ಬಾಬು ಅಮೀನ್ಗೆ ಗೌ. ಡಾಕ್ಟರೇಟ್ ನೀಡಲು ಹಕ್ಕೊತ್ತಾಯ
ಉಡುಪಿ: ಜಾನಪದ ಸಂಶೋಧನೆ, ಯಕ್ಷಗಾನ, ಸಾಹಿತ್ಯ ರಚನೆಗಳ ಮೂಲಕ ಸೃಜನಶೀಲತೆಯನ್ನು ಮೆರೆದ, ತುಳು- ಕನ್ನಡದ ಹಿರಿಯ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರಿಗೆ ಗೌರವ ಡಾಕ್ಟರೇಟ್ ಪದವಿಗೆ ಮಂಗಳೂರು ವಿವಿ ಪರಿಗಣಿಸಬೇಕು ಎಂದು ಅಮೀನ್ ಅವರ ಅಭಿಮಾನಿಗಳ ಹಕ್ಕೊತ್ತಾಯ ಆರಂಭವಾಗಿದೆ.
1982ರಲ್ಲಿ ಕೋಟಿ ಚೆನ್ನಯ ಕೃತಿಯಿಂದ ಇತ್ತೀಚಿನ ತುಳುನಾಡ ದೈವಗಳು ಬೃಹತ್ ಕೃತಿಯವರೆಗೆ ಸುಮಾರು 14 ಕೃತಿಗಳನ್ನು ಪ್ರಕಟಿಸಿದ್ದು, ಅದರಲ್ಲಿ ಪ್ರೊ. ಮೋಹನ್ ಕೋಟ್ಯಾನ್ ಅವರೊಂದಿಗೆ ರಚಿಸಿದ 'ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ' ಕನ್ನಡ ಜಾನಪದದ ಮುಖ್ಯ ಕೃತಿಯಾಗಿದೆ. ತುಳುನಾಡ ಜಾನಪದ ಆಚರಣೆಗಳು, ದೈವದ ಮಡಿಲಲ್ಲಿ, ನುಡಿಕಟ್ಟ್, ತುಳುನಾಡ ದೈವಗಳು, ತುಳುವೆರೆ ಮದಿಮೆ ವಿಶಿಷ್ಟ ಕೃತಿಗಳಾಗಿವೆ. ಹೆಚ್ಚಿನವು ಐದಾರು ಮುದ್ರಣಗಳನ್ನು ಕಂಡಿವೆ.
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕುಶಿ ಜಾನಪದ ಪ್ರಶಸ್ತಿ, ಕರ್ನಾಟಕ ತುಳು ಅಕಾಡೆಮಿ ಗ್ರಂಥ ಪ್ರಶಸ್ತಿ, ಗೌರವ ಪ್ರಶಸ್ತಿ, ಸಂದೇಶ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡ ಬಾಬು ಅಮೀನ್ ಅವರು ದೇಶ ವಿದೇಶಗಳಲ್ಲಿ ಹಲವಾರು ಬಾರಿ ಸನ್ಮಾನ - ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಬರಹಗಾರರಾಗಿ, ಅಂಕಣಕಾರರಾಗಿಯೂ ಗುರುತಿಸಲ್ಪಟ್ಟಿದ್ದಾರೆ.
ಕೇವಲ ಎಸ್ಎಸ್ಎಲ್ಸಿ ಶಿಕ್ಷಣ ಪಡೆದು ಸಂಶೋಧನೆಯನ್ನು ಹವ್ಯಾಸವಾಗಿಟ್ಟುಕೊಂಡು ಮಹತ್ವದ ಸಾಧನೆ ಮಾಡಿರುವ ಇಂತಹ ಹಿರಿಯರನ್ನು ಗುರುತಿಸುವುದು ವಿವಿ ಕರ್ತವ್ಯವಾಗಿದೆ.
ಸಂಶೋಧನೆಯೆಂದರೆ ಅಕಾಡೆಮಿಕ್ ಸಂಶೋಧನೆ ಮಾತ್ರ ಎಂಬ ಭ್ರಮೆಯಿಂದ ಹೊರಬಂದು ಹಿತ್ತಲಗಿಡ ಮದ್ದಲ್ಲ ಎಂಬ ಧೋರಣೆಯನ್ನು ಬಿಟ್ಟು ಮಂಗಳೂರು ವಿವಿಯ ಇಂತಹ ಹಿರಿಯ ವಿದ್ವಾಂಸರನ್ನು ಗೌರವ ಡಾಕ್ಟರೇಟ್ ಪದವಿಗೆ ಪರಿಗಣಿಸಬೇಕು.
ರಾಜಕೀಯ ಮತ್ತು ಆರ್ಥಿಕ ಶಕ್ತಿಯೇ ಗೌರವಗಳಿಗೆ ಮಾನದಂಡವಾಗಿರುವ ಕಾಲದಲ್ಲಿ ಭಿನ್ನತೆಯನ್ನು ತೋರ್ಪಡಿಸಲಿ.
ಕಳೆದ 3 ವರ್ಷದಿಂದ ಗೌರವ ಡಾಕ್ಟರೇಟ್ ಪದವಿಗೆ ಗೌರವ ತಂದಿರುವ ಮಂಗಳೂರು ವಿವಿ ಅಮೀನ್ ಅವರನ್ನು ಡಾಕ್ಟರೇಟ್ ಗೌರವಕ್ಕೆ ಪರಿಗಣಿಸಬೇಕು ಎಂದು ತುಳುವರ ಬಳಗದ ಪತ್ರಿಕಾ ಪ್ರಕಟಣೆಯಲ್ಲಿ ಹಕ್ಕೊತ್ತಾಯ ಮಂಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

