ಉಡುಪಿ

ನಗರೋತ್ಥಾನ 2ನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Published On :

ಕಾರ್ಕಳ: ಪುರಸಭೆ ವತಿಯಿಂದ ನಗರೋತ್ಥಾನ 2ನೇ ಹಂತದ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಸಮಗ್ರ ಕಾರ್ಕಳ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಆಗಬೇಕಾಗಿದೆ. ಕಾರ್ಕಳಕ್ಕೆ ರು. 56 ಕೋಟಿಯ ಒಳಚರಂಡಿ ಯೋಜನೆ ಪ್ರಸ್ತಾಪ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಕುಡಿಯುವ ನೀರಿಗೆ ಶಾಶ್ವತ ಯೋಜನೆ ಕೈಗೊಳ್ಳಲು ಬೆಂಗಳೂರಿನಿಂದ ನುರಿತ ಅಧಿಕಾರಿಗಳನ್ನು ಕಳುಹಿಸಿಕೊಡಲಾಗುವುದು. ಅವರು ಯೋಜನೆ ರೂಪಿಸಲಿದ್ದಾರೆ. ಕಾಮಗಾರಿ ಉತ್ಕೃಷ್ಟತೆಗಾಗಿ ಪ್ರಯತ್ನಿಸಲಾಗುತ್ತದೆ ಎಂದರು.
ಪಟ್ಟಣ ಮಕ್ಕಳಿಗೂ ಮೀಸಲಾತಿ ಅಗತ್ಯ: ಸಂಸದ ಜಯಪ್ರಕಾಶ ಹೆಗ್ಡೆ ಮಾತನಾಡಿ, ಗ್ರಾಮೀಣ ಪ್ರದೇಶದ ಮೀಸಲಾತಿಯನ್ನು ಪಟ್ಟಣಗಳ ಮಕ್ಕಳಿಗೂ ಅನ್ವಯಿಸಬೇಕು ಎಂದರಲ್ಲದೆ, ಜನರ ಸಹಕಾರವಿಲ್ಲದೆ ರಸ್ತೆ ವಿಸ್ತರಣೆ ಅಸಾಧ್ಯ. ಅಭಿವೃದ್ಧಿಗಳ ಟೆಂಡರ್ ಪ್ರಕ್ರಿಯೆ ಸ್ಥಳೀಯ ಮಟ್ಟದಲ್ಲಿ ನಡೆದಾಗ ಕಾಮಗಾರಿ ಬೇಗ ಪೂರ್ಣಗೊಳ್ಳಲಿದೆ ಎಂದರು.
ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಮಾತನಾಡಿ, ಬಂಡಿಮಠದಲ್ಲಿ ಪುರಭವನಕ್ಕೆ ರು. 2 ಕೋಟಿ ನೀಡಲು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಭರವಸೆ ನೀಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ ರಸ್ತೆ, ದಾರಿ ದೀಪ, ನೀರು ಇವುಗಳ ಮೇಲೆ ಜನರು ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತಾರೆ. ಅವುಗಳನ್ನು ಪೂರೈಸುವುದು ಜನಪ್ರತಿನಿಧಿಗಳ ಕೆಲಸ. ಕಾರ್ಕಳ ಪಟ್ಟಣದ ಪ್ರಮುಖ ರಸ್ತೆ ಚತುಷ್ಪಥ ಮಾಡಲು ರು. 30 ಕೋಟಿ ತೆಗೆದಿಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ವಿ.ಪ್ರಸನ್ನ, ಉಪಾಧ್ಯಕ್ಷೆ ಶಶಿಕಲಾ, ತಹಸೀಲ್ದಾರ್ ಬಾಬು ದೇವಾಡಿಗ ವೇದಿಕೆಯಲ್ಲಿದ್ದರು.
ಪುರಸಭಾಧ್ಯಕ್ಷೆ ರೆಹಮತ್ ಸ್ವಾಗತಿಸಿದರು. ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು.
ಆರೋಗ್ಯ ನಿರೀಕ್ಷಕ ಸುಂದರ ಪೂಜಾರಿ ವಂದಿಸಿದರು. ಸದಸ್ಯ ಶುಭದ ರಾವ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.