ಮೀನುಗಾರಿಕೆ ವೇಳೆ ಮೂರ್ಛೆ ತಪ್ಪಿ ಸಾವು
ಕೋಟ: ಮೀನುಗಾರಿಕೆ ಮಾಡುವಾಗ ವ್ಯಕ್ತಿಯೊಬ್ಬರು ಮೂರ್ಛೆ ತಪ್ಪಿ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಬಾಳಕುದ್ರು ಗ್ರಾಮದ ಹಂಗಾರಕಟ್ಟೆಯಲ್ಲಿ ಸೋಮವಾರ ನಡೆದಿದೆ. ಅಣ್ಣಪ್ಪ ಮರಕಲ (54) ಇವರು ಒಡಲಾಡಿಗಳೊಂದಿಗೆ ಮೀನುಗಾರಿಕಾ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆಯಲ್ಲಿ ತೊಡಗಿರುವಾಗ ಮೂರ್ಛೆ ತಪ್ಪಿ ಬಿದ್ದವರನ್ನು ಕೂಡಲೇ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪರೀಕ್ಷಿಸಿ ಅಣ್ಣಪ್ಪ ಮರಕಲ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶೀನ ಕುಂದರ್ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಟಿಪ್ಪರ್ ಡಿಕ್ಕಿ; ಮಹಿಳೆಗೆ ಗಾಯ
ಕೋಟ: ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಮಹಿಳೆಗೆ ಟಿಪ್ಪರ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಸೋಮವಾರ ತೆಕ್ಕಟ್ಟೆ ಗ್ರಾಮದ ಕಣ್ಣುಕೆರೆ ಆಭರಣ ಮೋಟಾರ್ಸ್ ಎದುರುಗಡೆ ನಡೆದಿದೆ. ಗಾಯಗೊಂಡವರನ್ನು ಶೈಲಜ ಎಂದು ಗುರುತಿಸಲಾಗಿದೆ. ಟಿಪ್ಪರ್ ಲಾರಿ ಚಾಲಕ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಚಂದ್ರಕಾಂತ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜೀವನದಲ್ಲಿ ಜಿಗುಪ್ಸೆ; ಆತ್ಮಹತ್ಯೆ
ಕಾಪು: ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಟಪಾಡಿಯ ಯೆಣಗುಡ್ಡೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ವಿಪರೀತ ಶರಾಬು ಸೇವನೆ ಮಾಡುವ ಚಟ ಹೊಂದಿದ್ದ ಯಲ್ಲಪ್ಪ(57) ಅವರು ಜೀವನದಲ್ಲಿ ಜಿಗುಪ್ಸೆಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಸಹೋದರ ಮಲ್ಲಪ್ಪ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಹಿಳೆಗೆ ಮೈದುನನಿಂದ ಹಲ್ಲೆ
ಪುತ್ತೂರು: ಮಹಿಳೆಯೊಬ್ಬರಿಗೆ ಮೈದುನ ಹಲ್ಲೆ ನಡೆಸಿದ ಘಟನೆ ಸೇಡಿಯಾಪು ಎಂಬಲ್ಲಿ ನಡೆದಿದೆ. ಸೇಡಿಯಾಪು ನಿವಾಸಿ ಮೇಸ್ತ್ರಿ ಕೆಲಸ ಮಾಡುತ್ತಿರುವ ರವಿ ಎಂಬವರ ಪತ್ನಿ ಲತಾ (28) ಎಂಬವರು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ತನಗೆ ಪತಿಯ ಅಣ್ಣ ಸುಬ್ರಹ್ಮಣ್ಯ ಎಂಬವರು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮದುವೆಯಾಗಿ ವರ್ಷ ಕಳೆದರೂ ತನ್ನ ಪತಿ ಕೂಡ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಪುತ್ತೂರು: ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಮೈಂದನಡ್ಕ ಎಂಬಲ್ಲಿ ನಡೆದಿದೆ. ಮೈಂದನಡ್ಕ ನಿವಾಸಿ ಕುಂಞಣ್ಣ ರೈ ಎಂಬವರ ಪುತ್ರ ಕಂಬ್ಳ ನಾರಾಯಣ ರೈ (50) ಮೃತರು. ಕೆಲ ಸಮಯದಿಂದ ಮಾನಸಿಕ ಅಸ್ವಸ್ಥರಾಗಿದ್ದ ಅವರು ಮನೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವ್ಯಕ್ತಿ ಮೇಲೆ ಹಲ್ಲೆ: ದೂರು
ಪುತ್ತೂರು: ವ್ಯಕ್ತಿಯೊಬ್ಬರಿಗೆ ಇಬ್ಬರು ಸೇರಿ ಹಲ್ಲೆ ನಡೆಸಿದ ಘಟನೆ ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿ ನಡೆದಿದೆ. ತಿಂಗಳಾಡಿ ಗುತ್ತು ಪಟ್ಟೆ ದರ್ಖಾಸು ನಿವಾಸಿ ರುಕ್ಮಯ್ಯ ನಾಯ್ಕ ಎಂಬವರ ಪುತ್ರ ಗೋಪಾಲಕೃಷ್ಣ (50) ಗಾಯಗೊಂಡಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ಮನೆಯ ಜಾಗದೊಳಗೆ ಸ್ಥಳೀಯ ಮೋನಪ್ಪ ಎಂಬವರಿಗೆ ಸೇರಿದ ಗೇರು ಮರ ಬಾಗಿಕೊಂಡಿದ್ದು, ಮನೆಗೆ ತೊಂದರೆ ಆಗುತ್ತಿತ್ತು. ಮರದ ಗೆಲ್ಲನ್ನು ತೆರವುಗೊಳಿಸುವಂತೆ ವಿನಂತಿಸಿದ್ದೆವು. ಆದರೆ ಮೋನಪ್ಪ ತೆರವುಗೊಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಸೋಮವಾರ ತಾನು ದಾರಿಯಲ್ಲಿ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿದ ಮೋನಪ್ಪ ಮತ್ತು ಲಿಂಗಪ್ಪ ಎಂಬವರು ಹಲ್ಲೆ ನಡೆಸಿದ್ದಾರೆ ಗೋಪಾಲಕೃಷ್ಣ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

