ಉಡುಪಿ

ಸಂಪಾದನೆಯ ಒಂದಂಶ ನಿಧಿ ರೂಪದಲ್ಲಿಡಿ: ವಿಶ್ವವಲ್ಲಭ ಶ್ರೀ

Published On :

ಉಡುಪಿ: ಹಿಂದೆ ಕಲೋಪಾಸಕರು ಎಂದರೇ ಕಲೆಯನ್ನು ನಂಬಿ ಹೊಟ್ಟೆ ತುಂಬದೇ ಉಪವಾಸ ಇರುವವರು ಎಂದೇ ಲೇವಡಿ ಮಾಡುವುದಿತ್ತು. ಆದರೆ, ಇಂದು ಯಕ್ಷಗಾನ ಕಲಾವಿದರಿಗೆ ಮನ್ನಣೆ, ಪ್ರೋತ್ಸಾಹದ ಜೊತೆಗೆ ವಿವಿಧ ರೀತಿಯ ಸೌಲಭ್ಯಗಳೂ ಕೂಡ ಸಿಗುತ್ತಿದೆ. ಹೀಗಿರುವಾಗ ಕಲಾವಿದರು ತಮ್ಮ ಸಂಪಾದನೆಯ ಒಂದಂಶವನ್ನು ನಿಧಿಯ ರೂಪದಲ್ಲಿ ತೆಗೆದಿಟ್ಟರೇ ಮುಂದೆ ಅದು ಅವರಿಗೆ ಉಪಯೋಗವಾಗುತ್ತದೆ ಎಂದು ಪರ್ಯಾಯ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ರಾಜಾಂಗಣದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ವತಿಯ ಯಕ್ಷನಿಧಿಯ ಕಲಾವಿದರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್ ಮಾತನಾಡಿ, ಯಕ್ಷಗಾನ ಕಲಾವಿದರಿಗೆ ಸಿಗುತ್ತಿರುವ ಹಲವಾರು ಸೌಲಭ್ಯಗಳು ಸರ್ಕಾರಿ ಉದ್ಯೋಗದಲ್ಲಿರುವ ಉದ್ಯೋಗಿಗೆ ಸಿಗುವಷ್ಟೆ ಪ್ರಾಮುಖ್ಯತೆಯನ್ನು ಪಡೆದಿದೆ. ಇದನ್ನು ಕಲಾವಿದರು ಒಪ್ಪಿಕೊಳ್ಳುವ ಮನಸ್ಥಿತಿ ಬರಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಮಾತನಾಡಿ, ಇಂದು ಕರಾವಳಿಯ ಮೇಳಗಳಿಗೂ ಸರ್ಕಾರದ ಸಹಾಯದ ಅಗತ್ಯ ಇದೆ. ಜೊತೆಗೆ ಯಕ್ಷಗಾನ ಕಲಾವಿದರು ತಮ್ಮ 60- 62 ವರ್ಷ ವಯಸ್ಸಿನಲ್ಲಿ ಮಾಸಶನಕ್ಕೆ ಅರ್ಜಿ ಹಾಕುವ ಬದಲು 58ನೇ ವರ್ಷದಲ್ಲಿಯೇ ಅರ್ಜಿ ಸಲ್ಲಿಸಿದರೆ ಕನಿಷ್ಠ ಪಕ್ಷ 68 ವರ್ಷವಾಗುವಾಗವಾದರೂ ಮಾಸಾಶನ ಸಿಗುವಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ ಮಾತನಾಡಿ, ಇತರ ಪ್ರಕಾರದ ಕಲೆಗಳ ಕಲಾವಿದರುಗಳಿಗೆ ಸಿಗುವಂತ ಪ್ರೋತ್ಸಾಹ ಸರ್ಕಾರದ ವತಿಯಿಂದ ಯಕ್ಷಗಾನದ ಕಲಾವಿದರಿಗೂ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಲಯನ್ಸ್ ಗವರ್ನರ್ ಸಿ.ಎಚ್.ಎನ್. ಶಿವಕುಮಾರ, ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್  ಆಂಚನ್ ಇದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಮುರಳಿ ಕಡೆಕಾರ್ ನಿರೂಪಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಬೆಳಗ್ಗೆ ದಂತ ಉಚಿತ ತಪಾಸಣೆ ಶಿಬಿರ, ವೈಜಯಂತಿ ಕಾಶಿ ಅವರಿಂದ ಕೂಚಿಪುಡಿ ಯಕ್ಷಗಾನ ನೃತ್ಯಾಭಿನಯನದ ಪ್ರಾತ್ಯಕ್ಷಿಕೆ ನಡೆಯಿತು.
ನಂತರದಲ್ಲಿ ಸಂಘದ 14ನೇ ವಾರ್ಷಿಕ ಮಹಾಸಭೆಯು ಜರಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.