ಉಡುಪಿ

ನಾಡೇಲ ಮೈಕ್ರೋಸಾಫ್ಟ್ ಸಿಇಒ; ಎಂಐಟಿಯಲ್ಲಿ ಸಂಭ್ರಮ

Published On :

ಮಣಿಪಾಲ: ಅಮೆರಿಕದ ಮೈಕ್ರೋಸಾಫ್ಟ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಹೈದರಾಬಾದಿನ ಸತ್ಯಾ ನಾಡೇಲ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಅವರು, ಉಡುಪಿ ಜಿಲ್ಲೆಯ ಮಣಿಪಾಲದ ಎಂಐಟಿ (ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯ ಹಳೆವಿದ್ಯಾರ್ಥಿ.
 1988ರಲ್ಲಿ ಅವರು ಎಂಐಟಿಯಲ್ಲಿ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಅವರ ಈ ಸಾಧನೆಯಿಂದ ಮಣಿಪಾಲ ವಿ.ವಿ.ಯಲ್ಲಿ ಹಬ್ಬದ ವಾತಾವರಣ ಉಂಟಾಗಿದೆ.
ಹೆಮ್ಮೆ, ಸ್ಫೂರ್ತಿಯ ವಿಚಾರ: ನಾಡೇಲ ಸಾಧನೆ ಮಣಿಪಾಲ ವಿ.ವಿ. ಮಟ್ಟಿಗೆ ಅತ್ಯಂತ ಹೆಮ್ಮೆಯ ಮತ್ತು ವಿ.ವಿ.ಯ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ವಿಷಯವಾಗಿದೆ ಎಂದು ಮಣಿಪಾಲ ವಿ.ವಿ.ಯ ಕುಲಪತಿ ಡಾ. ರಾಮದಾಸ ಎಂ. ಪೈ ಹೇಳಿದ್ದಾರೆ.
 ಎಂಐಟಿಯ ಈಗಿನ ನಿರ್ದೇಶಕ ಡಾ. ವಿನೋದ್ ವಿ. ಥಾಮಸ್ ಅಂದು ನಾಡೇಲ ಅವರ ಪ್ರಾಧ್ಯಾಪಕರಾಗಿದ್ದರು. ತಮ್ಮ ಶಿಷ್ಯ ನಾಡೇಲ ಈ ಸ್ಥಾನಕ್ಕೆ ಏರಿರುವುದಕ್ಕೆ ಅವರು ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ.
 ಸತ್ಯ ನಾಡೇಲ ಶ್ರದ್ಧೆಯ ವಿದ್ಯಾರ್ಥಿಯಾಗಿದ್ದರು. ಉನ್ನತ ಶ್ರೇಣಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಅವರು ಎಂಐಟಿಯ ವಿದ್ಯಾರ್ಥಿಗಳಿಗೆ ಇನ್ನಷ್ಟು ಸಾಧನೆ ಮಾಡುವುದಕ್ಕೆ ಬಹಳ ದೊಡ್ಡ ಗುರಿಯಾಗಿದ್ದಾರೆ. ಎಂಐಟಿಯ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಯಂತೂ ತುಂಬಾ ಹೆಮ್ಮೆಪಡುತ್ತಿದ್ದಾರೆ ಎಂದು ಡಾ. ಥಾಮಸ್ ಹೇಳಿದ್ದಾರೆ.
ಇನ್ನಷ್ಟು ಸಾಧಕರು: ಸತ್ಯ ನಾಡೇಲ ಮಾತ್ರವಲ್ಲ ಅನೇಕ ಮಂದಿ ಎಂಐಟಿಯ ಹಳೆವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿ ಉತ್ತಮ ಸ್ಥಾನಮಾನದಲ್ಲಿದ್ದಾರೆ. ಅವರಲ್ಲಿ ಅನಂತ್ ಜೆ. ತಲೌಲಿಕರ್ (1984, ಮೆಕ್ಯಾನಿಕಲ್  ಇಂಜಿನಿಯರಿಂಗ್) ಕಮ್ಮಿನ್ಸ್  ಇಂಡಿಯಾ ಕಂಪನಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದಾರೆ. ರಾಜೀವ್ ಪೂರಿ (1989, ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಶನ್  ಇಂಜಿನಿಯರಿಂಗ್) ನೋಕಿಯಾ ಸೊಲ್ಯೂಶನ್ಸ್  ಆಂಡ್ ನೆಟ್‌ವರ್ಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಪಿ.ವಿ. ಶ್ರೀಧರ್ (1979, ಎಲೆಕ್ಟ್ರಾನಿಕ್  ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್) ಆಪೆಲ್ ಕಂಪನಿ ನಿರ್ದೇಶಕರಾಗಿದ್ದಾರೆ. ಗ್ಲೆನ್ವಿಲ್ಲಾ ಡಿಸಿಲ್ವ (1979, ಕೆಮಿಕಲ್  ಎಂಜಿನಿಯರಿಂಗ್) ವೋಲ್ವೋ ಕನ್‌ಸ್ಟ್ರಕ್ಷನ್  ಎಕ್ವಿಪ್ಮೆಂಟ್ ಕಂಪನಿಯ ಬಿಸಿನೆಸ್  ಡೆವೆಲಪ್‌ಮೆಂಟ್ ಏಶಿಯಾ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.  ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರೂ ಮಣಿಪಾ ಎಂಐಟಿಯ ಹಳೆ ವಿದ್ಯಾರ್ಥಿ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.