ಆಗ ಮಹಿಳಾ ದೌರ್ಜನ್ಯ ನಡೆದಾಗ ಇವರು ಎಲ್ಲಿದ್ದರು?
ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ 'ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಂದ ರಕ್ಷಣೆಗೆ ಉಗ್ರ ಕಾನೂನು ತರಬೇಕು' ಎನ್ನುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಇದ್ದಾಗ ಇತಿಹಾಸದಲ್ಲಿಯೇ ಅತಿ ಹೆಚ್ಚು ಮಹಿಳಾ ದೌರ್ಜನ್ಯಗಳು ನಡೆದಿವೆ ಎಂಬುದನ್ನು ಅವರು ಮರೆತಿದ್ದಾರೆ ಎಂದು ಉಡುಪಿ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಟೀಕಿಸಿದ್ದಾರೆ.
ಶನಿವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಉಡುಪಿ ನಗರದಲ್ಲಿ ನಡೆದ ಚುನಾವಣಾ ಪಾದಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ನಡೆದ ಪಬ್ ದಾಳಿ, ಹೋಮ್ ಸ್ಟೇ ದಾಳಿ, ಉಡುಪಿಯ ಮಾಜಿ ಶಾಸಕರ ಪತ್ನಿಯ ನಿಗೂಢ ಕೊಲೆ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ನಂಗಾನಾಚ್, ವಿಧಾನಸಭೆಯಲ್ಲಿ 3 ಮಂತ್ರಿಗಳ ಬ್ಲೂಫಿಲಂ ವೀಕ್ಷಣೆ, ಬಿಜೆಪಿ ಸಚಿವರೊಬ್ಬರು ಗೆಳೆಯನ ಪತ್ನಿ ಸೆರಗಿಗೆ ಕೈ ಹಾಕಿದ್ದು, ಇನ್ನೊಬ್ಬ ಸಚಿವ ನರ್ಸ್ಗೆ ಮುತ್ತು ಕೊಟ್ಟದ್ದು ಇತ್ಯಾದಿ ಪ್ರಕರಣಗಳು ನಡೆದಾಗ ಬಿಜೆಪಿಯ ಮಹಿಳಾ ಅಭ್ಯರ್ಥಿ ಎಲ್ಲಿಗೆ ಹೋಗಿದ್ದರು? ಆಗ ಯಾಕೆ ಉಗ್ರ ಕಾನೂನು ತರಬೇಕೆಂದು ಹೇಳಲಿಲ್ಲ ಎಂದು ಸೊರಕೆ ಪ್ರಶ್ನಿಸಿದರು.
ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಪ್ರತಿಭಟಿಸಿ ರಾಜಿನಾಮೆ ನೀಡಿದ್ದರೆ ಆಗ ಅವರನ್ನು ಒಪ್ಪಬಹುದಾಗಿತ್ತು. ಆದರೆ ಅವರಿಗೆ ಆಗ ಈ ಪ್ರಕರಣಗಳನ್ನು ವಿರೋಧಿಸಬೇಕು ಎಂದು ಅನ್ನಿಸಲಿಲ್ಲ, ಈಗ ಚುನಾವಣೆ ಬಂದಾಗ ಮಹಿಳಾ ಮತದಾರರು ಹೆಚ್ಚಿರುವ ಉಡುಪಿಯಲ್ಲಿ ಉಗ್ರ ಕಾನೂನು ತರಬೇಕು ಎಂಬುದು ನೆನಪಾಗಿದೆ ಎಂದು ಲೇವಡಿ ಮಾಡಿದರು. ಆದರೆ ಉಡುಪಿ - ಚಿಕ್ಕಮಗಳೂರಿನ ಮಹಿಳೆಯರಿಗೆ ಈ ತಂತ್ರ ಅರ್ಥ ಆಗುತ್ತದೆ, ಅವರು ಬಿಜೆಪಿಗೆ ಮರುಳಾಗುವುದಿಲ್ಲ ಎಂದರು.
ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗೋಪಾಲ ಪೂಜಾರಿ, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ರಾಜೇಶ್ ಬಿರ್ತಿ, ನಗರಸಭಾಧ್ಯಕ್ಷ ಯುವರಾಜ್, ಉಪಾಧ್ಯಕ್ಷ ಅಮೃತಾ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸೆಲಿನಾ ಕರ್ಕಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೊ, ತಾಪಂ ಸದಸ್ಯ ಉಮೇಶ್ ನಾಯ್ಕ, ಡಾ. ಸುನೀತಾ, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ವಿಜಯ ಪೂಜಾರಿ, ಪ್ರಶಾಂತ್ ಭಟ್, ಶಶಿರಾಜ್ ಕಾಂಚನ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

