250 ಎಚ್‌ಪಿಗೂ ಅಧಿಕ ಸಾಮರ್ಥ್ಯ ಬೋಟ್ ನಿಷೇಧಿಸಿ
ಕಾರವಾರ: ಜಿಲ್ಲಾಧಿಕಾರಿ ಕಚೇರಿ ಎದುರು ಮೀನುಗಾರರು ಗುರುವಾರ ಬೃಹತ್ ಪ್ರತಿಭಟನೆ, ಧರಣಿ ನಡೆಸಿ ಮೀನುಗಾರಿಕೆ ಬೋಟುಗಳಿಗೆ 250 ಅಶ್ವಶಕ್ತಿಗೂ ಮೇಲ್ಪಟ್ಟ ಎಂಜಿನ್‌ಗಳ ಅಳವಡಿಕೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನೇತೃತ್ವದಲ್ಲಿ ಜಿಲ್ಲೆಯ ಮೀನುಗಾರರು ಧರಣಿ ನಡೆಸಿದರು. ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ, ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ್ ಹಾಗೂ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿದರು. 250ಕ್ಕಿಂತ ಹೆಚ್ಚು ಸಾಮರ್ಥ್ಯದ ಎಂಜಿನ್‌ಗಳನ್ನು ಬಳಸಿ ಮೀನುಗಾರಿಕೆ ಮಾಡುವುದರಿಂದ ರಾಜ್ಯದ ಕರಾವಳಿಯಲ್ಲಿ ಮತ್ಸ್ಯಕ್ಷಾಮ ಉಂಟಾಗುತ್ತದೆ. ಇದರಿಂದ ರಾಜ್ಯ ಸರ್ಕಾರ 250 ಅಶ್ವಶಕ್ತಿಗಿಂತ ಮೇಲ್ಪಟ್ಟ ಎಂಜಿನ್‌ನ ದೋಣಿಗಳನ್ನು ಬಳಸಿ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಿದೆ. ಮೀನುಗಾರಿಕಾ ಇಲಾಖೆ ಮೂಲಕ ಈ ಆದೇಶ ಜಾರಿಗೆ ಸೂಚನೆ ನೀಡಿದೆ. ಆದರೆ ಮೀನುಗಾರಿಕಾ ಇಲಾಖೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೃಹತ್ ಬೋಟ್‌ಗಳಿಂದ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಜಿಲ್ಲೆಯ ಸಾಂಪ್ರದಾಯಿಕ ಮೀನುಗಾರರು ಹಾಕಿರುವ ಬಲೆಗಳನ್ನು ಬೃಹತ್ ಬೋಟುಗಳು ತುಂಡರಿಸಿಕೊಂಡು ಹೋಗುತ್ತವೆ. ಘಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಸಂಚರಿಸುವುದರಿಂದ ಮೀನು ಮರಿಗಳಿಗೆ ಅಪಾಯ ಉಂಟಾಗುತ್ತದೆ ಎಂದು ಮೀನುಗಾರರು ತಮ್ಮ ಗೋಳು ತೋಡಿಕೊಂಡರು.
250ಕ್ಕಿಂತ ಹೆಚ್ಚು ಅಶ್ವಶಕ್ತಿಯ ಬೋಟ್‌ಗಳ ಉಪಟಳದಿಂದ ಗೋವಾ ಸರ್ಕಾರ ಕರ್ನಾಟಕದ ಯಾವುದೇ ಬೋಟ್ ಗೋವಾ ಗಡಿಯ ಒಳ ಪ್ರವೇಶಿಸಿದರೆ ಅದಕ್ಕೆ ದಂಡ ವಿಧಿಸುತ್ತಿದೆ. ಇದು ಮೀನುಗಾರರಿಗೆ ಸಮಸ್ಯೆಯಾಗಿದೆ ಎಂದು ಹೇಳಿದರು.
ಸಚಿವರ ಭರವಸೆ: ಮನವಿ ಸ್ವೀಕರಿಸಿದ ಸಚಿವ ಆನಂದ್ ಅಸ್ನೋಟಿಕರ್, ಮೀನುಗಾರರ ಸಮಸ್ಯೆಯ ಬಗ್ಗೆ ತಮಗೆ ಅರಿವಿದೆ. 250 ಅಶ್ವಶಕ್ತಿಗಿಂತ ಹೆಚ್ಚಿನ ಸಾಮರ್ಥ್ಯದ ಬೋಟ್‌ಗಳನ್ನು ನಿಷೇಧಿಸದಂತೆ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಿಂದ ಒತ್ತಡ ಇದೆ. ಆ ಬೇಡಿಕೆ ತಮ್ಮ ಮುಂದಿದೆ. ಆದರೆ ತಾವು ಆ ಒತ್ತಡಕ್ಕೆ ಮಣಿದಿಲ್ಲ. ನಾನು ಮೀನುಗಾರಿಕಾ ಸಚಿವನಾಗಿರುವವರೆಗೂ ಯಾವುದೇ ಕಾರಣಕ್ಕೂ 250 ಅಶ್ವಶಕ್ತಿಗಿಂತ ಹೆಚ್ಚಿನ ಸಾಮರ್ಥ್ಯದ ಬೋಟ್‌ಗಳ ನಿಷೇಧ ಹಿಂಪಡೆಯುವುದಿಲ್ಲ ಎಂದು ಭರವಸೆ ನೀಡಿದರು. ಗೋವಾ ರಾಜ್ಯದ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸಲು ಕರ್ನಾಟಕದ ದೋಣಿಗಳಿಗೆ ಅವಕಾಶ ನೀಡಬೇಕು ಎಂದು ನಾನು ಗೋವಾ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುತ್ತೇನೆ ಎಂದ ಸಚಿವರು, ಈ ಸಂಬಂಧ ಗೋವಾ ಸರ್ಕಾರಕ್ಕೆ ಪತ್ರ ಬರೆಯಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

