ಉಡುಪಿ

ಅತ್ಯಾಚಾರ ಪ್ರಕರಣ: ಸಾಕ್ಷ್ಯ ನುಡಿದ ಸಂತ್ರಸ್ತೆ

Published On :

ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿದ್ಯಾರ್ಥಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆಗೆ ಬಹಳ ದೊಡ್ಡ ತಿರುವು ಸಿಕ್ಕಿದೆ. ಸ್ವತಃ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯೇ ಸೋಮವಾರ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಸಾಕ್ಷಿ ನುಡಿದಿದ್ದಾಳೆ.
 ಈ ಪ್ರಕರಣದ ವಿಚಾರಣೆಯಲ್ಲಿ ಇದುವರೆಗೆ ಒಟ್ಟು 24 ಸಾಕ್ಷಿಗಳ ವಿಚಾರಣೆ ನಡೆದಿದೆ. ಅದರಲ್ಲಿ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯೊಬ್ಬಳೇ ಪ್ರತ್ಯಕ್ಷ ಸಾಕ್ಷಿ, ಉಳಿದವರೆಲ್ಲರೂ ಸಾಂದರ್ಭಿಕ ಸಾಕ್ಷಿಗಳಾಗಿದ್ದಾರೆ. 2013ರ ಜೂ. 20ರಂದು ಮಧ್ಯರಾತ್ರಿ ಈ ವಿದ್ಯಾರ್ಥಿನಿ ಕಾಲೇಜಿನ ಗ್ರಂಥಾಲಯದಿಂದ ಅನತಿ ದೂರದಲ್ಲಿರುವ ತನ್ನ ವಸತಿಗೃಹಕ್ಕೆ ನಡೆದುಕೊಂಡು ಹೋಗುವಾಗ 3 ಮಂದಿ ಆಟೋ ಚಾಲಕರು ಆಕೆಯನ್ನು ಅಪಹರಿಸಿ ಸುಮಾರು 10 ಕಿ.ಮೀ. ದೂರದ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ ಮರಳಿ ಮಣಿಪಾಲಕ್ಕೆ ತಂದು ಬಿಟ್ಟಿದ್ದರು. ನಂತರ ಪೊಲೀಸರು ಈ ಮೂರು ಮಂದಿ ಆಟೋ ಚಾಲಕರನ್ನು ಮತ್ತು ಅವರೊಂದಿಗೆ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಇತರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
 ವೈದ್ಯಕೀಯ ಪರೀಕ್ಷೆಗಳಿಂದ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಸಾಬೀತಾಗಿತ್ತು. ಇಡೀ ಪ್ರಕರಣಕ್ಕೆ ಆಕೆಯೇ ಪ್ರತ್ಯಕ್ಷ ಸಾಕ್ಷಿಯಾದ್ದರಿಂದ ಆಕೆಯ ಹೇಳಿಕೆ ಮುಖ್ಯವಾಗಿತ್ತು. ಆದರೂ, ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಪೊಲೀಸರಿಗೆ ಹೇಳಿಕೆ ನೀಡಲು ಒಪ್ಪಿರಲಿಲ್ಲ, ಆದ್ದರಿಂದ ಪ್ರಕರಣದ ದೋಷಾರೋಪಣ ಸಲ್ಲಿಕೆಗೆ ತೊಂದರೆಯಾಗಿತ್ತು. ನಂತರ ಸುದೀರ್ಘ ಕಾನೂನು ಪ್ರಕ್ರಿಯೆಗಳ ನಂತರ ಜ. 20ರಿಂದ ವಿಚಾರಣೆ ಆರಂಭವಾಗಿದೆ. ಆಕೆಗೆ ಸಾಕ್ಷಿ ಹೇಳುವಂತೆ ನ್ಯಾಯಾಲಯ ನೋಟಿಸ್ ನೀಡಿದ್ದರೂ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಆಕೆಗೆ ಪರೀಕ್ಷೆಗಳು ನಡೆಯುತ್ತಿದ್ದರಿಂದ ಆಕೆಯ ವಿಚಾರಣೆ ಮುಂದೂಡಲಾಗಿತ್ತು. ಅದರಂತೆ ಸೋಮವಾರ ನ್ಯಾಯಾಲಯಕ್ಕೆ ಆಗಮಿಸಿದ ಆಕೆ ಸಾಕ್ಷಿ ನುಡಿದಿದ್ದಾಳೆ. ಅತ್ಯಂತ ಗೌಪ್ಯವಾಗಿ ನಡೆದ ಆಕೆಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದೊಳಗಿದ್ದ ಇತರ ವಕೀಲರನ್ನು ಮತ್ತು ಸಾರ್ವಜನಿಕರನ್ನು ಹೊರಗೆ ಕಳುಹಿಸಲಾಯಿತು.
ನ್ಯಾಯಾಧೀಶರು, ಅವರ ಸಿಬ್ಬಂದಿ, ಆರೋಪಿಗಳು, ಪರ ಮತ್ತು ವಿರೋಧಿ ವಕೀಲರ ಉಪಸ್ಥಿತಿಯಲ್ಲಿ ಮಾತ್ರ ಆಕೆ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಸಾಕ್ಷಿ ಹೇಳಿದ್ದಾಳೆ ಎಂದು ಸರ್ಕಾರಿ ಅಭಿಯೋಜಕ ಟಿ.ಎಸ್. ಜಿತೂರಿ ಹೇಳಿದ್ದಾರೆ. ಗೌಪ್ಯ ವಿಚಾರಣೆಯಾದ್ದರಿಂದ ವಿವರಗಳನ್ನು ಬಹುರಂಗಪಡಿಸುವಂತಿಲ್ಲ ಎಂದು ಹೇಳಿದ್ದಾರೆ.
 ಪೊಲೀಸರಿಗೆ ಹೇಳಿಕೆ ನೀಡಲು ನಿರಾಕರಿಸಿದಂತೆ, ಆಕೆ ಸಾಕ್ಷಿ ಹೇಳದಿದ್ದರೆ ಪ್ರಕರಣ ಬಹಳ ದುರ್ಬಲವಾಗುತ್ತದೆ, ಆರೋಪಿಗಳಿಗೆ ಶಿಕ್ಷೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ ಎನ್ನುವ ಭಯವಿತ್ತು. ಆದರೆ, ಇದೀಗ ಆಕೆಯ ಸಾಕ್ಷಿ ನುಡಿರುವುದರಿಂದ ಸರ್ಕಾರಿ ಅಭಿಯೋಜಕರಿಗೆ ಮತ್ತು ಈ ಪ್ರಕರಣ ಹಿಂದೆ ಹಗಲು ರಾತ್ರಿ ದುಡಿದ ಪೊಲೀಸ್ ಅಧಿಕಾರಿಗಳಿಗೆ ಪ್ರಕರಣ ಬಲವಾಗಿದ್ದು, ಆರೋಪಿಗಳು ಶಿಕ್ಷೆಗೆ ಇನ್ನಷ್ಟು ಹತ್ತಿರವಾಗಿರುವುದರಿಂದ ಸಂತಸವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.