ಉಡುಪಿ

ಬೆಳ್ಮಣ್ ರೋಟರಿಗೆ ಸಾಧನಾ ಪ್ರಶಸ್ತಿ

Published On :

ಉಡುಪಿ: ಒಂದು ವರ್ಷಗಳ ಹಿಂದೆ ಪಡುಬಿದ್ರಿ ರೋಟರಿಯಿಂದ ಪ್ರವರ್ತಿಸಲ್ಪಟ್ಟ ಬೆಳ್ಮಣ್ ರೋಟರಿ ಸಂಸ್ಥೆ ತನ್ನ ಚೊಚ್ಚಲ ವರ್ಷದಲ್ಲಿ ನಡೆಸಿದ ಕಾರ್ಯಕ್ರಮಗಳಿಗೆ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ- 3180ರ 'ಅತ್ಯುತ್ತಮ ಸಾಧನಾ ಪ್ರಶಸ್ತಿ'ಯೊಂದಿಗೆ 8 ಸೇವಾ ಪ್ರಶಸ್ತಿಗಳನ್ನು ಗಳಿಸಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರೋಟರಿ ಜಿಲ್ಲಾ ಅಧಿವೇಶನದಲ್ಲಿ ರೋಟರಿ ಜಿಲ್ಲಾ ಗವರ್ನರ್ ಎಸ್. ಗುರುರಾಜ್ ಅವರಿಂದ ಬೆಳ್ಮಣ್ ರೋಟರಿ ಸ್ಥಾಪಕ ಅಧ್ಯಕ್ಷ ಸೂರ್ಯಕಾಂತ ಶೆಟ್ಟಿ, ಕಾರ್ಯದರ್ಶಿ ವಿಘ್ನೇಶ್ ಶೆಣೈ ಜಂಟಿಯಾಗಿ ಈ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ರೋಟರಿ ಪ್ರಶಸ್ತಿ ಸಮಿತಿ ಅಧ್ಯಕ್ಷ ಮಾಜಿ ಗವರ್ನರ್ ಡಾ. ದೇವದಾಸ ರೈ, ನಿಯೋಜಿತ ಗವರ್ನರ್ ಡಾ.ಎಸ್. ಭಾಸ್ಕರ್, ಸಹಾಯಕ ಗವರ್ನರ್ ಮಾಧವ ಸುವರ್ಣ, ಮಾಜಿ ಸಹಾಯಕ ಗವರ್ನರ್ ಬಿ. ಪುಂಡಲೀಕ ಮರಾಠೆ, ಕ್ಲಬ್ ಪದಾಧಿಕಾರಿಗಳಾದ ಆಲ್ವಿನ್ ನೇರಿ ಪಿಂಟೊ, ಮೋಹನದಾಸ್ ಶೆಟ್ಟಿ, ಕೆ. ಸುನಿಲ್ ದೇವ್, ಜೀತೇಶ್ ಕಾಂಚನ್ ಇದ್ದರು.

ಬೆಳ್ಮಣ್: ವಿಜಯಾ ಬ್ಯಾಂಕ್ ಶಾಖೆ ಸ್ಥಳಾಂತರ
ಉಡುಪಿ: ಬೆಳ್ಮಣ್ ಪರಿಸರದ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಮನೆಮಾತಾಗಿರುವ ವಿಜಯಾ ಬ್ಯಾಂಕಿನ ಶಾಖೆಯ ಸ್ಥಳಾಂತರ ಭಾನುವಾರ ನಡೆಯಿತು.
ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರಿ ದೇವಳದ ರಸ್ತೆಯ ನೂತನ ಕಟ್ಟಡದಲ್ಲಿ ಪ್ರಾರಂಭಗೊಂಡ ಶಾಖೆಯನ್ನು ಬೆಳ್ಮಣ್ ಪಂಚಾಯಿತಿ ಅಧ್ಯಕ್ಷ ಸೂಡ ಶಂಕರ ಕುಂದರ್ ಉದ್ಘಾಟಿಸಿದರು.
ಬೆಳ್ಮಣ್ ಸಂತ ಜೋಸೆಫ್ ಇಗರ್ಜಿಯ ಧರ್ಮಗುರು ರೆ.ಫಾ. ಲಾರೆನ್ಸ್ ಬಿ. ಡಿ' ಸೋಜ, ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆದಿಂಜೆ ಸುಪ್ರಿತ್ ಶೆಟ್ಟಿ ಅವರು ಶಾಖಾ ಪ್ರಬಂಧಕರ ಕಚೇರಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಸಹನಾ ಕಾಮತ್, ಚೈತ್ರಾ ಹಾಗೂ ಸಂತ ಜೋಸೆಫರ ಶಾಲಾ ಸಾಧಕಿ ಸುಚೇತಾರನ್ನು ಪುರಸ್ಕರಿಸಲಾಯಿತು. ಶಾಖಾ ಪ್ರಬಂಧಕ ಮನಮೋಹನ ಶೆಣೈ ಇದ್ದರು. ಶಾಲಿನಿ ಶೆಟ್ಟಿ ವಂದಿಸಿದರು.

ರಕ್ಷಣೆ ಆಗ್ರಹಿಸಿ ಪೊಲೀಸರಿಂದಲೇ ಪ್ರತಿಭಟನೆ: ಟೀಕೆ
ಕಾರ್ಕಳ: ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆ ತನಗೆ ರಕ್ಷಣೆ ನೀಡುವಂತೆ ಪ್ರತಿಭಟನೆ ನಡೆಸಿರುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತಿದ್ದು, ಇದೊಂದು ಶೋಚನೀಯ ವಿಚಾರ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವೀನ್ ನಾಯಕ್ ಮತ್ತು ಪ್ರಧಾನ ಕಾರ್ಯದರ್ಶಿ ರತ್ನಾಕರ ಅಮೀನ್ ಆಗ್ರಹಿಸಿದ್ದಾರೆ.
ನಿರಂತರ 10, 12 ದಿನಗಳಿಂದ ಮಾಧ್ಯಮಗಳಲ್ಲಿ ಪೊಲೀಸ್ ಇಲಾಖೆಯ ಆಂತರಿಕ ಸಮಸ್ಯೆಗಳನ್ನು ರಾಜ್ಯ ಹಾಗೂ ದೇಶದ ಜನರೆಲ್ಲಾ ನಿತ್ಯ ವೀಕ್ಷಿಸುತ್ತಿದ್ದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ಕಣ್ಣುಮುಚ್ಚಿ ತನಗೆ ಈ ಘಟನೆ ತಿಳಿದೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಪೊಲೀಸರ ಹಾಗೂ ನಾಗರಿಕರ ಆತ್ಮಸ್ಥೈರ್ಯ ಕುಗ್ಗಿಸಿದಂತಾಗಿದೆ.
  ಈ ಸರ್ಕಾರದಿಂದ ಜನರಿಗೆ ರಕ್ಷಣೆ ಸಿಗಲು ಸಾಧ್ಯವೇ? ಎಂದು ಹೇಳಿಕೆಯಲ್ಲಿ ಪ್ರಶ್ನಿಸಿರುವ ಅವರು,  ರಾಜ್ಯಪಾಲರು ಈ ನಿಟ್ಟಿನಲ್ಲಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ
ರು. 6 ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದ್ದು, 2 ವರ್ಷದಲ್ಲಿ ಆಸ್ಪತ್ರೆ ತಲೆ ಎತ್ತಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಸಾಂಕ್ರಾಮಿಕ ರೋಗ ತಡೆಗೆ ಕ್ರಮ
ಮಳೆಗಾಲ ಪ್ರಾರಂಭಗೊಳ್ಳುತ್ತಿದ್ದು ಆರೋಗ್ಯ ಇಲಾಖೆ ಉಳ್ಳಾಲ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಸಾಂಕ್ರಾಮಿಕ ರೋಗ ಬಾರದಂತೆ ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಬೇಕು. ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು. ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದರೆ, ಅದನ್ನು ಶುಚಿಗೊಳಿಸಬೇಕು. ಅಂಗಡಿ, ಹೊಟೇಲ್ ಸೇರಿದಂತೆ ನಗರ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಿ, ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಿಎಂದು ಆರೋಗ್ಯ ಸಚಿವರು ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.