ಉಡುಪಿ

ಕೋಟೆ ಗ್ರಾಪಂ ಅಧ್ಯಕ್ಷಗೆ ಹಲ್ಲೆ; ಉಡುಪಿ ತಾಪಂ ಖಂಡನಾ ನಿರ್ಣಯ

Published On :

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಕೋಟೆ ಗ್ರಾಪಂ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಅವರ ಮೇಲೆ ಪಡುಬಿದ್ರಿ  ಪೊಲೀಸ್ ವೃತ್ತ ನಿರೀಕ್ಷಕ ಸುನಿಲ್ ನಾಯ್ಕ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಪ್ರಕರಣದ ವಿರುದ್ಧ ಉಡುಪಿ ತಾಪಂ ಖಂಡನಾ ನಿರ್ಣಯವನ್ನು ಕೈಗೊಂಡಿದೆ.
ಮಂಗಳವಾರ ನಡೆದ ತಾಪಂ ಸಭೆಯಲ್ಲಿ ಕಾಂಗ್ರೆಸ್ ತಾಪಂ ಸದಸ್ಯ ಉಮೇಶ್ ನಾಯ್ಕ್ ಅವರು ಈ ಖಂಡನಾ ನಿರ್ಣಯವನ್ನು ಮಂಡಿಸಿದರು.
ಕೋಟೆ ಗ್ರಾಪಂ ಸಿಬ್ಬಂದಿ ಭಾನುವಾರ ಬೆಳಗ್ಗೆ ಹಾರಿಸಿದ್ದ ಧ್ವಜವನ್ನು ಸಂಜೆ ಕೆಳಗಿಳಿಸದೇ ಅಚಾತುರ್ಯವಾಗಿದೆ. ಇದನ್ನು ಸರಿಪಡಿಸಲು ರಾತ್ರಿ ಗ್ರಾಪಂಗೆ ತೆರಳಿದ ಅಧ್ಯಕ್ಷ ಜತ್ತನ್ನ ಮೇಲೆ ರಾತ್ರಿ ಗಸ್ತಿನಲ್ಲಿದ್ದ ವೃತ್ತ ನಿರೀಕ್ಷಕ ನಾಯ್ಕ್ ಅವರು ಹಲ್ಲೆ ನಡೆಸಿರುವುದು ಗೂಂಡಾ ಪ್ರವೃತ್ತಿಯಾಗಿದೆ ಎಂದವರು ಅಭಿಪ್ರಾಯಪಟ್ಟರು. ಅವರಿಗೆ ಬಿಜೆಪಿಯ ತಾಪಂ ಸದಸ್ಯ ಸತ್ಯಾನಂದ ನಾಯಕ್ ಬೆಂಬಲ ವ್ಯಕ್ತಪಡಿಸಿದರು.
ಅಧ್ಯಕ್ಷೆ ಗೌರಿ ಪೂಜಾರಿ ಅವರು ಈ ಖಂಡನಾ ನಿರ್ಣಯವನ್ನು ದಾಖಲಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಉಪಾಧ್ಯಕ್ಷ ರಾಮ ಕುಲಾಲ್ ಪಕ್ಕಾಲು, ಸ್ಥಾಯಿ ಸಮಿತಿ ಅಧ್ಯಕ್ಷ ದಿವಾಕರ ಹೆಗ್ಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಂಜುನಾಥಯ್ಯ, ತಹಸೀಲ್ದಾರ್ ಗುರುಪ್ರಸಾದ್ ಇದ್ದರು.

ವೃತ್ತ ನಿರೀಕ್ಷಕರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ: ಗ್ರಾಪಂ ಒಕ್ಕೂಟ
ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಕೋಟೆ ಗ್ರಾಪಂ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದ ಪಡುಬಿದ್ರಿ ಪೊಲೀಸ್ ವೃತ್ತ ನಿರೀಕ್ಷಕರ ಮೇಲೆ ಶನಿವಾರದೊಳಗೆ ಕಾನೂನು ಕ್ರಮ ಜರುಗಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಉಡುಪಿ ಗ್ರಾಪಂಗಳ ಒಕ್ಕೂಟ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದೆ.  
ಆರೋಪಿ ಪೊಲೀಸ್ ವೃತ್ತ ನಿರೀಕ್ಷಕರನ್ನು 10 ದಿನಗಳ ರಜೆ ಮೇಲೆ ಕಳುಹಿಸಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ. ಇದು ಸಾಲದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಸೇವೆಯಿಂದ ಅಮಾನತುಗೊಳಿಸಬೇಕು ಎಂದು ದೇವಿಪ್ರಸಾದ್ ಶೆಟ್ಟಿ ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಅವರು ಪ್ರತಿನಿಧಿಸುತ್ತಿರುವ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಅವರು ಶನಿವಾರ ಬಂದು ಪೊಲೀಸ್ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಆದ್ದರಿಂದ ಒಕ್ಕೂಟ ಶನಿವಾರದವರೆಗೆ ಗಡುವು ನೀಡುತ್ತದೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಹರೀಶ್ ಕಿಣಿ, ಕೋಟೆ ಗ್ರಾಪಂ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಕಟಪಾಡಿ ಗ್ರಾಪಂ ಅಧ್ಯಕ್ಷ ವಿನಯ ಬಲ್ಲಾಳ್, ತಾಪಂ ಸದಸ್ಯ ಗಿರೀಶ್ ಕುಮಾರ್, ತಾಪಂ ಸದಸ್ಯರಾದ ಮಲ್ಲಿಕಾ ಬಾಲಕೃಷ್ಣ ಪೂಜಾರಿ ಮತ್ತು ದಿವಾಕರ ಕುಂದರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.