ಬಸ್ ಮೀಸಲು ಸೀಟು ಕಡ್ಡಾಯ ಅನುಷ್ಠಾನಕ್ಕೆ ಮರಳಿ ಯತ್ನ!
ಮಣಿಪಾಲ: ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಖಾಸಗಿ ಬಸ್ಗಳಲ್ಲಿ ಮಹಿಳೆಯರಿಗೆ, ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಮೀಸಲ್ಪಟ್ಟ ಸೀಟುಗಳಲ್ಲಿ ಅರ್ಹರಿಗೆ ಕುಳಿತುಕೊಳ್ಳುವುದಕ್ಕೆ ಕಡ್ಡಾಯವಾಗಿ ಅವಕಾಶ ನೀಡಬೇಕು ಎಂಬ ನಿಯಮವನ್ನು ಮತ್ತೊಮ್ಮೆ ಜಾರಿಗೊಳಿಸಲು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಯತ್ನ ಮಾಡಿದ್ದಾರೆ.
ಈ ನಿಯಮ ಕಳೆದ ಅನೇಕ ವರ್ಷಗಳಿಂದ ಜಾರಿಯಲ್ಲಿದ್ದರೂ, ಈ ಸೀಟುಗಳ ಬಗ್ಗೆ ಬಸ್ಗಳನ್ನು ಕಡ್ಡಾಯವಾಗಿ ಬರಹ ರೂಪದಲ್ಲಿ ಸೂಚನೆಗಳನ್ನು ಹಾಕಲಾಗಿದ್ದರೂ, ಸಾರಿಗೆ ಅಧಿಕಾರಿಗಳು ಆಗಾಗ್ಗೆ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸುತ್ತಿದ್ದರೂ, ಬಹುತೇಕ ಬಸ್ಗಳಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ.
ಸೀಟು ಬಿಡುವುದಿಲ್ಲ: ಮುಖ್ಯವಾಗಿ ಪುರುಷ ಪ್ರಯಾಣಿಕರು ತಾವು ಪುರುಷರು ಎಂಬದನ್ನೂ ಮರೆತು ಮಹಿಳಾ ಮೀಸಲು ಸೀಟುಗಳಲ್ಲಿ ಕುಳಿತುಕೊಳ್ಳುವುದು, ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಅವರ ಸೀಟು ಬಿಟ್ಟುಕೊಡದೇ ಇರುವುದು ಜಿಲ್ಲೆಯ ಬಹುತೇಕ ಬಸ್ಸುಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.
ಈ ಬಗ್ಗೆ ನಿಯಮ ಜಾರಿಗೊಳಿಸುವ ಆರ್.ಟಿ.ಒ. ಅವರ ನೇರ ಸಂಪರ್ಕದಲ್ಲಿರುವ ಬಸ್ಗಳ ಮಾಲೀಕರು ಕ್ಯಾರೇ ಮಾಡುತ್ತಿಲ್ಲ, ಬಸ್ಗಳಲ್ಲಿ ಈ ನಿಯಮ ಪಾಲನೆಗೊಳಿಸಬೇಕಾದ ಬಸ್ ನಿರ್ವಾಹಕರು ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ. ಆದ್ದರಿಂದ ಆರ್.ಟಿ.ಒ. ಅವರು ಪದೇ ಪದೇ ಈ ನಿಮಯ ಕಡ್ಡಾಯ ಎಂದು ಹೇಳುವುದು ಖಾಲಿ ಬುಟ್ಟಿಯ ಮುಂದೆ ಪುಂಗಿ ಊದಿದಷ್ಟೇ ಪರಿಣಾಮ ಬೀರುತ್ತಿದೆ.
ಕಡ್ಡಾಯ ಸೂಚನೆ: ಈ ಹಿನ್ನೆಲೆಯಲ್ಲಿ ಉಡುಪಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ. ಅರುಣ್ ಕುಮಾರ್ ಸಿಂಗ್ ಅವರು ಈ ಮೀಸಲು ನಿಯಯವನ್ನು ಕಡ್ಡಾಯವಾಗಿ ಪಾಲಿಸುವಂತೆ ಬಸ್ ನಿರ್ವಾಹಕರಿಗೆ ಮತ್ತು ಬಸ್ಸು ಪ್ರಯಾಣಿಕರಿಗೆ ಸೂಚಿಸಿದ್ದಾರೆ, ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ. ಈ ಸೂಚನೆ ಯಶಸ್ಸನ್ನು ಕಾದು ನೋಡಬೇಕಾಗಿದೆ.
ನಿಯಮ ಮೀರುವವರ ವಿರುದ್ಧ ಕಾನೂನು ಕ್ರಮ
ಬಸ್ಗಳಲ್ಲಿ ಮೀಸಲು ಸೀಟುಗಳಲ್ಲಿ ಬೇರೆಯವರು ಕುಳಿತುಕೊಳ್ಳುತ್ತಿದ್ದಾರೆ, ಬಸ್ಗಳ ನಿರ್ವಾಹಕರು ಅವರನ್ನು ಏಳಿಸಿ ಸಂಬಂಧಿಸಿದವರಿಗೆ ಸೀಟು ಕೊಡಿಸುತ್ತಿಲ್ಲ ಎಂದು ದೂರುಗಳು ಕಚೇರಿಗೆ ಬರುತ್ತಿದೆ. ಈ ಕುರಿತು ಈಗಾಗಲೇ ಸಾಕಷ್ಟು ಸಲ ಪತ್ರಿಕೆಗಳಲ್ಲಿ ಪ್ರಕಟಿಸಿ ಎಚ್ಚರಿಕೆ ನೀಡಿದ್ದರೂ ಪುನಃ ದೂರು ಬರುತ್ತಿದೆ.
ಆದ್ದರಿಂದ ಬಸ್ ನಿರ್ವಾಹಕರು ಮೀಸಲಿಟ್ಟ ಸೀಟಿನಲ್ಲಿ ಅರ್ಹರಿಗೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಬೇಕು, ಇದಕ್ಕೆ ಅನರ್ಹ ಪ್ರಯಾಣಿಕರು ಒಪ್ಪದಿದ್ದಲ್ಲಿ ಅಂತಹವರ ಮೇಲೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಹಾಗೆಯೇ ಬಸ್ ಮಾಲೀಕರು ತಮ್ಮ ಸಿಬ್ಬಂದಿ ವರ್ಗಕ್ಕೆ ಈ ಕುರಿತು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಈ ನಿಯಮ ಮೀರಿ ನಡೆಯುವ ಪ್ರಯಾಣಿಕರಿಗೆ ಹಾಗೂ ಬಸ್ ನಿರ್ವಾಹಕರಿಗೆ ದಂಡ ವಿಧಿಸಿ ಬಸ್ಸಿನ ಮೇಲೆ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

