ಅವಧಿ ವಿಸ್ತರಣೆಯಿಂದ ದಾಖಲೆ ಮತದಾನ..?
-ಚೈತ್ರಾ ಹೆರ್ಗ
ಉಡುಪಿ: ಮುಕ್ತ ಹಾಗೂ ನ್ಯಾಯಸಮ್ಮತ ಹಕ್ಕು ಚಲಾವಣೆಗೆ ಚುನಾವಣಾ ಆಯೋಗ ಚುನಾವಣೆ ಸಂದರ್ಭದಲ್ಲಿ ಅನೇಕ ಸುಧಾರಣಾ ನೀತಿಗಳನ್ನು ಅನುಸರಿಸುತ್ತಾ ಬಂದಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಳಗ್ಗೆ 7ರಿಂದ 5ರ ವರೆಗೆ ಇದ್ದ ಮತದಾನದ ಸಮಯವನ್ನು ಸಂಜೆ 6 ಗಂಟೆ ವರೆಗೆ ವಿಸ್ತರಿಸಿದೆ. ಸುದೀರ್ಘ 11 ಗಂಟೆಗಳ ಕಾಲ ಮತದಾನಕ್ಕೆ ಅವಕಾಶವಿರುವುದರಿಂದ ದಾಖಲೆಯ ಪ್ರಮಾಣದಲ್ಲಿ ಮತದಾನವಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.
ಮತದಾನದ ಅವಧಿ ಹೆಚ್ಚಳ ಮಾಡಿರುವುದರಿಂದ ರಾಜಕೀಯ ಪಕ್ಷಗಳು ಕೂಡ ಶೇಕಡವಾರು ಮತದಾನ ಜಾಸ್ತಿ ಆಗಬಹುದು ಎಂಬ ನಿರೀಕ್ಷೆಯಲ್ಲಿವೆ. ಅಲ್ಲದೆ ಇದರಿಂದ ತಮ್ಮ ಪಕ್ಷಕ್ಕೆ ಎಷ್ಟು ಲಾಭವಾಗಲಿದೆ ಎಂಬ ಲೆಕ್ಕಚಾರದಲ್ಲಿ ಮುಳುಗಿವೆ.
ಹೊಸ ಮತದಾರರ ಸೇರ್ಪಡೆಯೊಂದಿಗೆ ಮತಪಟ್ಟಿ ಬೆಳೆಯುತ್ತಿದೆ. ಆದರೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇರುವಂತೆ ಭಾರತದಲ್ಲಿ ಮತದಾನ ಪ್ರಮಾಣ ಶೇ.100ಕ್ಕೆ ಸಮೀಪ ಹೋದ ಸಂದರ್ಭಗಳಿಲ್ಲ. ಈ ಚುನಾವಣೆ ಸುಡು ಬೇಸಿಗೆಯಲ್ಲಿ ಬಂದಿರುವುದರಿಂದ ಮತದಾರರು ಮನೆ ಬಿಟ್ಟು ಹೊರ ಬರಲು ಹಿಂದೇಟು ಹಾಕಲಿದ್ದಾರೆ. ಹಾಗಾಗಿ ಸಂಜೆ 1 ಗಂಟೆ ಅವಧಿ ಹೆಚ್ಚುವರಿ ಮಾಡಿರುವುದರಿಂದ ಮತದಾರರಿಗೂ ಅನುಕೂಲವಾಗಲಿದೆ. ಹೆಚ್ಚಿನ ಚುನಾವಣೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಮತದಾರರು ಮತಗಟ್ಟೆಗಳಿಗೆ ಬರುವುದು ರೂಢಿ. ಆದ್ದರಿಂದ ಚುನಾವಣಾ ಆಯೋಗದ ಈ ನಿರ್ಧಾರ ಈ ಬಾರಿ ಹೇಗೆ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಿದೆ.
ಮತದಾನದ ಅವಧಿ ಹೆಚ್ಚಿಸಿರುವುದರಿಂದ ಖಂಡಿತವಾಗಿಯೂ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮತ ಚಲಾವಣೆ ನಡೆಯುತ್ತದೆ. ಕಾರ್ಯಕರ್ತರು ಮತದಾನ ಅವಧಿ ಹೆಚ್ಚಳ ಮಾಡಿರುವುದರ ಕುರಿತು ಜನರಿಗೆ ತಿಳಿಸಬೇಕಾಗಿದೆ.
-ಎಂ.ಎ. ಗಫೂರ್, ಕಾರ್ಯದರ್ಶಿ, ಕೆಪಿಸಿಸಿ
ಮಧ್ಯಾಹ್ನದ ಸಮಯದಲ್ಲಿ ಮತದಾರರು ಮತಗಟ್ಟೆಗಳಿಗೆ ಬರುವುದು ತೀರಾ ಕಡಿಮೆ. ಅದರಲ್ಲೂ ಈ ಬಾರಿಯ ಚುನಾವಣೆ ಬೇಸಿಗೆ ಸಮಯದಲ್ಲಿ ಬಂದಿರುವುದರಿಂದ ಹೆಚ್ಚಿನ ಮತದಾರರಲ್ಲಿ ಬೆಳಗ್ಗೆ ಅಥವಾ ಬಿಸಿಲಿನ ಪ್ರಭಾವ ಕಡಿಮೆ ಆದ ಬಳಿಕ ಹೋದರಾಯಿತು ಎಂಬ ಭಾವನೆ ಬಂದಿರಬಹುದು. ಈ ನೆಲೆಯಲ್ಲಿ ಮತದಾನದ ಸಮಯವನ್ನು ವಿಸ್ತರಣೆ ಮಾಡಿರುವುದರಿಂದ ಜನರಿಗೆ ಉಪಯುಕ್ತವಾಗಲಿದೆ.
-ದಿನಕರ ಶೆಟ್ಟಿ, ಉಡುಪಿ ನಗರಸಭಾ ಸದಸ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

