ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆ
ಕನ್ನಡಪ್ರಭ ವಾರ್ತೆ, ಶಿರಸಿ, ಫೆ. 9
ಸರ್ಕಾರ 5 ವರ್ಷಗಳನ್ನು ಪೂರ್ಣಗೊಳಿಸುತ್ತದೆ. ಏಪ್ರಿಲ್ ಕೊನೆಯಲ್ಲಿಯೇ ಚುನಾವಣೆ ಬರುತ್ತದೆ. ಸರ್ಕಾರ ಮಧ್ಯದಲ್ಲಿಯೇ ಉರುಳುವುದಿಲ್ಲ. ಸರ್ಕಾರದ ಸಾಧನೆಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ನಾವು ಅದರ ಮೂಲಕವೇ ಜಯಗಳಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ತೋಟಗಾರಿಕಾ ಇಲಾಖೆಯಲ್ಲಿ ಶನಿವಾರದಿಂದ ಆರಂಭಗೊಂಡ ಫಲ-ಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೃಷಿ ಯಾಂತ್ರೀಕರಣಕ್ಕಾಗಿ ರು. 1 ಕೋಟಿಗಳನ್ನು ಹೆಚ್ಚುವರಿಯಾಗಿ ಅನುದಾನದ ರೂಪದಲ್ಲಿ ಬಿಡುಗಡೆ ಮಾಡುವಂತೆ ಕೃಷಿ ಸಚಿವರ ಬಳಿ ಮನವಿ ಮಾಡಲಾಗಿದೆ ಎಂದರು. ಬಜೆಟ್ ಕುರಿತಂತೆ ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕಾಗೇರಿ ಬಜೆಟ್ನಲ್ಲಿ ಜಿಲ್ಲೆಗೆ ಏನೇನು ಯೋಜನೆಗಳು ಬಂದಿದೆ ಎಂಬುದನ್ನು ವಿವರಿಸಿದರು.
ಕೃಷಿಯಲ್ಲಿ ಮಾದರಿ: ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಮಲೆನಾಡಿನ ಜನರ ಕಸುಬನ್ನು ಪ್ರೇರೇಪಿಸುವಂತಹ, ಕೃಷಿಯನ್ನು ಉತ್ತೇಜನಗೊಳಿಸುವಂತಹ ಸುಸ್ಥಿರ ಅಭಿವೃದ್ಧಿ ನಮಗೆ ಅಗತ್ಯವಾಗಿದೆ. ಅದನ್ನು ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ತೋಟಗಾರಿಕಾ, ಮೀನುಗಾರಿಕಾ, ಹೈನುಗಾರಿಕೆಗಳಲ್ಲಿ ಮಾದರಿಯಾದ ನಮ್ಮ ಜಿಲ್ಲೆ ಕೃಷಿಯಲ್ಲಿಯೂ ಮಾದರಿ ಎನ್ನಿಸುವ ಅಗತ್ಯವಿದೆ ಎಂದು ಆಶಿಸಿದರು. ತೋಟಗಾರಿಕಾ ಇಲಾಖೆ ಹಾಗೂ ಅದರ ಸಂಬಂಧಿ ಇಲಾಖೆಗಳಲ್ಲಿ ಅಧಿಕಾರಿಗಳ, ಕೆಲಸಗಾರರ ಕೊರತೆಯಿದೆ. ಅವರನ್ನು ಶೀಘ್ರವಾಗಿ ನೇಮಕ ಮಾಡಿಕೊಳ್ಳಬೇಕಿದೆ. ವಿವಿಧ ಇಲಾಖೆಗಳಿಗೆ ಹೆಚ್ಚಿನ ಅನುದಾನ ಲಭ್ಯವಾಗಿದೆ. ನೌಕರರಿಲ್ಲ ಎಂಬ ಕಾರಣಕ್ಕೆ ಅವು ಸರಿಯಾಗಿ ಅನುಷ್ಠಾನಗೊಳ್ಳದೆ ವಾಪಾಸು ಹೋಗಬಾರದು. ತೋಟಗಾರಿಕಾ ಇಲಾಖೆ ಸಶಕ್ತವಾಗಿ ಕಾರ್ಯನಿರ್ವಹಿಸಬೇಕಾದರೆ ನೌಕರರ ನೇಮಕಾತಿ ನಡೆಯಬೇಕು. ಇದಕ್ಕೆ ಉಸ್ತುವಾರಿ ಸಚಿವರು ಮುಂದಾಗಬೇಕು ಎಂದು ಅಶಿಸರ ಸಲಹೆ ನೀಡಿದರು.
ಜಿಪಂ ಉಪಾಧ್ಯಕ್ಷೆ ಲಲಿತಾ ಪಟಗಾರ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಜಿಪಂ ಸದಸ್ಯರುಗಳಾದ ಆರ್.ಡಿ. ಹೆಗಡೆ, ಉಷಾ ಹೆಗಡೆ, ಶೋಭಾ ನಾಯ್ಕ, ತಾಪಂ ಅಧ್ಯಕ್ಷ ಗುರುಪಾದ ಹೆಗಡೆ ಬೊಮ್ನಳ್ಳಿ, ನಗರಸಭಾಧ್ಯಕ್ಷ ರವಿ ಚಂದಾವರ, ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ಕುರ್ಡೇಕರ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎನ್. ಭಟ್ಟ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಸಿಸರ್ಕರ್ ಇದ್ದರು. 15 ಸಾವಿರ ಗುಲಾಬಿ ಹೂಗಳಿಂದ ತಯಾರಿಸಿರುವ ತಾಜ್ಮಹಲ್ ಸಾರ್ವಜನಿಕರನ್ನು ವಿಶೇಷವಾಗಿ ಆಕರ್ಷಿಸಿತು. ದೇಹದ ಅಂಗಾಂಗಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುವ ವಿವಿಧ ರೀತಿಯ ತರಕಾರಿಗಳ ಮಾದರಿ ಪ್ರದರ್ಶನ ಏರ್ಪಡಿಸಲಾಗಿತ್ತು. ರಾಜ್ಯದ ಬೇರೆ ಬೇರೆ ಭಾಗದಿಂದ ಬಂದಿರುವ ಫಲ-ಪುಷ್ಪಗಳು ಗಮನ ಸೆಳೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

