ಕಾಂಗ್ರೆಸ್ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಟೀ ವಿತರಣೆ
ಉಡುಪಿ: 'ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕೇವಲ ಚಹಾ ಮಾರಲು ಮಾತ್ರ ಯೋಗ್ಯರು' ಎಂದು ಹೀಯಾಳಿಸಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಮಾತಿಗೆ ಪ್ರತಿಭಟನೆಯಾಗಿ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶುಕ್ರವಾರ ಸಂಜೆ ಶಾಸಕ ಪ್ರಮೋದ್ ಮಧ್ವರಾಜ್ ಅವರು ನಡೆಸುತ್ತಿದ್ದ ಜನಸಂಪರ್ಕ ಸಭೆಗೆ ನುಗ್ಗಿ ಎಲ್ಲರಿಗೂ ಉಚಿತವಾಗಿ ಚಹಾ ವಿತರಿಸಿದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಾಂಗಾಳ ವಿಲಾಸ್ ನಾಯಕ್ ನೇತೃತ್ವದ ಕಾರ್ಯಕರ್ತರ ತಂಡ ಕಳೆದ 2 ದಿನಗಳಿಂದ ವಿವಿಧ ಕಡೆಗಳಲ್ಲಿ ಜನರಿಗೆ ಉಚಿತ ಚಹಾ ವಿತರಿಸಿ ಮೋದಿ ಪರವಾಗಿ ಹೊಸ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅಜಿಲ್ಲಾಧ್ಯಕ್ಷರೊಂದಿಗೆ ಜಿಲ್ಲಾ ಬಿಜೆಪಿ ವಕ್ತಾರ ಮಟ್ಟಾರು ರತ್ನಾಕರ ಹೆಗ್ಡೆ, ಯುವ ಕಾರ್ಯಕರ್ತರಾದ ಹರೀಶ್ ಮಣಿಪಾಲ, ಆಕಾಶ್ ಶೆಟ್ಟಿ, ಅಭಿಷೇಕ್ ಜೈನ್ ಪಾಲ್ಗೊಂಡಿದ್ದರು.
ಅಂಗನವಾಡಿ ನೌಕರರ ಬೇಡಿಕೆ ಪರಿಶೀಲಿಸಿ ಕ್ರಮ: ಉಮಾಶ್ರೀ
ಉಡುಪಿ: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಮುಖ್ಯ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಉಡುಪಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾದ ನಿಯೋಗಕ್ಕೆ ಸಚಿವೆ ಈ ಭರವಸೆ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಕ್ರಮವಾಗಿ 3ನೇ ಮತ್ತು 4ನೇ ದರ್ಜೆಯ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು, ಅದಕ್ಕೆ ಪೂರ್ವಭಾವಿಯಾಗಿ ಗೌರವಧನ ಹೆಚ್ಚಿಸಬೇಕು, ಈಗಿನ ಧಾರಣೆಗನುಗುಣವಾಗಿ ದಿನಭತ್ಯೆ, ಪ್ರಭಾರ ಭತ್ಯೆ ಮುಂತಾದ 8 ಅಂಶಗಳ ಮನವಿಯನ್ನು ಶಾಸಕ ಪ್ರಮೋದ್ ಮಧ್ವರಾಜ್ ಸಹಕಾರದೊಂದಿಗೆ ಸಚಿವೆಗೆ ಸಲ್ಲಿಸಲಾಯಿತು. ನಿಯೋಗದಲ್ಲಿ ಸಂಘದ ಅಧ್ಯಕ್ಷೆ ಯಮುನಾ ಆರ್. ಕುಂದರ್, ಕಾರ್ಯದರ್ಶಿ ವೇದಾವತಿ, ಕೋಶಾಧಿಕಾರಿ ಬೇಬಿ ಶೆಟ್ಟಿ ಇದ್ದರು.
ಜನಸ್ನೇಹಿ ಆಸ್ಪತ್ರೆಯಾಗಿ ವೆನ್ಲಾಕ್: ಸಚಿವ ಖಾದರ್
ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೊಳಿಸಿ ಇನ್ನಷ್ಟು ಅಗತ್ಯ ಸೌಲಭ್ಯ ಕಲ್ಪಿಸಿ ಜನಸ್ನೇಹಿ ಆಸ್ಪತ್ರೆಯಾಗಿ ಪರಿವರ್ತಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಶನಿವಾರ ವೆನ್ಲಾಕ್ ಆಸ್ಪತ್ರೆಯಲ್ಲಿ ಇಲಾಖೆ ಅಧಿಕಾರಿಗಳು, ವೈದ್ಯರು, ಕೆಎಂಸಿ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು. ವೆನ್ಲಾಕ್ ಆಸ್ಪತ್ರೆ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ವಿಶ್ವಾಸ ಮೂಡುವಂತಾಗಬೇಕು. ಈಗ ಇರುವ ಯೋಜನೆಯಲ್ಲಿ ಅಲ್ಪ ಬದಲಾವಣೆ ತರಲಾಗುವುದು. ಇಲ್ಲಿ ಶೌಚಾಲಯ ಸಂಕೀರ್ಣ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಇಲಾಖೆಯ ಎಲ್ಲ ಕಚೇರಿಗಳನ್ನು ಒಂದೇ ಸೂರಿನಡಿ ತರಲು ರು. 5 ಕೋಟಿ ವೆಚ್ಚದಲ್ಲಿ ಆರೋಗ್ಯ ಭವನ ನಿರ್ಮಿಸಲಾಗುವುದು ಎಂದರು. ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್, ಆಯುಕ್ತ ವಿ.ಬಿ.ಪಾಟೀಲ್, ಡಾ.ರಾಜೇಶ್ವರಿ, ಡಾ.ಶಕುಂತಳಾ, ಮಕ್ಕಳ ಆಸ್ಪತ್ರೆ ಅಧೀಕ್ಷಕ ಡಾ.ಶಾಂತರಾಮ ಬಾಳಿಗ ಇದ್ದರು.
ಇಂದು ಕಾಂಚನೋತ್ಸವ ಸಮಾರೋಪ ಸಮಾರಂಭ
ಉಪ್ಪಿನಂಗಡಿ: ಸಂಗೀತ ಕ್ಷೇತ್ರದಲ್ಲಿ ಹೆಗ್ಗಳಿಕೆ ಪಡೆದಿರುವ ಕಾಂಚನದ ಸಂಗೀತ ಸಂಸ್ಥೆ ತನ್ನ 60ರ ಸಂಭ್ರಮದ 'ಕಾಂಚನೋತ್ಸವ'ದ ಸಮಾರೋಪ ಫೆ.2ರಂದು ನಡೆಯಲಿದೆ. ಈ ಪ್ರಯುಕ್ತ ಅಂದು, ಸಂಸ್ಥೆಯ ಆವರಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಗಾಡ್ ಆಫ್ ಇಂಡಿಯನ್ ವಯಲಿನ್, ಪದ್ಮಭೂಷಣ ಡಾ. ಎಲ್. ಸುಬ್ರಹ್ಮಣ್ಯಂ ಮತ್ತು ವಿದ್ವಾನ್ ಅಂಬಿ ಸುಬ್ರಹ್ಮಣ್ಯಂ ದ್ವಂದ್ವ ವಯಲಿನ್ ಕಛೇರಿ ಆಯೋಜಿಸಲಾಗಿದೆ. ಕಾಂಚನ ಸಂಗೀತ ಸಂಸ್ಥೆ 1954ರಲ್ಲಿ ಸಂಗೀತರತ್ನ ಕಾಂಚನ ವೆಂಕಟಸುಬ್ರಹ್ಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನ ಇವರಿಂದ ಸ್ಥಾಪನೆಗೊಂಡಿತು.ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ವರ್ಷಂಪ್ರತಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ದಕ್ಷಿಣ ಕನ್ನಡದ ತಿರುವೈಯ್ಯಾರ್ ಎಂದೇ ಪ್ರಸಿದ್ಧಿ ಪಡೆದಿರುವ, ಇದೀಗ 60ರ ಸಂಭ್ರಮವನ್ನು ಆಚರಿಸುತ್ತಿರುವ ಈ ಸಂಸ್ಥೆ 2013-14ನೇ ಸಾಲಿನಲ್ಲಿ ಹಲವಾರು ಕಾರ್ಯಕ್ರಮ ಹಾಗೂ ಕಛೇರಿಗಳನ್ನು ಆಯೋಜಿಸಿತ್ತು.
ಕೊಂಕಣಿ ಪುಸ್ತಕ ಕನ್ನಡಕ್ಕೆ ಅನುವಾದಗೊಳ್ಳಲಿ: ನಾ.ಡಿ.
ಮಂಗಳೂರು: ಕೊಂಕಣಿ ಭಾಷೆಯಲ್ಲಿ ರಚಿಸಿದ ಶ್ರೇಷ್ಠ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಕನ್ನಡಿಗರೂ ಓದುವಂತೆ ಅವಕಾಶ ಕಲ್ಪಿಸಿ ಎಂದು ಖ್ಯಾತ ಸಾಹಿತಿ ನಾ. ಡಿಸೋಜ ಹೇಳಿದರು. ವಿಶ್ವ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪೌಂಡೇಶನ್ ವತಿಯಿಂದ ಶನಿವಾರ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆದ ವಿಶ್ವ ಕೊಂಕಣಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 'ವಿಮಲಾ ಪೈ ವಿಶ್ವ ಕೊಂಕಣಿ ಜೀವಮಾನ ಸಾಧನೆ ಪ್ರಶಸಿ'ಯನ್ನು ಗೋವಾದ ಕೊಂಕಣಿ ಕವಿ ನಾಗೇಶ್ ಕರ್ಮಾಲಿ ಸ್ವೀಕರಿಸಿ ಮಾತನಾಡಿದರು.ಕುಡುಬಿ ಸಮಾಜ ಸೇವಕ ನಾರಾಯಣ ನಾಯಕ್, ಖಾರ್ವಿ ಸಂಘದ ಅಧ್ಯಕ್ಷ ಕೆ.ಬಿ. ಖಾರ್ವಿ, ಪೆರ್ಮನ್ನೂರು ರಮೇಶ್ ಪೈ, ಡಾ. ದೇವದಾಸ ಪೈ, ರಘುನಾಥ್ ಶೇಟ್, ಶೀಲಾ ಕೊಳಂಬಕರ್, ಮಾಧವ ಬೋರ್ಕರ್, ಲಿನಿಟಾ ವಿನೇಜಸ್ ಇವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ್ಲ ಬಸ್ತಿ ವಾಮನ ಶೆಣೈ, ಟಿ.ವಿ. ಮೋಹನದಾಸ್ ಪೈ, ಕೊಂಕಣಿ ಸಾಹಿತಿ ವಿಮಲ ವಿ ಪೈ ಇದ್ದರು.
ವೇಣೂರು: ಯಾತ್ರಿ ನಿವಾಸ ಇಂದು ಉದ್ಘಾಟನೆ
ಬೆಳ್ತಂಗಡಿ: ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿಗರ ಅನುಕೂಲಕ್ಕಾಗಿ ವೇಣೂರು ಕ್ಷೇತ್ರದಲ್ಲಿ ನಿರ್ಮಿಸಲಾದ ಯಾತ್ರಿ ನಿವಾಸದ ಉದ್ಘಾಟನಾ ಸಮಾರಂಭ ಭಾನುವಾರ ಸಂಜೆ 4 ಗಂಟೆಗೆ ನಡೆಯಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಮಫಲಕ ಅನಾವರಣ ಮಾಡಲಿದ್ದಾರೆ. ಸಚಿವ ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಲಿದ್ದಾರೆ. ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲ ಉಪಸ್ಥಿತರಿರುತ್ತಾರೆ. ಡಿ.ವಿ. ಸದಾನಂದ ಗೌಡ, ಯು.ಟಿ. ಖಾದರ್, ಕೆ.ಅಭಯಚಂದ್ರ ಜೈನ್, ಕೊರಗಪ್ಪ ನಾಯ್ಕ, ಎಸ್. ಅಂಗಾರ, ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೋ, ಬಿ.ಎ. ಮೊಯ್ದಿನ್ ಬಾವಾ, ಕ್ಯಾ. ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ನಳಿನ್ ಕುಮಾರ್ ಕಟೀಲು, ವಿ. ಧನಂಜಯ ಕುಮಾರ್, ಬೆಳ್ತಂಗಡಿ ತಾ.ಪಂ. ಅಧ್ಯಕ್ಷ ಕೇಶವ ಎಂ., ವೇಣೂರು ಗ್ರಾ.ಪಂ. ಅಧ್ಯಕ್ಷ ಸತೀಶ್ ಹೆಗ್ಡೆ ಉಪಸ್ಥಿತರಿರುತ್ತಾರೆ.
ಗೇಟ್ವಾಲ್ಗೆ ಹಾನಿ; ನೀರಿಲ್ಲದೆ ಜನರ ಪರದಾಟ
ಬಂಟ್ವಾಳ: ಇಲ್ಲಿನ ಜಕ್ರಿಬೆಟ್ಟುವಿನಲ್ಲಿರುವ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಬಳಿಯಿರುವ ಗೇಟ್ ವಾಲ್ ಅನ್ನು ವ್ಯಕ್ತಿಯೊಬ್ಬರು ಹಾನಿಗೊಳಿಸಿದ ಪರಿಣಾಮ ನಗರವಾಸಿಗಳು ಶುಕ್ರವಾರ ರಾತ್ರಿಯಿಂದ ಕುಡಿಯುವ ನೀರಿಲ್ಲದೆ ಪರದಾಡಬೇಕಾಯಿತು. ಸ್ಥಳೀಯ ಸದಸ್ಯರ ಅಣತಿಯಂತೆ ನಡೆದಿದೆ ಎನ್ನಲಾದ ಈ ಕೃತ್ಯದಿಂದ ಶನಿವಾರ ಮಧ್ಯಾಹ್ನದವರೆಗೂ ನೀರಿಲ್ಲದ ಕಾರಣ ಜನರು ಬಂಟ್ವಾಳ ಪುರಸಭೆಗೆ ಹಿಡಿಶಾಪ ಹಾಕಿದರು. ವಾರ್ಡ್ 5ರ ಲೆಕ್ಕೆಸರಿಪಾದೆಯಲ್ಲಿರುವ 2 ಮನೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುವುದಿಲ್ಲ ಎಂಬ ನೆಪದಲ್ಲಿ ಟ್ಯಾಂಕ್ನ ಬಳಿಯಿರುವ ನಗರ ಪ್ರದೇಶಕ್ಕೆ ನೀರು ಪೂರೈಕೆಯ ಪೈಪ್ಲೈನ್ನ ಗೇಟ್ವಾಲನ್ನು ವ್ಯಕ್ತಿಯೊಬ್ಬ ತಿರುವಿದ್ದರಿಂದ ಅದು ತುಂಡರಿಸಲ್ಪಟ್ಟು ನೀರು ಪೂರೈಕೆ ಸ್ಥಗಿತಗೊಂಡಿತ್ತು. ನೀರು ಪೂರೈಕೆ ಸ್ಥಗಿತಗೊಂಡಿರುವ ವಿಷಯ ತನಗೇ ಗೊತ್ತೇ ಇಲ್ಲ ಎಂದು ಉತ್ತರಿಸಿದ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಬಳಿಕ ಸಂಬಂಧಪಟ್ಟವರಿಗೆ ದೂರವಾಣಿ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಶನಿವಾರ ಮಧ್ಯಾಹ್ನದ ಬಳಿಕ ನೀರು ಪೂರೈಕೆಯಾಗುತ್ತಿದೆ.
ಎತ್ತಿನಹೊಳೆ ಕಾಮಗಾರಿಗೆ ಪರವಾನಗಿ ಸಿಕ್ಕಿಲ್ಲ: ಬಾಲಕೃಷ್ಣ ಶೆಟ್ಟಿ
ಮಂಗಳೂರು: 'ಎತ್ತಿನಹೊಳೆ ನೇತ್ರಾವತಿ ಉಪನದಿಯಾಗಿದ್ದು, ನೇತ್ರಾವತಿ ತಿರುವು ಮತ್ತು ಎತ್ತಿನಹೊಳೆ ಯೋಜನೆ ಎಂಬುವುದು ಬೇರೆ ಅಲ್ಲ ಒಂದೇ. ಯೋಜನೆ ಅಧ್ಯಯನ ಹಂತದಲ್ಲಿದೆಯೇ ಹೊರತು ಕಾರ್ಯರೂಪಗೊಳಿಸಲು ಪರವಾನಗಿ ಸಿಕ್ಕಿಲ್ಲ' ಎಂದು ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ಎನ್ ಶೆಟ್ಟಿ ಹೇಳಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರಾವತಿ ತಿರುವು ಯಾ ಎತ್ತಿನಹೊಳೆ ಯೋಜನೆ ವಿರೋಧಿಸಿ ಮುಖ್ಯಮಂತ್ರಿಯವರಿಗೆ ಬರೆದ ಮನವಿಗೆ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಎಂಜಿನಿಯರ್ ಪ್ರತ್ಯುತ್ತರ ನೀಡಿದ್ದಾರೆ ಎಂದರು. ಇತ್ತೀಚೆಗೆ ಕೇಂದ್ರ ಸಚಿವ ವೀರಪ್ಪ ಮೈಲಿಯವರು ರಾಜಕೀಯ ಉದ್ದೇಶಕ್ಕಾಗಿ ಪರಿಸರ ಖಾತೆ ಪಡೆದ ನಂತರ ಎತ್ತಿನಹೊಳೆ ಯಾ ನೇತ್ರಾವತಿ ತಿರುವು ಯೋಜನೆಯಲ್ಲಿ ಕುಡಿಯುವ ನೀರಿಗಾಗಿ ಎಂಬುವುದಾಗಿ ಪರಿಗಣಿಸಿ, ಸಾಧಕಬಾಧಕವನ್ನು ಮರೆಮಾಚಿ ತಿರುಚಿದ್ದಾರೆ ಎಂದರು.
ಆಶಾಜ್ಯೋತಿ 'ವಿಶಿಷ್ಟರಿಗಾಗಿ ವಿಶಿಷ್ಟ ಮೇಳ' ಇಂದು
ಮಂಗಳೂರು: ಮಂಗಳೂರಿನ ಸೇವಾ ಭಾರತಿ ಅಂಗಸಂಸ್ಥೆ ಆಶಾಜ್ಯೋತಿ ವತಿಯಿಂದ ಡೊಂಗರಕೇರಿ ಕೆನರಾ ಪ್ರೌಢಶಾಲೆಯಲ್ಲಿ ಫೆ.2ರಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ 'ವಿಶಿಷ್ಟರಿಗಾಗಿ ವಿಶಿಷ್ಟ ಮೇಳ' ಜರುಗಲಿದೆ. ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧ್ಯಕ್ಷತೆ ವಹಿಸುವರು. ಕಾರ್ಪೊರೇಶನ್ ಬ್ಯಾಂಕ್ ಉಪಮಹಾ ಪ್ರಬಂಧಕ ಡಿ.ಎಂ.ಮುಜುಂದಾರ್ ಅತಿಥಿಯಾಗಿ ಭಾಗವಹಿಸುವರು ಎಂದು ಆಶಾಜ್ಯೋತಿ ಅಧ್ಯಕ್ಷ ಶ್ರೀನಿವಾಸ ನಾಯಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗ್ಗೆ 9ಕ್ಕೆ ಲೊಯಲಾ ಸಭಾಭವನದಿಂದ ಶಾರೀರಿಕ, ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ಶೋಭಾಯಾತ್ರೆ ನಡೆಯಲಿದ್ದು, ಐಡಿಯಲ್ ಐಸ್ಕ್ರೀಮ್ ಪಾಲುದಾರ ಮುಕುಂದ ಕಾಮತ್ ಉದ್ಘಾಟಿಸುವರು. ರೇಲ್ವೆ ಪ್ರಯಾಣ ವೇಳೆ ಅಶಕ್ತ ವರ್ಗಕ್ಕೆ ನೀಡುವ ರಿಯಾಯ್ತಿ ಪಡೆಯಲು ಗುರುತಿನ ಚೀಟಿ ಬೇಕಾದವರು 2 ಪಾಸ್ಪೋರ್ಟ್ ಫೋಟೋ ಹಾಗೂ ಅಂಗ ಊನತೆ ಇರುವವರು ಊನತೆ ಕಂಡುಬರುವ ಪೂರ್ಣ ಆಕಾರದ 4 ಫೋಟೋ ತೆಗೆದುಕೊಂಡು ಬರುವಂತೆ ತಿಳಿಸಿದರು.
ಬೆಳ್ತಂಗಡಿ ತಾಪಂ ಸದಸ್ಯ ಕ್ಷಮೆ ಕೋರಲು ಆಗ್ರಹ
ಬೆಳ್ತಂಗಡಿ: ತಾಲೂಕು ಪಂಚಾಯಿತಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅವಮಾನಿಸಿ ಆಸ್ಪತ್ರೆ ಸೇರಲು ಕಾರಣರಾದ ತಾ.ಪಂ. ಸದಸ್ಯರು ಫೆ.4ರ ಮೊದಲು ನೊಂದ ಅಧಿಕಾರಿಯಲ್ಲಿ ಕ್ಷಮೆ ಕೇಳಬೇಕು. ತಪ್ಪಿದರೆ ಮುಂದೆ ನಡೆಯುವ ಕೆಡಿಪಿ ಸಭೆ, ತಾ.ಪಂ. ಸಭೆ ಹಾಗೂ ಯಾವುದೇ ಗ್ರಾಮ ಸಭೆಗಳಿಗೆ ಸರ್ಕಾರಿ ಅಧಿಕಾರಿಗಳು, ನೌಕರರು ಭಾಗವಹಿಸದೆ ಬಹಿಷ್ಕರಿಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆ ಎಚ್ಚರಿಕೆ ನೀಡಿದೆ.ನೌಕರರ ಸಭೆ ಶನಿವಾರ ಸಂಘದ ಅಧ್ಯಕ್ಷ ಕೆ. ಜಯಕೀರ್ತಿ ಜೈನ್ ಅಧ್ಯಕ್ಷತೆಯಲ್ಲಿ ಇಲ್ಲಿನ ಸುವರ್ಣ ಆರ್ಕೆಡ್ನಲ್ಲಿ ನಡೆಯಿತು. ಈ ಹಿಂದಿನ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಕ್ತದೊತ್ತಡದಿಂದ ಕುಸಿದುಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಸೌಜನ್ಯಕ್ಕಾದರೂ ಒಂದಿಬ್ಬರು ಸದಸ್ಯರನ್ನು ಹೊರತುಪಡಿಸಿ ತಾ.ಪಂ. ಅಧ್ಯಕ್ಷರಾಗಲೀ, ಸದಸ್ಯರಾಗಲೀ ಆಸ್ಪತ್ರೆಗೆ ಬಂದು ಅಧಿಕಾರಿಯ ಆರೋಗ್ಯದ ಬಗ್ಗೆ ವಿಚಾರಿಸಿಲ್ಲ. ಇದಕ್ಕೆ ಸಭೆಯಲ್ಲಿ ತೀವ್ರ ಖಂಡನೆ ವ್ಯಕ್ತವಾಯಿತು. ಯಾವುದೇ ಸರ್ಕಾರಿ ಅಧಿಕಾರಿ ಅಥವಾ ನೌಕರರ ವಿರುದ್ಧ ದೂರುಗಳಿದ್ದರೆ ನೋಟಿಸ್ ನೀಡಿ, ಕಾರಣ ಕೇಳಿ ವಿವರಣೆ ಪಡೆಯದೆ ಕ್ರಮ ಕೈಗೊಂಡರೆ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ರಸ್ತೆ ಅಗಲೀಕರಣಕ್ಕೆ ಒತ್ತಾಯ: ತೇಪೆ ಕಾಮಗಾರಿಗೆ ತಡೆ
ಮೂಲ್ಕಿ: ಸಂಪೂರ್ಣ ಹದಗೆಟ್ಟಿರುವ ಮೂಲ್ಕಿ- ಪಂಜಿನಡ್ಕ- ಕೊಲ್ಲೂರು- ಏಳಿಂಜೆ ರಸ್ತೆಯ ಹೊಂಡಗಳಿಗೆ ತೇಪೆ ಹಾಕಿ ಡಾಂಬರಿಕರಣ ಕಾರ್ಯ ಕೊಲ್ಲೂರು ಬಳಿ ಆರಂಭಗೊಂಡಿದ್ದು, ಇದಕ್ಕೆ ಗ್ರಾಮಸ್ಥರು ತಡೆ ಒಡ್ಡಿದ ಘಟನೆ ಶನಿವಾರ ನಡೆದಿದೆ. ರಸ್ತೆ ಅಗಲಗೊಳಿಸಿ ಡಾಂಬರಿಕರಣ ಮಾಡುವುದಾದರೆ ಮಾತ್ರ ದುರಸ್ತಿಗೆ ಅವಕಾಶ ನೀಡಲಾಗುವುದು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು. ರಸ್ತೆಯ ಹೊಂಡಗಳಿಗೆ ತೇಪೆ ಹಾಕುವ ಕಾರ್ಯ ನಡೆಯುತ್ತಿದ್ದ ಸಂದರ್ಭ ಕೊಲ್ಲೂರು ಪದವು ಬಳಿ ಗ್ರಾಮಸ್ಥರು ರಸ್ತೆಯಲ್ಲೇ ಕುಳಿತು ಕಾಮಗಾರಿ ನಡೆಯದಂತೆ ತಡೆಯೊಡ್ಡಿದರು. ಈ ಬಗ್ಗೆ 'ಕನ್ನಡಪ್ರಭ' ದಲ್ಲಿ ವರದಿ ಕೂಡ ಪ್ರಕಟವಾಗಿತ್ತು. ಇದೀಗ ಸರ್ಕಾರ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದು, ಅಗಲ ಕಿರಿದಾದ ರಸ್ತೆಗೆ ತೇಪೆ ಮಾಡುವುದಕ್ಕಿಂತ ಮುಂಚೆ ರಸ್ತೆ ಅಗಲೀಕರಣಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ನ್ಯಾಯವಾದಿ ಬಿಪಿನ್ ಪ್ರಸಾದ್, ರಿಕ್ಷಾ, ಕಾರು ಚಾಲಕರು, ಗ್ರಾಮಸ್ಥರು ಭಾಗವಹಿಸಿದ್ದರು.
ಹಂಪನಕಟ್ಟೆ ಸಿಗ್ನಲ್ ಫ್ರೀ ಸಚಿವ ರೈ ಪರಿಶೀಲನೆ
ಮಂಗಳೂರು: ಟ್ರಾಫಿಕ್ ಸಿಗ್ನಲ್ ಮುಕ್ತವಾಗಿ ಪರಿವರ್ತಿಸಿದ ನಗರದ ಹಂಪನಕಟ್ಟೆ ವೃತ್ತದ ಜಾಗಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಶುಕ್ರವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿ ಟ್ರಾಫಿಕ್ ಫ್ರೀ ಆಗಿರುವುದರಿಂದ ಸಂಚಾರ ವ್ಯವಸ್ಥೆ ಸುಗಮವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಹಂಪನಕಟ್ಟೆ ವೃತ್ತವನ್ನು ಇನ್ನಷ್ಟು ಸುಂದರೀಕರಣಗೊಳಿಸಿ ವ್ಯವಸ್ಥಿತ ಮಾಡಲು ಸೂಚಿಸಿದರು. ಟ್ರಾಫಿಕ್ ಫ್ರೀ ಆಗಿರುವುದರಿಂದ ಸಾರ್ವಜನಿಕರಿಗೆ ಆರಂಭದಲ್ಲಿ ತೊಂದರೆ ಆಗುತ್ತಿರುವುದು ಸಹಜ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು. ಹಂಪನಕಟ್ಟೆ ವೃತ್ತದಲ್ಲಿ ಫ್ಲೈಓವರ್ ಅಥವಾ ಅಂಡರ್ಪಾಸ್ ನಿರ್ಮಾಣಕ್ಕೆ ಗಂಭೀರ ಪರಿಶೀಲನೆ ನಡೆಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದ ಸಚಿವ ರಮಾನಾಥ ರೈ, ನಗರದಲ್ಲಿ ಸಂಚಾರ ವ್ಯವಸ್ಥೆ ಸುಗಮಕ್ಕೆ ಆದ್ಯತೆ ನೀಡಲಾಗುವುದು ಎಂದರು. ಜಿಲ್ಲಾಧಿಕಾರಿ ಇಬ್ರಾಹಿಂ, ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ, ಸಂಚಾರಿ ವಿಭಾಗ ಎಸಿಪಿ ಉದಯ ನಾಯಕ್ ಇದ್ದರು.
60 ದಿನಗಳ ಅಖಂಡ ಭಜನೆ
ಮಂಗಳೂರು: ಜಪ್ಪು ಅರೆಕೆಬೈಲು ಅಂಬಾಮಹೇಶ್ವರಿ ಭಜನೆ ಮಂಡಳಿ ದೇವರ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಸಂದರ್ಭ 60 ದಿನಗಳ ಅಖಂಡ ಭಜನೆ ಮಹೋತ್ಸವ ಆಯೋಜಿಸಲಾಗಿದೆ. ಫೆ.3ರಂದು ದೇವರ ಪುನರ್ ಪ್ರತಿಷ್ಠೆ ನಡೆಯಲಿದೆ. ಫೆ.2ರಂದು ಬೆಳಗ್ಗೆ ಭಜನೆ ಆರಂಭಗೊಂಡು 60 ದಿನಗಳ ಕಾಲ ನಿರಂತರವಾಗಿ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ.ಸೀತಾರಾಮ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಭಜನೆಯ ನಂದಾದೀಪವನ್ನು ಡಾ.ದಿಲೀಪ್ ಕುಮಾರ್ ಕೆ., ಶಾಂತಿ ದಿಲೀಪ್ ಕುಮಾರ್ ಬೆಳಗಿಸುವರು. 480ಕ್ಕೂ ಹೆಚ್ಚು ಭಜನೆ ಮಂಡಳಿಯನ್ನು ಸಂಪರ್ಕಿಸಿದ್ದು, ದಿನಕ್ಕೆ 3 ಗಂಟೆಗಳ ಕಾಲ ಭಜನೆ ಮಾಡಲಿದ್ದಾರೆ. ಎ.10ರಂದು ಬೆಳಗ್ಗೆ ಭಜನೆ ಮಂಗಲ ನಡೆಯಲಿದೆ. 71ದಿನಗಳ ಕಾಲ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಫೆ.1ರಂದು ವಜ್ರದೇಹಿ ಮಠ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಫೆ.2ರಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ, ಫೆ.3ರಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಭಾಗವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ತಾರನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ.ದಿಲೀಪ್ ಕುಮಾರ್ ಕೆ., ಮಂಡಳಿ ಕಾರ್ಯದರ್ಶಿ ಜಯಾನಂದ ಜೆ.ಬಂಗೇರ, ರಾಮದೇವಾಡಿಗ ಇದ್ದರು.
ಕರ್ನಾಟಕ ಮುಕ್ತವಿವಿ ಪರೀಕ್ಷೆ ಸಾಮೂಹಿಕ ನಕಲು
ಮಂಗಳೂರು: ಮಿಲಾಗ್ರಿಸ್ ಬಳಿಯ ಎಸ್ಎಂ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿದ್ದ ಕರ್ನಾಟಕ ಮುಕ್ತ ವಿವಿ ಪರೀಕ್ಷೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡಿ ಉತ್ತರ ಬರೆದಿದ್ದಾರೆ. ಶನಿವಾರ ಪರೀಕ್ಷೆ ಬರೆಯುತ್ತಿದ್ದ ವೇಳೆ ಪತ್ರಕರ್ತರು ಅಲ್ಲಿಗೆ ತೆರಳಿದಾಗ ಹುಡುಗರು, ಹುಡುಗಿಯರು ಸಾಮೂಹಿಕವಾಗಿ ನಕಲು ಮಾಡುತ್ತಿರುವುದು ಬೆಳಕಿಗೆ ಬಂತು. ಚೆನ್ನೈ ಮೂಲದ ಭಾರತ್ ಸ್ನಾತಕೋತ್ತರ ಕಾಲೇಜ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಆಯೋಜಿಸಲಾಗಿತ್ತು. ನಾಲ್ಕು ಕೋಣೆಗಳಲ್ಲಿ ಎಂಎಸ್ಸಿ, ಎಂಬಿಎ, ಎಂಎಸ್ಸಿ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದಲ್ಲಿ ಮುಕ್ತ ವಿವಿ ಪರೀಕ್ಷೆ ನಡೆಯುತ್ತಿತ್ತು. ಜ.30ಕ್ಕೆ ಆರಂಭವಾಗಿದ್ದು, ಫೆ.3ಕ್ಕೆ ಪರೀಕ್ಷೆ ಮುಗಿಯಲಿದೆ. ಅಲ್ಲಿ ಹೆಚ್ಚಿನವರು ಉದ್ಯೋಗದಲ್ಲಿ ಬಡ್ತಿಗಾಗಿ ಪರೀಕ್ಷೆ ಬರೆಯಲು ಬಂದಿದ್ದರು. ಪರೀಕ್ಷೆ ಮೇಲ್ವಿಚಾರಕರು ನಕಲು ಮಾಡುವಾಗ ಯಾವುದೇ ಅಡ್ಡಿ ಮಾಡಿಲ್ಲ.
ಪುತ್ತೂರು: ಮಕ್ಕಳ ನಾಟಕೋತ್ಸವ ಉದ್ಘಾಟನೆ
ಪುತ್ತೂರು: ಮಕ್ಕಳಿಗೆ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರಹಾಕಲು ಉತ್ತಮ ಅವಕಾಶವಾಗುತ್ತದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ. ಶನಿವಾರ ಡಾ. ಶಿವರಾಮ ಕಾರಂತರ ಬಾಲಭವನದಲ್ಲಿ ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಸಂಗೀತ, ನೃತ್ಯ, ಚಿತ್ರ ಹಾಗೂ ಕರಕುಶಲ ಕಲೆಗಳ ಕಾರ್ಯಾಗಾರ ಮತ್ತು ಮಕ್ಕಳ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಹಾಗೂ ತಾಲೂಕು ಬಾಲಭವನ ಸಮಿತಿ ಅಧ್ಯಕ್ಷ ಎಚ್.ಕೆ. ಕೃಷ್ಣಮೂರ್ತಿ, ಪುರಸಭಾಧ್ಯಕ್ಷೆ ವಾಣಿಶ್ರೀಧರ್, ತಾ.ಪಂ. ಅಧ್ಯಕ್ಷೆ ಶಶಿಪ್ರಭಾ ಸಂಪ್ಯ, ಸದಸ್ಯೆ ಜೋಹರಾ ನಿಸ್ಸಾರ್, ಬಾಲವನ ಸಮಿತಿ ಸದಸ್ಯೆ ಗೌರಿ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಕನ್ಯಾ ಇದ್ದರು. . ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಸ್ವಾಗತಿಸಿದರು. ಶಾಂತಿ ಹೆಗ್ಡೆ ವಂದಿಸಿದರು. ದೇವಿಪ್ರಸಾದ್ ನಿರೂಪಿಸಿದರು.
ಮರಳು ಪರಿವೀಕ್ಷಣಾ ಸಮಿತಿ ಅಧಿಕಾರಿಗಳ ಸಭೆ
ಪುತ್ತೂರು: ಮರಳು ಗಣಿಗಾರಿಕೆ ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಮರಳು ನೀತಿ ಜಾರಿಗೊಳಿಸಲಾಗಿದ್ದು, 10 ಎಕ್ರೆ ಜಾಗವನ್ನು ಬ್ಲಾಕ್ ಆಗಿ ಪರಿವರ್ತಿಸಲಾಗಿದೆ. ಪುತ್ತೂರು ಉಪವಿಭಾಗದಲ್ಲೂ ತಿದ್ದುಪಡಿ ನಿಯಮಾವಳಿ 13(6)ರಂತೆ ತಾಲೂಕು ಮರಳು ಪರಿವೀಕ್ಷಣಾ ಸಮಿತಿ ರಚಿಸಲಾಗಿದೆ ಎಂದು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಹೇಳಿದರು. ಅವರು ಶನಿವಾರ ರಾಜ್ಯ ಸರ್ಕಾರದ ಉಪಖನಿಜ ರಿಯಾಯಿತಿ ನಿಯಮಾವಳಿ ತಿದ್ದುಪಡಿ 2013ರಂತೆ ತಾಲೂಕು ಮರಳು ಪರಿವೀಕ್ಷಣಾ ಸಮಿತಿ ಸಭೆ ನಡೆಸಿದರು.ಮರಳು ಸಾಗಾಟದ ಮೇಲೆ ಕರಾವಳಿ ಜಿಲ್ಲೆಗೆ ಹಿಂದಿನ ಮರಳು ನೀತಿಯಂತೆ ವಿನಾಯಿತಿಗಳು ಮುಂದುವರಿಯಲಿ ಎಂದು ಕೃಷ್ಣಮೂರ್ತಿ ಹೇಳಿದರು.ಕಮಿಟಿಯಲ್ಲಿ ತಹಸೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಸಮಿತಿ ಅಧಿಕಾರಿಗಳು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಇರುತ್ತಾರೆ ಎಂದು ಹೇಳಿದರು. ತಹಸೀಲ್ದಾರ್ ಎಂ.ಟಿ. ಕುಳ್ಳೇಗೌಡ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಗ್ರೇಟರ್ ಮಂಗಳೂರಿಗೆ ಮೈದಿನ್ ಬಾವ ವಿರೋಧ
ಮಂಗಳೂರು: ಗ್ರೇಟರ್ ಮಂಗಳೂರು ನಿರ್ಮಾಣಕ್ಕೆ ವಿರೋಧವಿದ್ದು, ಮುಖ್ಯಮಂತ್ರಿಯವರಿಗೆ ಆಕ್ಷೇಪಣೆ ಪತ್ರ ಕಳುಹಿಸಿದ್ದೇನೆ ಎಂದು ಮಂಗಳೂರು ಉತ್ತರ ಶಾಸಕ ಮೈದಿನ್ ಬಾವ ಹೇಳಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೇಟರ್ ಮಂಗಳೂರು ನಿರ್ಮಾಣದಿಂದ ಪಾಲಿಕೆಯ ಆಸುಪಾಸಿನ 10 ಪಂಚಾಯ್ತಿಗಳು ನಿರ್ಲಕ್ಷ್ಯಕ್ಕೆ ಒಳಪಡುತ್ತದೆ. ಈ ಕಾರಣದಿಂದ ಗ್ರೇಟರ್ ಮಂಗಳೂರನ್ನು ವಿರೋಧಿಸುತ್ತೇನೆ ಎಂದರು. ಗ್ರೇಟರ್ ಮಂಗಳೂರು ನಿರ್ಮಾಣಕ್ಕೆ ಒಟ್ಟು ಜನಸಂಖ್ಯೆ 5 ಲಕ್ಷ ಇರಬೇಕು. ಆದರೆ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 4.5 ಲಕ್ಷ ಜನಸಂಖ್ಯೆಯಿದ್ದು, ಉಳಿದ ಜನಸಂಖ್ಯೆ ಭರ್ತಿಗಾಗಿ ಗುರುಪುರ, ಉಳಾಯಿಬೆಟ್ಟು, ಅಡ್ಯಾರ್ ಕ್ಷೇತ್ರವನ್ನು ಸೇರ್ಪಡೆಗೊಳಿಸಲಿ ಎಂದು ಹೇಳಿದರು. ಸುರತ್ಕಲ್ನಲ್ಲಿ ಆರ್ಟಿಐ ಕಚೇರಿ ಸ್ಥಾಪಿಸಲು ಉದ್ದೇಶಿಸಿದ್ದು, ಕಟ್ಟಡ ಬಾಡಿಗೆ ಪಡೆಯಲಾಗಿದೆ. ಅಧಿಕಾರಿಗಳ ನಿಯೋಜನೆ ಪ್ರಕ್ರಿಯೆ ನಡೆಯುತ್ತಿದ್ದು, ಫೆಬ್ರವರಿ ತಿಂಗಳೊಳಗೆ ಕಚೇರಿ ತೆರೆಯಲಾಗುವುದು ಎಂದರು.
ರಾಡಾರ್ ವೈಫಲ್ಯದಿಂದ ದುರಂತ: 812 ಫೌಂಡೇಶನ್
ಮುಂಗಳೂರು: ಬಜಪೆ ವಿಮಾನ ನಿಲ್ದಾಣದ ರನ್ವೇ ಪಕ್ಕದಲ್ಲಿ ರಾಡಾರ್ ಕಂಬ ನಿಯಮ ಮೀರಿ ಹಾಕಿದ ಕಾರಣ 158 ಪ್ರಯಾಣಿಕರು ಸಾಯಬೇಕಾಯಿತು ಎಂದು 812 ಫೌಂಡೇಶನ್ ಆರೋಪಿಸಿದೆ. ರಾಡಾರ್ ಕೆಲಸ ಮಾಡದಿರುವುದರಿಂದ ದುರಂತ ನಡೆಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಗೊತ್ತಿದ್ದೂ ನಿರ್ಲಕ್ಷ್ಯ ವಹಿಸಿದ್ದರಿಂದ ವಿಮಾನ ನಿಲ್ದಾಣ 158 ಕೊಲೆಗೆ ಹೊಣೆ ಹೊರಬೇಕು ಎಂದು ಫೌಂಡೇಶನ್ ವಕೀಲ ಯಶವಂತ ಶೆಣೈ ಶನಿವಾರ ಪತ್ರಕರ್ತರ ಎದುರು ವಾದ ಮಂಡಿಸಿದರು. ಕೋರ್ಟ್ನಲ್ಲಿ ತಡೆಯಾಜ್ಞೆ ತೆರವು ಮಾಡದೆ ಪತ್ರಕರ್ತರ ಮುಂದೆ ವಾದ ಮಾಡಿ ಪ್ರಯೋಜನ ಏನು ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದ ಯಶವಂತ್, ಕೋರ್ಟ್ ವ್ಯವಸ್ಥೆಯನ್ನೇ ಪ್ರಶ್ನಿಸುತ್ತೇನೆ ಎಂದು ಸವಾಲ್ ಹಾಕಿದರು. ಬಜಪೆ ನಿಲ್ದಾಣದಲ್ಲಿ ಬೋಯಿಂಗ್ ವಿಮಾನ ಇಳಿಯಲು ಸೂಕ್ತವಾಗಿಲ್ಲ. ಆದರೆ ಹಜ್ ಯಾತ್ರಾರ್ಥಿಗಳನ್ನು ಹೊತ್ತ ವಿಮಾನಗಳು ಹೋಗುತ್ತವೆ ಮತ್ತು ಬಂದಿಳಿಯುತ್ತವೆ. ಜನರ ಜೀವ ಮುಖ್ಯ. ಹಜ್ ಯಾತ್ರೆ ಮುಖ್ಯವೇ, ಜನರ ಜೀವ ಮುಖ್ಯವೇ ಎಂದು ಅವರು ಪ್ರಶ್ನಿಸಿದರು. 812 ಫೌಂಡೇಶನ್ ಏರ್ಇಂಡಿಯಾ ಎಕ್ಸ್ಪ್ರೆಸ್ ಪೈಲಟ್ ಪರವಾಗಿ ಕೋರ್ಟ್ನಲ್ಲಿ ವಾದ ಮಂಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

