ಉಡುಪಿ

ನಮೂನೆ 9, 11 ಸಮಸ್ಯೆ ವಾರದೊಳಗೆ ಪರಿಹಾರ: ಪಾಟೀಲ್

Published On :

ಮಣಿಪಾಲ: ಮುಖ್ಯವಾಗಿ ಉಡುಪಿ, ದ.ಕ. ಮತ್ತು ಇತರ ಜಿಲ್ಲೆಗಳ ಸಣ್ಣ ಭೂಮಾಲೀಕರ ಭೂಮಿ ಮಾರಾಟ, ಪರಿವರ್ತನೆ, ಖಾತೆ ಬದಲಾವಣೆ, ಮನೆ ನಿರ್ಮಾಣಕ್ಕೆ ತೀವ್ರ ಅಡ್ಡಿ ಉಂಟುಮಾಡುತ್ತಿರುವ ನಮೂನೆ 9 ಮತ್ತು 11ರಲ್ಲಿ ವಿವರ ಸಲ್ಲಿಕೆ ಕಡ್ಡಾಯ ಆದೇಶವನ್ನು ವಾರದೊಳಗೆ ಸಡಿಲಿಸಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ್ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಮೂನೆಗಳಲ್ಲಿ ವಿವರ ಸಲ್ಲಿಸುವುದು ಹೈಕೋರ್ಟ್ ಆದೇಶವಾಗಿದೆ. ಆದ್ದರಿಂದ ಅದನ್ನು ರದ್ದುಗೊಳಿಸುವುದು ಸಾಧ್ಯವಿಲ್ಲ. ಆದರೆ ಸಮಸ್ಯೆಗೆ ಸಂಬಂಧಿಸಿದಂತೆ ಸೆ.19ರಂದು ಕಂದಾಯ ಮತ್ತು ಇತರ ಆಸಕ್ತ ಸಚಿವರ ಸಭೆಯೊಂದನ್ನು ನಡೆಸಿ ಸರಳ ಸೂತ್ರವೊಂದನ್ನು ಕಂಡುಕೊಳ್ಳಲಾಗುವುದು. ಸಾಧ್ಯವಾದರೆ ಅದನ್ನು ಅದೇ ದಿನ ಸಚಿವ ಸಂಪುಟಕ್ಕೆ ಸಲ್ಲಿಸಲಾಗುವುದು. ಸಾಧ್ಯವಾಗದಿದ್ದರೆ 21ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರಿ ಸಿಬ್ಬಂದಿಗೆ ವಸ್ತ್ರಸಂಹಿತೆ: ರಾಜ್ಯದಲ್ಲಿ ಸರ್ಕಾರಿ ಇಲಾಖೆ ಸಿಬ್ಬಂದಿಗೆ ವಸ್ತ್ರ ಸಂಹಿತೆ ನೀತಿ ಜಾರಿಗೊಳಿಸಿರುವುದನ್ನು ಯಾರೂ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸುವುದು ಅಗತ್ಯವಿಲ್ಲ, ಸಾಕಷ್ಟು ವಿಚಾರ ವಿಮರ್ಶೆ ಮಾಡಿದ ನಂತರವೇ ಇದನ್ನು ಜಾರಿಗೊಳಿಸಲಾಗಿದೆ. ಈ ನೀತಿಯ ಮೂಲಕ ಸಿಬ್ಬಂದಿಯನ್ನು ಭಾವನಾತ್ಮಕವಾಗಿ ಒಂದುಗೂಡಿಸುವ ಪ್ರಯತ್ನವಾಗಿದೆ. ಸರ್ಕಾರಿ ಸಿಬ್ಬಂದಿ ಇದಕ್ಕೆ ಸಹಕರಿಸಬೇಕು ಎಂದು ಪಾಟೀಲ್ ಮನವಿ ಮಾಡಿದರು.
ಪಂಚಾಯತ್‌ರಾಜ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ, ಗ್ರಾಪಂಗಳಲ್ಲಿ ಕಾರ್ಯದರ್ಶಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಎಂಜಿನಿಯರ್‌ಗಳಿಲ್ಲದೆ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. 2- 3 ತಿಂಗಳೊಳಗೆ ಈ ಸಮಸ್ಯೆಗೂ ಪರಿಹಾರ ನೀಡಲಾಗುವುದು ಎಂದರು.

'ಪ್ರತಿ ಕುಟುಂಬಕ್ಕೂ ಸ್ನಾನಗೃಹ ಕಲ್ಪಿಸಲು ಯೋಜನೆ'
ಮಣಿಪಾಲ: ಪ್ರತಿ ಕುಟುಂಬಕ್ಕೆ ಶೌಚಾಯಲದ ಅಗತ್ಯ ಎಷ್ಟು ಇದೆಯೋ, ಸ್ನಾನ ಗೃಹಗಳ ಅಗತ್ಯ ಕೂಡ ಅಷ್ಟೇ ಇದೆ. ಆದರೆ, ಈ ಬಗ್ಗೆ ಯಾರು ಪ್ರಸ್ತಾಪ ಮಾಡಿಲ್ಲ. ರಾಜ್ಯದ ಪ್ರತಿ ಕುಟುಂಬಗಳಿಗೆ ಸ್ನಾನಗೃಹದ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದಕ್ಕೂ ರಾಜ್ಯ ಸರ್ಕಾರ ಯೋಜನೆ ಹಾಕಿಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
 ಇಲ್ಲಿನ ಕೆಎಂಸಿ ಆಸ್ಪತ್ರೆಯಲ್ಲಿ ನೂತನಾಗಿ ಸ್ಥಾಪಿಸಲಾಗಿರುವ ಯಂತ್ರೋಪಕರಣಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ಇಂದು ಬೇಕಾದಷ್ಟು ಸಂಖ್ಯೆಯಲ್ಲಿ ಹೈಟೆಕ್ ಆಸ್ಪತ್ರೆಗಳು ತಲೆ ಎತ್ತುತ್ತಿವೆ. ಅಲ್ಲಿ ಅತ್ಯಾಧುನಿಕ ಆರೋಗ್ಯ ಸೇವೆಗಳೂ ನೀಡಲಾಗುತ್ತಿದೆ. ಈ ಆಸ್ಪತ್ರೆಗಳ ದುಬಾರಿ ಶುಲ್ಕದಿಂದಾಗಿ ಅವು ಜನಸಾಮಾನ್ಯರಿಗೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಮತ್ತು ಪಟ್ಟಣದ ಬಡವರಿಗೆ ಶೇ. 100ರಷ್ಟು ಉಚಿತ ಆರೋಗ್ಯ ಸೌಲಭ್ಯಗಳನ್ನು ನೀಡುವ ಅಗತ್ಯತೆ ಇದೆ. ಕೆಎಂಸಿಯಂತಹ ಆಸ್ಪತ್ರೆಗಳು ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಸಲಹೆ ಮಾಡಿದರು.
 ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್, ಮಣಿಪಾಲ ವಿವಿಯ ಕುಲಪತಿ ಡಾ. ರಾಮದಾಸ್ ಎಂ. ಪೈ, ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ದಯಾನಂದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.