ರಾಷ್ಟ್ರಧ್ವಜ ಸುತ್ತೋಲೆ; ಪಂಚಾಯ್ತಿಗಳ ನಿರ್ಲಕ್ಷ್ಯ
-ಸುಭಾಶ್ಚಂದ್ರ ಎಸ್. ವಾಗ್ಳೆ
ಉಡುಪಿ: ಅನ್ನಭಾಗ್ಯ, ಶಾದಿಭಾಗ್ಯ, ಅಹಿಂದ ವಿದ್ಯಾರ್ಥಿಗಳಿಗೆ ಪ್ರವಾಸ... ಹೀಗೆ ಸರ್ಕಾರದ ಕಾರ್ಯಕ್ರಮಗಳು ಸಾಲುಸಾಲಾಗಿ ವಿವಾದಕ್ಕೆ ಕಾರಣವಾಗುತ್ತಲೇ ಇವೆ. ಈ ಸಾಲಿಗೆ ಲೆಟೇಸ್ಟ್ ಸೇರ್ಪಡೆ ಪಂಚಾಯಿತಿ ಕಚೇರಿಗಳ ಮುಂದೆ ರಾಷ್ಟ್ರಧ್ವಜ ಹಾರಾಡಿಸಬೇಕು ಎಂಬ ಸರ್ಕಾರಿ ಸುತ್ತೋಲೆ.
ಆಗಸ್ಟ್ 15ರಿಂದ ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಜು.30ರಂದು ಸುತ್ತೋಲೆ ಹೊರಡಿಸಿದೆ. ಆ ಸುತ್ತೋಲೆಯಲ್ಲಿ ರಾಷ್ಟ್ರೀಯ ಸ್ವಾಭಿಮಾನ, ವೈಭವ ಹಾಗೂ ಹೆಗ್ಗಳಿಕೆಯ ಪ್ರತೀಕವಾಗಿರುವ ರಾಷ್ಟ್ರ ಧ್ವಜವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು, ತಾಲೂಕು ಪಂಚಾಯತಿಗಳು ಹಾಗೂ ಜಿಲ್ಲಾ ಪಂಚಾಯತಿಗಳು ತಮ್ಮ ಕಾರ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ಧ್ವಜಸ್ತಂಭದಲ್ಲಿ ಪ್ರತಿದಿನ ಘನತೆ ಮತ್ತು ಗೌರವಯುತವಾಗಿ ಹಾರಾಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ'.
ಧ್ವಜ ಹಾರಿಸದೆ ಪ್ರತಿಭಟನೆಯೇ...?:
ಪಂಚಾಯಿತಿ ಕಚೇರಿಗಳ ಮುಂದೆ ರಾಷ್ಟ್ರಧ್ವಜ ಹಾರಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೆ, ಈ ಸುತ್ತೋಲೆ ಬಂದು 4 ತಿಂಗಳಾಗುತ್ತಿದ್ದರೂ ಉಡುಪಿ ಜಿಲ್ಲೆಯ 141 ಗ್ರಾಮ ಪಂಚಾಯಿತಿಗಳ ಪೈಕಿ ಕೇವಲ ಬೆರಳೆಣಿಕೆಯ ಗ್ರಾಮ ಪಂಚಾಯಿತಿಗಳನ್ನು ಬಿಟ್ಟರೇ ಬಹುತೇಕ ಗ್ರಾ.ಪಂ.ಗಳು ಇದನ್ನು ಪಾಲಿಸುತ್ತಿಲ್ಲ.
ಅರ್ಥಾತ್ ಶೇ.75ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ರಾಷ್ಟ್ರಧ್ವಜ ಹಾರಾಡುತ್ತಿಲ್ಲ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಧ್ವಜ ಹಾರಿಸಲು ಕಂಬಗಳೇ ಇಲ್ಲ. ಕೆಲವು ಗ್ರಾಪಂಗಳಲ್ಲಿ ಸದಸ್ಯರು, ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ. ತೀರಾ ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಾಪಂ ಕಚೇರಿಗಳ ಮುಂದೆ ಧ್ವಜ ಹಾರಾಡಿಸದಿದ್ದರೇ ಕೇಳುವವರು ಯಾರೂ ಎಂಬ ಅಸಡ್ಡೆಯೂ ಇದೆ. ಸರ್ಕಾರ ಹೊರಡಿಸಿರುವ ಸುತ್ತೋಲೆಗೆ ಗ್ರಾಮ ಪಂಚಾಯಿತಿಗಳಿಂದ ವ್ಯಕ್ತವಾದ ಪ್ರತಿಭಟನೆಯೇ..?
ಸುತ್ತೋಲೆಯಲ್ಲಿ ಏನಿದೆ...?
-ಪಂಚಾಯಿತಿ ಕಚೇರಿಗಳ ಮುಂದೆ ರಾಷ್ಟ್ರಧ್ವಜ (ರಾಷ್ಟ್ರಧ್ವಜ ಸಂಹಿತೆಯಂತೆ) ಹಾರಾಡಿಸುವುದು ಕಡ್ಡಾಯ
-ಇದರ ಹೊಣೆಯನ್ನು ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ವಹಿಸಿಕೊಳ್ಳಬೇಕು
-ಕಾರ್ಯದರ್ಶಿ, ಬಿಲ್ ಕಲೆಕ್ಟರ್, ವಾಟರ್ ಮೆನ್ ಅವರಲ್ಲೊಬ್ಬರು ಧ್ವಜಾರೋಹಣ, ಅವರೋಹಣ ನಡೆಸಬೇಕು
-ಭಾನುವಾರವೂ ಸೇರಿದಂತೆ ಎಲ್ಲ ಸರ್ಕಾರಿ ರಜಾ ದಿನಗಳಲ್ಲಿಯೂ ಧ್ವಜ ಹಾರಾಡಿಸಬೇಕು
-ಧ್ವಜ ಆರೋಹಣ-ಅವರೋಹಣ ಮಾಡಿದವರಿಗೆ ಪ್ರತಿದಿನ 30 ಗೌರವ ಧನ ನೀಡಬೇಕು
-ಕಂಬ ಇಲ್ಲದಿದ್ದರೆ ಪಂಚಾಯತ್ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ಕಂಬ ನಿರ್ಮಿಸಿಕೊಳ್ಳಬೇಕು
-ಸ್ಥಳೀಯ ಖಾದಿ ಭಂಡಾರದಿಂದ ಧ್ವಜ ಖರೀದಿಸಬೇಕು
-ಧ್ವಜ ಖರೀದಿ, ಕಂಬ ನಿರ್ಮಾಣ, ಗೌರವ ಧನಗಳನ್ನು ಗ್ರಾಪಂ ಸ್ವಂತ ಸಂಪನ್ಮೂಲದಿಂದಲೇ ಭರಿಸಬೇಕು
ಧ್ವಜ ಇಳಿಸದ ಸಿಬ್ಬಂದಿ, ಅಧ್ಯಕ್ಷನಿಗೆ ಕಪಾಳಮೋಕ್ಷ
ರಾಷ್ಟ್ರಧ್ವಜವನ್ನು ಪಂಚಾಯಿತಿ ಕಚೇರಿಗಳ ಮುಂದೆ ಹಾರಾಡಿಸುವುದರಿಂದ (ಸರ್ಕಾರಿ ಸುತ್ತೋಲೆಯಲ್ಲಿರುವಂತೆ) ಸಾರ್ವಜನಿಕರಲ್ಲಿ ಎಷ್ಟು ವಾತ್ಸಲ್ಯ, ಗೌರವ ಮತ್ತು ಸ್ವಾಮಿ ನಿಷ್ಠೆ ವ್ಯಕ್ತವಾಗುತ್ತದೋ ಗೊತ್ತಿಲ್ಲ. ಆದರೆ, ಸಿಬ್ಬಂದಿಯೊಬ್ಬರು ಮಾಡಿದ ತಪ್ಪಿಗೆ ಉಡುಪಿ ಜಿಲ್ಲೆಯ ಕೋಟೆ ಗ್ರಾಪಂನ ಅಧ್ಯಕ್ಷರು ಮಾತ್ರ ಪೊಲೀಸರಿಂದ ಧರ್ಮದೇಟು ತಿಂದಿದ್ದಾರೆ. ಕೋಟೆ ಗ್ರಾಮ ಪಂಚಾಯ್ತಿ ಸಿಬ್ಬಂದಿ ಭಾನುವಾರ ಬೆಳಗ್ಗೆ ರಾಷ್ಟ್ರಧ್ವಜವನ್ನು ಆರೋಹಣ ನಡೆಸಿದ್ದಾರೆ. ಆದರೆ, ಸಂಜೆ ಅವರೋಹಣ ಮಾಡಿರಲಿಲ್ಲ. ಈ ಬಗ್ಗೆ ಯಾರೋ ಸ್ಥಳೀಯ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಟ್ಟುನಿಟ್ಟು ಆಗದಿದ್ದರೇ ಸುತ್ತೋಲೆ ರದ್ದುಗೊಳಿಸಿ
ರಾಷ್ಟ್ರೀಯ ಹಬ್ಬಗಳಂತಹ ಸಂದರ್ಭದಲ್ಲಿ ಗೌರವಯುತವಾಗಿ ಸಾರ್ವಜನಿಕ ಮುಂದೆ ರಾಷ್ಟ್ರಧ್ವಜ ಹಾರಾಡಿಸಬೇಕು. ಆದರೆ, ಗ್ರಾಪಂಗಳಲ್ಲಿ ಪ್ರತಿದಿನ ರಾಷ್ಟ್ರ ಧ್ವಜಾರೋಹಣ ಮಾಡುವುದನ್ನು ನೋಡುವುದಕ್ಕೂ ಯಾರೂ ಇರುವುದಿಲ್ಲ. ಇದು ಧ್ವಜಕ್ಕೆ ಮಾಡುವ ಅಗೌರವ. ಧ್ವಜಾರೋಹಣ ಮಾಡದೇ ಇರುವುದು ಕೇವಲ ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಆದ್ದರಿಂದ ಸರ್ಕಾರ ಈ ಸುತ್ತೋಲೆಯ ಬಗ್ಗೆ ಪುನಃ ಆಲೋಚಿಸಬೇಕು. ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಸಾಧ್ಯವಿಲ್ಲವೆಂದಾದರೇ ಸುತ್ತೋಲೆಯನ್ನೇ ರದ್ದುಗೊಳಿಸಬೇಕು.
-ದೇವಿಪ್ರಸಾದ್ ಶೆಟ್ಟಿ, ಗ್ರಾಪಂ ಒಕ್ಕೂಟದ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

