ವ್ಯಾಟ್ ಹೊರೆ: ರಾಜ್ಯ ಮದ್ಯ ಮಾರಾಟಗಾರರ ಸಂಘ ಖಂಡನೆ
ಉಡುಪಿ: ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಬಾರ್- ರೆಸ್ಟೋರೆಂಟ್ಗಳು, ನಗರ ಪ್ರದೇಶದ ಕ್ಲಬ್, ವಸತಿ ಗೃಹಗಳು ಮತ್ತು ತಾರಾ ಹೊಟೇಲ್ಗಳು ಮಾರಾಟ ಮಾಡುವ ಮದ್ಯದ ಮೇಲೆ ಶೇ 5.5ರಷ್ಟು ವ್ಯಾಟ್ (ಮೌಲ್ಯ ವರ್ಧಿತ ತೆರಿಗೆ) ವಿಧಿಸಿರುವುದನ್ನು ರಾಜ್ಯ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಎಸೋಸಿಯೇಶನ್ ತೀವ್ರವಾಗಿ ಖಂಡಿಸಿದೆ.
ಫೆಡರೇಶನ್ನ ರಾಜ್ಯದ 20 ಜಿಲ್ಲಾ ಮದ್ಯ ಮಾರಾಟಗಾರರ ಸಂಘಗಳ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಮದ್ಯ ಮಾರಾಟಗಾರರನ್ನು ಜೀತದಾಳಿನಂತೆ ನಡೆಸಿಕೊಳ್ಳುತ್ತಿದೆ. 2002ರಲ್ಲಿ ಆಗಿನ ಸರ್ಕಾರ ಮದ್ಯ ಮಾರಾಟಗಾರರನ್ನು ವಾಣಿಜ್ಯ ತೆರಿಗೆ ಇಲಾಖೆಯಿಂದ ಹೊರಗಿಟ್ಟು ದೊಡ್ಡ ಉಪಕಾರ ಮಾಡಿತ್ತು. ಆದರೆ ಈಗ ಪುನಃ ಶೇ.5.5 ವ್ಯಾಟ್ ವಿಧಿಸಿ, 'ನೀವು ದುಡಿದದ್ದನ್ನೆಲ್ಲಾ ಸರ್ಕಾರಕ್ಕೆ ನೀಡಿ, ನಿಮ್ಮ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿ ಮಲಗಿ' ಎಂದು ಹೇಳಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆಗಳು: ವ್ಯಾಟ್ ರದ್ದುಗೊಳಿಸುವುದರ ಜೊತೆಗೆ ರಾಜ್ಯದಲ್ಲಿ ಹೊಸ ಪರವಾನಗಿ ನೀಡಬಾರದು, ಹೆಚ್ಚಿಸಿರುವ ಮದ್ಯದ ದರ ಇಳಿಸಬೇಕು, ಸನ್ನದು ಶುಲ್ಕ ಹೆಚ್ಚಿಸಬಾರದು, ವೈನ್ ಶಾಪ್ಗಳಲ್ಲಿ ಮದ್ಯ ಸೇವನಗೆ ಅನುಮತಿ ನೀಡಬೇಕು, ಬಾರ್- ರೆಸ್ಟೋರೆಂಟ್ಗಳಲ್ಲಿ ಆಹಾರದ ಮೇಲೆ ವಿಧಿಸುವ ಮಾರಾಟ ತೆರಿಗೆಯನ್ನು ಇತರ ಮಾಂಸಾಹಾರಿ ಹೊಟೇಲ್ಗಳಿಗೆ ಸಮಗೊಳಿಸಬೇಕು, ಈಗಾಗಲೇ 362 ಎಂಎಸ್ಐಎಲ್ ಅಂಗಡಿಗಳಿದ್ದು, ಇನ್ನೂ ಹೆಚ್ಚು ಅಂಗಡಿಗಳನ್ನು ತೆರೆಯಬಾರದು, 5 ವರ್ಷಕ್ಕೊಮ್ಮೆ ಸನ್ನದು ನವೀಕರಣಕ್ಕೆ ಕಾನೂನು ತಿದ್ದುಪಡಿ ಮಾಡಬೇಕು, ಮದ್ಯದಂಗಡಿಗಳಿಗೆ ಒಂದಕ್ಕಿಂತ ಹೆಚ್ಚು ಬಾಗಿಲು ಹೊಂದಲು ಅವಕಾಶ ನೀಡಬೇಕು, ಚಿಲ್ಲರೆ ಮದ್ಯ ಮಾರಾಟ ಅಂಗಡಿಗಳಲ್ಲಿ ಪಾರ್ಸೆಲ್ ಕೊಡಲು ಅನುಮತಿ ನೀಡಬೇಕು, ಸನ್ನದು ನವೀಕರಣ ಸರಳಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಹೋರಾಟ: ರಾಜ್ಯ ಸರ್ಕಾರ ಬಜೆಟ್ನಲ್ಲಿ ವಿಧಿಸಿರುವ ವ್ಯಾಟ್ ವಿರೋಧಿಸಿ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲು ಫೆಡರೇಶನ್ ತೀರ್ಮಾನಿಸಿದೆ. ಫೆ.20ರಂದು ರಾಜ್ಯದ ಎಲ್ಲ ಜಿಲ್ಲೆಗಳ ಸಂಘಗಳ ಸಭೆ ಕರೆಯಲಾಗಿದೆ ಮತ್ತು ಅದರಲ್ಲಿ ಹೋರಾಟದ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಗೋವಿಂದರಾಜ್ ಹೆಗ್ಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ವಿವಿಧ ಪದಾಧಿಕಾರಿಗಳಾದ ಜಯರಾಮ ಶೆಟ್ಟಿ, ಜನಾರ್ದನ, ಶೋಧನ್ ಕುಮಾರ್ ಶೆಟ್ಟಿ, ಮನೋಹರ ಶೆಟ್ಟಿ, ಸುಭಾಶ್ಚಂದ್ರ ಹೆಗ್ಡೆ, ನವೀನ್ ಕುಮಾರ್, ಅರುಣ್ ಕುಮಾರ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

