ಉತ್ತರ ಕನ್ನಡ

ಅಧಿಕಾರಿಗಳ ನಿರ್ಲಕ್ಷ್ಯ: ಪಡಿತರಕ್ಕೆ ಪರದಾಟ

Published On :

ಜೋಯಿಡಾ: ಪಡಿತರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಜನರಿಗೆ ಪಡಿತರ ಧಾನ್ಯ ವಿತರಣೆಯಾಗದೆ ಜನಸಾಮಾನ್ಯರು ಪಡಿತರಕ್ಕಾಗಿ ಪರದಾಡುವಂತಾಗಿದ್ದು, ಇಂತಹ ನಿರ್ಲಕ್ಷಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಪಂ ಸದಸ್ಯ ವಿಲಾಸ ನಾಯ್ಕ ಪ್ರಗತಿ ಪರಿಶೀಲನಾ ಸಭೆಯಲಿ ಒತ್ತಾಯಿಸಿದರು.
ತಾಪಂ ಸಭಾ ಭವನದಲ್ಲಿ ಜಿಪಂ ಅಭಿಯಂತರ ಟಿ.ಜೆ. ಫರ್ನಾಡಿಸ್ ನೇತೃತ್ವದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಡಿತರ ವಿಷಯ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನಲ್ಲಿ ಪಡಿತರ ನಿರ್ವಹಣೆ ಹಳಿ ತಪ್ಪಿದ್ದು, ಜನಸಾಮಾನ್ಯರಿಗೆ ಗೊಂದಲವಾಗಿದೆ ಎಂದು ಆಹಾರ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಪಡಿತರ ಕೇಂದ್ರಗಳ ವಿತರಕರನ್ನು ಸಭೆಗೆ ಕರೆಸಿ ಅವರಿಂದಲೇ ಪಡಿತರ ಸಮಸ್ಯೆಯ ಗಂಭೀರತೆಯನ್ನು ಸಭೆ ಗಮನಕ್ಕೆ ತಂದರು.
ಬೆರಳಚ್ಚು ಮುದ್ರೆ ಬಗ್ಗೆ ಗೊಂದಲ: ಪ್ರತಿಕ್ರಿಯಿಸಿದ ಆಹಾರ ನಿರೀಕ್ಷಕ ರೋಡ್ರಿಗಿಸ್, ಬೆರಳಚ್ಚು ಮುದ್ರೆ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ಮಾಹಿತಿಯಿಲ್ಲದ ಕಾರಣ ತಾಲೂಕಿನಾದ್ಯಂತ ಪಡಿತರದ ನಿರ್ದಿಷ್ಟ ಮಾಹಿತಿ ನಮಗೆ ದೊರೆಯಲು ಗೊಂದಲಗಳು ಉಂಟಾಗಿದೆ. ಇದನ್ನು ಮುಂದಿನ ದಿನದಲ್ಲಿ ಸರಿಪರಿಪಡಿಸುವುದಾಗಿ ಸಭೆಗೆ ಹೇಳಿದರು.
ಹೊಸ ಪಡಿತರ ಕಾರ್ಡ್ ಬಗ್ಗೆ ತಾಪಂ ಸದಸ್ಯ ಕೃಷ್ಣ ದೇಸಾಯಿ, ಎಪಿಎಲ್ ಕಾರ್ಡ್‌ನ್ನು ಬಿಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ನ್ನು ಎಪಿಎಲ್‌ಗೆ ಮಾಡುವ ಮೂಲಕ ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದನ್ನು ಸರಿಪಡಿಸಿಕೊಳ್ಳುವವರೆಗೆ ಜನಸಾಮಾನ್ಯರು ಉಪವಾಸ ಬೀಳಬೇಕೇನು ಎಂದು ಪ್ರಶ್ನಿಸಿದರು. ಪಡಿತರ ಚೀಟಿ ನೀಡುವಿಕೆಯಲ್ಲಿಯೂ ವಿಳಂಬ ಮಾಡುತ್ತೀರಿ, ಗ್ರಾಪಂ, ಕಂದಾಯ ಇಲಾಖೆ, ಹಾಗೂ ಪಡಿತರ ಇಲಾಖೆಯಲ್ಲಿನ ಸಮನ್ವಯದ ಕೊರತೆಯಿಂದಾಗಿ ಪ್ರತಿನಿತ್ಯ ಬಡಜನತೆ ಅರ್ಹ ಪಡಿತರ ವ್ಯವಸ್ಥೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಇತರ ಸದಸ್ಯರು ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವಂತೆ ಆಗ್ರಹಿಸಿದರು.
ತೋಟಗಾರಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸುವರ್ಣಭೂಮಿ ಯೋಜನೆಯ 180 ರೈತರು ಕಪ್ಪು ಪಟ್ಟಿಗೆ ಸೇರುವಂತಾಗಿದ್ದು, ಇದು ಅಧಿಕಾರಿಗಳ ತಪ್ಪಿನಿಂದ ಆದ ಪ್ರಮಾದವೇ ಹೊರತು ರೈತರ ತಪ್ಪಿನಿಂದಲ್ಲ ಎಂದು ಸದಸ್ಯ ವಿಲಾಸ ನಾಯ್ಕ ಆರೋಪಿಸಿದರು.
ಅಸಮಾಧಾನ: ತಾಲೂಕಿನ ಸಮಗ್ರ ಪ್ರಗತಿ ಪರಿಶೀಲನಾ ಸಭೆಗೆ ಪ್ರಮುಖ ಇಲಾಖೆ ಅಧಿಕಾರಿಗಳು ಗೈರು ಹಾಜರಿರುತ್ತಿರುವುದು ಸಮಸ್ಯೆ ಮತ್ತು ಇಲಾಖೆ ಪ್ರಗತಿಯನ್ನು ಅವಲೋಕಿಸುವುದು ಕಷ್ಟವಾಗುತ್ತಿದೆ ಎಂದು ವಿಲಾಸ ನಾಯ್ಕ ಹೇಳಿದರು.
  ಸಭೆಯಲ್ಲಿ ಹೆಸ್ಕಾಂ, ಶಿಕ್ಷಣ ಮತ್ತು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿಗಳು ಸಭೆಗೆ ಗೈರು ಹಾಜಾರಾದ ಬಗ್ಗೆ ತಾಪಂ ಸದಸ್ಯರುಗಳು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು. ಸಭೆಯಲ್ಲಿ ಲೋಕೋಪಯೋಗಿ, ಜಿಪಂ ಎಂಜಿನಿಯರಿಂಗ್, ಸಿಡಿಪಿಓ, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಇಲಾಖಾ ಪ್ರಗತಿಯನ್ನು ಸಭೆಯ ಗಮನಕ್ಕೆ ತಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.