ಉತ್ತರ ಕನ್ನಡ

ದೇವಬಾಗದಲ್ಲಿ ಜಂಗಲ್ ದರ್ಬಾರ್

Published On :

ಕನ್ನಡಪ್ರಭ ವಾರ್ತೆ, ಕಾರವಾರ, ಫೆ.7
ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಹಾಗೂ ಅರಣ್ಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಇಲ್ಲಿನ ದೇವಬಾಗದಲ್ಲಿ ಜಂಗಲ್ ಲಾಜಸ್ ಜಂಗಲ್ ದರ್ಬಾರ್ ಮಾಡುತ್ತಿದೆ.
ಸರ್ಕಾರದ ಅಂಗ ಸಂಸ್ಥೆಯಾದ ಜಂಗಲ್ ಲಾಜಸ್‌ಗೆ ದೇವಬಾಗದಲ್ಲಿ 15 ವರ್ಷಗಳ ಹಿಂದೆ 7 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಹಸ್ತಾಂತರಿಸಿತ್ತು. ಸಮುದ್ರ ತೀರದಲ್ಲಿರುವ ಈ ಭೂಮಿಯಲ್ಲಿ ಜಂಗಲ್ ಲಾಜಸ್ ಕಟ್ಟಡಗಳನ್ನು ನಿರ್ಮಿಸಿ, ಅರಣ್ಯ ಭೂಮಿಯನ್ನೂ ಅತಿಕ್ರಮಣ ಮಾಡಿಕೊಂಡು ಪ್ರವಾಸೋದ್ಯಮ ಚಟುವಟಿಕೆ ನಡೆಸುತ್ತಿದೆ. ಕಾನೂನುಗಳನ್ನು ಗಾಳಿಗೆ ತೂರಿ ಹಣ ಗಳಿಕೆಯೊಂದನ್ನೇ ಮಾನದಂಡವನ್ನಾಗಿಸಿಕೊಂಡಿದೆ.
ಸಿಆರ್‌ಝಡ್ ನಿಯಮಾವಳಿ ಪ್ರಕಾರ ಸಮುದ್ರದ ಉಬ್ಬರ (ಹೈಟೈಡ್) ರೇಖೆಯಿಂದ 500 ಮೀ. ಪ್ರದೇಶದಲ್ಲಿ ಶಾಶ್ವತ ನಿರ್ಮಾಣ ಕಾಮಗಾರಿ ನಡೆಸುವಂತಿಲ್ಲ. ಆದರೆ ಹೈಟೈಡ್ ರೇಖೆಯಿಂದ ಕೇವಲ 70 ಮೀ.ಅಂತರದಲ್ಲಿ ಕೆಂಪು ಕಲ್ಲುಗಳನ್ನು ಬಳಸಿ ವಸತಿಗೃಹಗಳನ್ನು ನಿರ್ಮಿಸಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದೆ. ಶಾಶ್ವತ ನಿರ್ಮಾಣ ಕಾಮಗಾರಿಯನ್ನು ನಡೆಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಅತಿಕ್ರಮಣ: ಅರಣ್ಯ ಇಲಾಖೆ ನೀಡಿದ ಭೂಮಿ 7 ಎಕರೆಯಾದರೆ ಇನ್ನೂ ಎರಡು ಎಕರೆಯಷ್ಟು ಭೂಮಿಯನ್ನು ಜಂಗಲ್ ಲಾಜಸ್ ಅತಿಕ್ರಮಣ ಮಾಡಿಕೊಂಡಿದೆ. ಈ ಬಗ್ಗೆ ಅರಣ್ಯ ಇಲಾಖೆ ನೋಟಿಸ್ ನೀಡಿದರೆ ಜಂಗಲ್ ಲಾಜಸ್ ಅಧಿಕಾರಿಗಳು ಆ ನೋಟಿಸ್ ತಮಗೆ ಸಂಬಂಧಪಟ್ಟಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಅತಿಕ್ರಮಣ ತೆರವುಗೊಳಿಸುವುದನ್ನು ಬಿಟ್ಟು ಆ ಎರಡು ಎಕರೆ ಭೂಮಿಯನ್ನು ತಮಗೆ ಮಂಜೂರು ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಿದೆ. 1997ರಲ್ಲಿ ಅರಣ್ಯ ಇಲಾಖೆ ಹಾಗೂ ಜಂಗಲ್ ಲಾಜಸ್ ನಡುವೆ ಆದ ಒಪ್ಪಂದದಂತೆ ಜಂಗಲ್ ಲಾಜಸ್ ಕೇವಲ ತಾತ್ಕಾಲಿಕ ನಿರ್ಮಾಣ ಕಾಮಗಾರಿ ನಡೆಸುವುದು, ಪರಿಸರ ಸ್ನೇಹಿ ಪ್ರವಾಸೋದ್ಯಮ ಹಾಗೂ ನೇಚರ್ ಕ್ಯಾಂಪ್‌ಗಳನ್ನು ನಡೆಸಬೇಕಿತ್ತು. ಆದರೆ ಜಂಗಲ್ ಲಾಜಸ್ ಈ ಒಪ್ಪಂದಕ್ಕೆ ಮಾನ್ಯತೆಯನ್ನೇ ನೀಡಿಲ್ಲ. ಕಲ್ಲು, ಸಿಮೆಂಟ್, ಕಟ್ಟಿಗಳನ್ನು ಬಳಸಿ ಕಟ್ಟಡ ನಿರ್ಮಿಸಿದೆ. ತಾತ್ಕಾಲಿಕ ಕಾಟೇಜ್ ಬದಲಿಗೆ ಶಾಶ್ವತ ಕಾಟೇಜ್ ನಿರ್ಮಿಸಿದೆ. ದೇವಬಾಗ ಅರಬ್ಬಿ ಸಮುದ್ರದ ನಡುವಣ ದ್ವೀಪ ಎಂದು ಬಿಂಬಿಸಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಕ್ಯಾಸುರಿನಾ ಮರಗಳ ನಡುವೆ ಸಮುದ್ರ ತೀರದಲ್ಲಿನ ಮೋಹಕ ಪ್ರದೇಶದಲ್ಲಿರುವ ದೇವಬಾಗದಲ್ಲಿ ಜಂಗಲ್ ಲಾಜಸ್ ಪರಿಸರ ಸ್ನೇಹಿ ಪ್ರವಾಸೋದ್ಯಮದ ಹೆಸರಿನಲ್ಲಿ ಹಣ ಗಳಿಕೆಗೆ ಆದ್ಯತೆ ನೀಡಿದೆ. ಪ್ರತಿ ವ್ಯಕ್ತಿಗೆ ದಿನಕ್ಕೆ ರು. 3500ಗಳ ತನಕ ಪ್ಯಾಕೇಜ್ ದರ ವಿಧಿಸುವ ಜಂಗಲ್ ಲಾಜಸ್ ಬೋಟಿಂಗ್, ಜಲ ಸಾಹಸ ಕ್ರೀಡೆಗಳನ್ನೂ ನಡೆಸುತ್ತಿದೆ.
ಕ್ರಮ ಕೈಗೊಳ್ಳುತ್ತಿಲ್ಲ: ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯಕ್ಕಾಗಿ ಹಾಗೂ ಬದುಕಿಗಾಗಿ ಮಾಡಿಕೊಂಡ ಚಿಕ್ಕ ಪುಟ್ಟ ಅರಣ್ಯ ಅತಿಕ್ರಮಣವನ್ನೂ ಅರಣ್ಯ ಇಲಾಖೆ ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕುತ್ತಿದೆ. ತೆರವುಗೊಳಿಸುವಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಆದರೆ ಸರ್ಕಾರಿ ಸಂಸ್ಥೆಯಾದ ಜಂಗಲ್ ಲಾಜಸ್ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು, ನೀತಿ ನಿಯಮಗಳನ್ನು ಗಾಳಿಗೆ ತೂರಿ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿದ್ದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಬಗ್ಗೆ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಉತ್ತರಿಸಬೇಕಿದೆ. ಸಿಆರ್‌ಝಡ್ ನಿಯಮಗಳನ್ನು ಉಲ್ಲಂಘಿಸಿದ್ದರೂ ಕರಾವಳಿ ನಿಯಂತ್ರಣ ವಲಯದ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗದೆ ಇರುವುದು ಅಚ್ಚರಿಯ ಸಂಗತಿಯಾಗಿದೆ. ಕಾನೂನು ಉಲ್ಲಂಘಿಸಿ ಹಲವು ವರ್ಷಗಳಾದರೂ ಇನ್ನೂ ಕೇವಲ ನೋಟಿಸ್ ನೀಡಿಕೆಯಲ್ಲಿಯೇ ಇರುವುದನ್ನು ನೋಡಿದರೆ ಸರ್ಕಾರದ ಸಂಸ್ಥೆಗಳು ಏನು ಬೇಕಾದರೂ ಮಾಡಬಹುದು, ಆದರೆ ಬಡವರು ಮಾತ್ರ ಏನೂ ಮಾಡುವಂತಿಲ್ಲ ಎಂಬ ಸಂದೇಶ ರವಾನೆಯಾಗದೆ ಇರದು.
-ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.