ಉಡುಪಿ

ಕೊಳೆರೋಗ ನಷ್ಟ ಗರಿಷ್ಠ, ಪರಿಹಾರ ಕನಿಷ್ಠ!

Published On :

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಅಡಕೆ ಕೊಳೆ ರೋಗದಿಂದ ಆಗಿರುವ ನಷ್ಟ ರು. 18 ಕೋಟಿ, ಪರಿಹಾರ ರು. 5 ಕೋಟಿ. ಇದು ನಮ್ಮ ರಾಜ್ಯ ಸರ್ಕಾರದ ಕೃಷಿ ಪ್ರೋತ್ಸಾಹ ನೀತಿ.
ಈ ಬಾರಿ ಸುರಿದ ಭಾರಿ ಮಳೆಯಿಂದಾಗಿ ಕರಾವಳಿ ಮತ್ತು ಮಲೆನಾಡಿನ 5 ಜಿಲ್ಲೆಗಳ ಅಡಕೆ ಬೆಳೆ ನೆಲಕಚ್ಚಿದೆ. ಇದೇ ವಿಷಯವನ್ನು ಇಟ್ಟುಕೊಂಡು ಆಡಳಿತ- ವಿರೋಧ ಪಕ್ಷಗಳು ಪರಸ್ಪರ 'ಕೊಳೆ' ಎರಚಿಕೊಳ್ಳುತ್ತ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆಸುತ್ತಿವೆ.
ಬಿಜೆಪಿ ಪರಿಶೀಲನೆ: ಕರಾವಳಿ- ಮಲೆನಾಡು ಜಿಲ್ಲೆಗಳಲ್ಲಿ ತಾನು ಕಳೆದುಕೊಂಡಿರುವ ಜನಪ್ರಿಯತೆಯನ್ನು ಮತ್ತೆ ಪಡೆಯಲು ಇದೇ ತಕ್ಕ ಸಮಯ ಎಂಬಂತೆ ಬಿಜೆಪಿ ತಂಡವೊಂದನ್ನು ರಚಿಸಿ ದ.ಕ., ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ವಿವಿಧೆಡೆ ಅಡಕೆ ತೋಟಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿಯನ್ನೇ ನಡೆಸಿದೆ.
ನಷ್ಟದ ಅರ್ಧದಷ್ಟು ಪರಿಹಾರವೂ ಇಲ್ಲ: ರಾಜ್ಯ ಕಾಂಗ್ರೆಸ್ ಸರ್ಕಾರ ಕೊಳೆ ರೋಗದಿಂದ ಕಂಗಾಲಾಗಿರುವ ಅಡಕೆ ಬೆಳೆಗಾರರಿಗೆ ಪರಿಹಾರ ನೀಡುವುದಕ್ಕೆ ರು. 25 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಮೇಲ್ನೋಟಕ್ಕೆ ರು. 25 ಕೋಟಿ ದೊಡ್ಡ ಮೊತ್ತವಾಗಿ ಕಾಣುತ್ತದೆ. ಆದರೆ ಇದರಲ್ಲಿ ಕೊಳೆರೋಗ ಹರಡಿರುವ 5 ಜಿಲ್ಲೆಗಳಿಗೆ ಸರಾಸರಿ ರು. 5 ಕೋಟಿ ಮಾತ್ರ ಸಿಗುತ್ತದೆ. ಆದರೆ ಈ ಒಂದೊಂದು ಜಿಲ್ಲೆಯಲ್ಲಿಯೂ ಸರಾಸರಿ ರು. 15- 20 ಕೋಟಿ ನಷ್ಟ ಸಂಭವಿಸಿದೆ. ಅಂದರೆ, ಸರ್ಕಾರ ನಷ್ಟದ ಅರ್ಧದಷ್ಟು ಪರಿಹಾರವನ್ನೂ ನೀಡುತ್ತಿಲ್ಲ.
ಉಡುಪಿ ಜಿಲ್ಲೆಯೊಂದರಲ್ಲಿಯೇ ಸುಮಾರು 7200 ಹೆಕ್ಟೇರ್ ಭೂಮಿಯಲ್ಲಿ ಅಡಕೆ ಬೆಳೆಯಲ್ಲಿ ಈಗಾಗಲೇ 5600 ಹೆಕ್ಟೇರ್ ಅಡಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ಸುಮಾರು ರು. 18 ಕೋಟಿ ನಷ್ಟ ಸಂಭವಿಸಿದೆ. ಮಳೆಗಾಲ ಇನ್ನೂ ಮುಗಿದಿಲ್ಲ, ಮಳೆಗಾಲದ ಕೊನೆಗೆ ಈ ನಷ್ಟ ರು. 20 ಕೋಟಿಗೇರುವ ಸಾಧ್ಯತೆಗಳಿವೆ. ಆಗ ಸರ್ಕಾರ ನೀಡುವುದಾಗಿ ಘೋಷಿಸಿರುವ ರು. 5 ಕೋಟಿ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಲಿದೆ. ಈ ಬಗ್ಗೆ ಕಾಳಜಿ ವಿರೋಧ ಪಕ್ಷಕ್ಕಾಗಲೀ, ಆಡಳಿತ ಪಕ್ಷಕ್ಕಾಗಲಿ ಇದ್ದಂತಿಲ್ಲ.

ಈ ಬಾರಿ ಕಳೆದ ಸಾಲಿಗಿಂತ ಹೆಚ್ಚು ಮಳೆ ನಿರಂತರವಾಗಿ ಬಂದಿರುವುದರಿಂದ ಕೊಳೆ ರೋಗ ಹೆಚ್ಚಾಗಿದೆ. ಈಗಾಗಲೇ ಮೊದಲ ಹಂತದ ಸರ್ವೇ ನಡೆಸಿ ಜಿಲ್ಲೆಯಲ್ಲಿ ರು. 18 ಕೋಟಿ ನಷ್ಟ ಅಂದಾಜು ಮಾಡಲಾಗಿದೆ, ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಪರಿಹಾರ ನೀಡುವುದಕ್ಕೆ ಅವಕಾಶ ಇದೆ. ಸರ್ಕಾರದ ನಿಯಮಗಳ ಪ್ರಕಾರ ಹೆಕ್ಟೇರಿಗೆ ರು. 12 ಸಾವಿರ ಪರಿಹಾರ ದೊರೆಯುತ್ತದೆ. ಅಂದರೆ ಜಿಲ್ಲೆಯಲ್ಲಿ ಸುಮಾರು ರು. 6 ಕೋಟಿ ಪರಿಹಾರ ನೀಡುವುದಕ್ಕೆ ಅವಕಾಶ ಇದೆ.
-ಬಿ.ಪಿ. ಹರೀಶ್, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

ವೈಜ್ಞಾನಿಕವಾಗಿ ಲೆಕ್ಕ ಹಾಕಿದರೆ ಒಂದು ಹಕ್ಟೇರಿಗೆ 1500 ಅಡಕೆ ಮರಗಳಿಗೆ ವರ್ಷಕ್ಕೆ ರು. 55 ಸಾವಿರ ಬಂಡವಾಳ ಹೂಡಬೇಕಾಗುತ್ತದೆ. ಈ ಬಾರಿ ಕೊಳೆ ರೋಗದಿಂದ ಅಷ್ಟೂ ಬಂಡವಾಳ ನಷ್ಟವಾಗಿದೆ. ಆದರೆ ಅಧಿಕಾರಿಗಳು ಹೆಕ್ಟೇರಿಗೆ ರು. 20- 30 ಸಾವಿರ ನಷ್ಟ ಆಗಿದೆ ಅಂತ ಸರ್ಕಾರಕ್ಕೆ ಸುಳ್ಳು ಲೆಕ್ಕ ತೋರಿಸುತಿದ್ದಾರೆ. ಹೆಕ್ಟೇರಿಗೆ ರು. 55 ಸಾವಿರ ನೀಡಲಿಕ್ಕಾಗದಿದ್ರೂ ಕನಿಷ್ಠ ರು. 30 ಸಾವಿರ ನಷ್ಟ ಭರಿಸಿಕೊಡಬೇಕು. ಸರ್ಕಾರ ಕೊಡುವ ರು. 10- 12 ಸಾವಿರ ಪರಿಹಾರ ಏನೇನೂ ಸಾಲದು.
-ಕುದಿ ಶ್ರೀನಿವಾಸ ಭಟ್, ಪ್ರಗತಿಪರ ಅಡಕೆ ಬೆಳೆಗಾರ
-  ಸುಭಾಶ್ಚಂದ್ರ ಎಸ್. ವಾಗ್ಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.