ತಾಲೂಕನ್ನು ಬೆಳಕಿನೆಡೆಗೆ ಸಾಗಿಸೋಣ
ಜೋಯಿಡಾ: ಕತ್ತಲೆ ತಾಲೂಕನ್ನು ಬೆಳಕಿನೆಡೆಗೆ ಸಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜೋಯಿಡಾದ ಎಲ್ಲ ಹಳ್ಳಿ, ಮಜರೆಗೂ ಮುಂದಿನ ದಿನಗಳಲ್ಲಿ ವಿದ್ಯುತ್ ಸೌಲಭ್ಯ ಒದಗಿಸುವುದರ ಜೊತೆಗೆ ಮುಂದಿನ ಐದು ವರ್ಷದೊಳಗಾಗಿ ತಾಲೂಕನ್ನು ಅಭಿವೃದ್ಧಿ ಮಾಡುವ ಪ್ರತಿಜ್ಞೆಗೈಯುತ್ತಿದ್ದೇನೆ ಎಂದು ಮಾಜಿ ಮಂತ್ರಿ ಹಾಗೂ ವಿಆರ್‌ಡಿಎಂ ಟ್ರಸ್ಟ್ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.
ಅವರು ಜೋಯಿಡಾ ಕುಣಬಿ ಸಮಾಜ ಭವನದಲ್ಲಿ ವಿಆರ್‌ಡಿಎಂ ಟ್ರಸ್ಟ್ ಹಾಗೂ ಮೆಂಡಾ ಚಾರಿಟೇಬಲ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾ ಜ್ಯೋತಿ ಯೋಜನೆಯಡಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೋಲಾರ ದೀಪ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯುದೀಕರಣ: ಮೆಂಡಾ ಚಾರಿಟೆಬಲ್ ಸಂಸ್ಥೆಯೊಂದಿಗೆ ಕೈಜೋಡಿಸಿ ಮುಂದಿನ ಎರಡು-ಮೂರು ವರ್ಷದ ಅವಧಿಯಲ್ಲಿ ತಾಲೂಕಿನ ಎಲ್ಲ ಹಳ್ಳಿಗಳಿಗೆ, ಮಜರೆಗಳಿಗೆ ವಿದ್ಯುದೀಕರಣಗೊಳಿಸುವುದರ ಮೂಲಕ ಕತ್ತಲೆಯನ್ನು ಹೋಗಲಾಡಿಸಲು ಪ್ರಯತ್ನಮಾಡಲಾಗುತ್ತದೆ ಎಂದು ಅವರು ಹೇಳಿದರು. ಇನ್ಫೋಸಿಸ್ ಟೆಕ್ನಾಲಜಿ ಹಿರಿಯ ಉಪಾಧ್ಯಕ್ಷ ರಾಮದಾಸ ಕಾಮತ ಮಾತನಾಡಿ, ಹಿಂದುಳಿದಿದೆ ಎನ್ನುವ ಮಾತನ್ನು ಬಿಟ್ಟು ಶಿಕ್ಷಣದಲ್ಲಿ ಬೆಂಗಳೂರು, ಮಂಗಳೂರು ನಗರದ ವಿದ್ಯಾರ್ಥಿಗಳಂತೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಉನ್ನತ ಹುದ್ದೆಯನ್ನು ಹೊಂದುವಂತೆ ಪ್ರಯತ್ನಿಸುವದರೊಂದಿಗೆ ಮುಂದೆ ಬರಬೇಕೆಂದು ಹೇಳಿದರು.
ಮೆಂಡಾ ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷ ಅರ್ಜುನ ಮೆಂಡಾ ವಿದ್ಯುತ್ ಜ್ಯೋತಿ ಯೋಜನಾ ಫಲಕ ಉದ್ಘಾಟಿಸಿ ಮಾತನಾಡಿ, ಮುಂದಿನ ನಾಲ್ಕು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಸೋಲಾರ ವಿತರಿಸುವ ಮೂಲಕ ಬೆಳಕನ್ನು ನೀಡಲಿದ್ದೇವೆ ಎಂದರು.
ವಿತರಣೆ: ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೃಷ್ಣಾ ಪಾಟೀಲ್, ಸದಸ್ಯರಾದ ಶುಭಾಂಗಿ ಗಾವಡಾ, ಲಕ್ಷ್ಮೀ ಹಣಬರ್, ಬ್ಲಾಕ್ ಅಧ್ಯಕ್ಷ ಸದಾನಂದ ದಬಗಾರ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ತಾಪಂ ಉಪಾಧ್ಯಕ್ಷ ಕಿಶೋರಿ ಪರಿವಾರ, ತಾಪಂ ಸದಸ್ಯ ಆರ್.ಎ. ಭಟ್ಟ, ದಾಮು ಮಂಥೆರೊ, ಗ್ರಾಪಂ ಉಪಾಧ್ಯಕ್ಷ ರಮೇಶ ನಾಯ್ಕ, ಯುವ ಉಪಾಧ್ಯಕ್ಷ ಪ್ರಸನ್ನ ಗಾವಡಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‌ನ ಧರ್ಮದರ್ಶಿ ಪ್ರಸಾದ ದೇಶಪಾಂಡೆ ಸ್ವಾಗತಿಸಿ, ವಂದಿಸಿದರು. ಜೋಯಿಡಾ, ರಾಮನಗರ, ಬಾಪೇಲಿ ಪ್ರೌಢಶಾಲೆಗಳಲ್ಲಿ ಸಭೆ ನಡೆಸಿ ಸುತ್ತಮುತ್ತಲು ಇರುವ ತಾಲೂಕಿನ ಒಟ್ಟು 16 ಪ್ರೌಢಶಾಲೆಗಳಲ್ಲಿನ 2120 ವಿದ್ಯಾರ್ಥಿಗಳಿಗೆ ಮೆಂಡಾ ಟ್ರಸ್ಟ್ ಹಾಗೂ ವಿಆರ್‌ಡಿಎಂ ಟ್ರಸ್ಟ್ ಸಹಯೋಗದಲ್ಲಿ ಸೋಲಾರ ದೀಪ ವಿತರಣೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

