಲ್ಲಿ ಹಣದಾಸೆಗೆ ಭೂ ಮಾಲೀಕರು ಮಣ್ಣು ತೆಗೆಯುವುದಕ್ಕೆ ತಮ್ಮ ಗದ್ದೆಗಳನ್ನು ಗುತ್ತಿಗೆದಾರರಿಗೆ ನೀಡುತ್ತಾರೆ. ಗುತ್ತಿಗೆದಾರರು ಮಣ್ಣು ತೆಗೆದು ಸಾಗಿಸುತ್ತಾರೆ, ಆಗ ಸೃಷ್ಟಿಯಾಗುವ ಹೊಂಡದಲ್ಲಿ ಮಳೆಯಿಂದ ನೀರು ತುಂಬಿಕೊಳ್ಳುತ್ತವೆ. ಇವುಗಳಲ್ಲಿ ಈಜಲೆಂದೋ, ಮೀನು ಹಿಡಿಯಲೆಂದು ಹೋಗುವ ಅಮಾಯಕ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಾರೆ.
ಜೊತೆಗೆ ಕಾರ್ಕಳ ತಾಲೂಕಿನಲ್ಲಿ ಭಾರಿ ದೊಡ್ಡ ಉದ್ಯಮವಾಗಿರುವ ಕಲ್ಲು ಗಣಿಗಾರಿಕೆಯ ಹೊಂಡಗಳು ಕೂಡ ಪ್ರತಿ ವರ್ಷ ಮಳೆಗಾಲದಲ್ಲಿ ನೀರು ತುಂಬಿಕೊಂಡು ಅನೇಕ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತವೆ. ಇದಕ್ಕೆ ಯಾರು ಹೊಣೆ ಎಂದು ಕೇಳಿದರೆ ಭೂಮಾಲೀಕ ಗುತ್ತಿಗೆದಾರರನ್ನು ತೋರಿಸುತ್ತಾರೆ, ಗುತ್ತಿಗೆದಾರರು ಭೂಮಾಲೀಕರನ್ನು ತೋರಿಸುತ್ತಾರೆ. ಅಧಿಕಾರಿಗಳು ಪ್ರಕೃತಿ ವಿಕೋಪ ಎಂದು ಸುಳ್ಳು ವರದಿ ತಯಾರಿಸಿ, ಮೃತರ ಮನೆಯವರಿಗೆ ಒಂದಷ್ಟು ಪರಿಹಾರ ನೀಡಿ ಸುಮ್ಮನಾಗುತ್ತಾರೆ.
ಈ ಬಗ್ಗೆ ಕಳೆದ ವರ್ಷ ಜಿಲ್ಲಾಡಳಿತ ಇಂತಹ ಹೊಂಡಗಳ ಸುತ್ತ ಬೇಲಿ ಹಾಕುವಂತೆ ಆದೇಶಿಸಿದ್ದರೂ, ಅದು ಅಂತಹ ಪರಿಣಾಮವನ್ನೇನೂ ಬೀರಿರಲಿಲ್ಲ. ಆದ್ದರಿಂದ ಹೆತ್ತವರೇ ತಮ್ಮ ಮಕ್ಕಳ ಬಗ್ಗೆ ಜಾಗರೂಕರಾಗಿರುವುದೊಂದೇ ದಾರಿಯಾಗಿದೆ.
ಕಳೆದ ವರ್ಷದ ಸರಣಿ ದುರಂತ
ಕಳೆದ ವರ್ಷ ಮಳೆಗಾಲದ ಮೊದಲಲ್ಲಿಯೇ ಅಂದರೇ ಜುಲೈ 1ರಂದು ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಗ್ರಾಮದಲ್ಲಿ ತೆರೆದ ಹೊಂಡಕ್ಕೆ ಬಿದ್ದು 3 ಮಕ್ಕಳು ಮೃತಪಡುವುದರೊಂದಿಗೆ ಈ ದುರಂತದ ಸರಣಿ ಆರಂಭವಾಗಿತ್ತು. ಉಡುಪಿ ತಾಲೂಕಿನ ಮಣಿಪಾಲ ಮಣ್ಣಪಳ್ಳದಲ್ಲಿ 2 ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಕಾರ್ಕಳ ತಾಲೂಕಿನ ಕೂಡ್ಲು ಗ್ರಾಮದಲ್ಲಿ ತಂದೆ ಮತ್ತು 4 ಮಂದಿ ಮಕ್ಕಳು, ಕೋಟದಲ್ಲಿ 2 ಮಕ್ಕಳು, ಹಟ್ಟಿಯಂಗಡಿ, ಸಾಯ್ಬ್ರಕಟ್ಟೆ, ಕಂಡ್ಲೂರು, ಬೇಳೂರು ಗ್ರಾಮಗಳಲ್ಲಿ 4 ಮಂದಿ ಬಾಲಕ - ಬಾಲಕಿಯರು ಮಾನವ ನಿರ್ಮಿತ ಹೊಂಡಗಳಿಗೆ ಬಲಿಯಾಗಿದ್ದರು. ಅದೇ ರೀತಿ ಸೂಡಾ ಗ್ರಾಮದಲ್ಲಿ ನೀರು ತುಂಬಿದ್ದ ಕಲ್ಲು ಕ್ವಾರಿಗೆ ಸ್ನಾನಕ್ಕೆಂದು ಇಳಿದಿದ್ದ 3 ಮಂದಿ ಯುವತಿಯರು ಮೇಲೆ ಬರಲಾರದೇ ಮುಳುಗಿ ಮೃತಪಟ್ಟಿದ್ದರು.
-ಸುಭಾಶ್ಚಂದ್ರ ಎಸ್. ವಾಗ್ಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

