ಉತ್ತರ ಕನ್ನಡ

ಅರ್ಥ ಕಳೆದುಕೊಳ್ಳುತ್ತಿದೆ ಫಲ-ಪುಷ್ಪ ಪ್ರದರ್ಶನ

Published On :

ಕನ್ನಡಪ್ರಭ ವಾರ್ತೆ, ಶಿರಸಿ, ಫೆ. 10
ಫಲ-ಪುಷ್ಪ ಪ್ರದರ್ಶನಗಳು ಕಾಟಾಚಾರಕ್ಕೊ, ಶೋಕಿಗೋ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಶಿರಸಿಯಲ್ಲಿ ಫಲಪುಷ್ಪ ಪ್ರದರ್ಶನ ಶುಕ್ರವಾರದಿಂದ ಆರಂಭಗೊಂಡಿದೆ.
ತೋಟಗಾರರಿಗೆ ವಿಶೇಷ ಉತ್ತೇಜನ ದೊರೆಯಬೇಕು. ವೈಜ್ಞಾನಿಕ ತಳಹದಿ ಮೇಲೆ ತೋಟಗಾರಿಕಾ ಬೆಳೆಯನ್ನು ದ್ವಿಗುಣಗೊಳಿಸಿಕೊಳ್ಳಬೇಕು. ತೋಟಗಾರಿಕಾ ಬೆಳೆ ಬೆಳೆಯುವ ಬೆಳೆಗಾರರು ತಮ್ಮ ತೋಟಪಟ್ಟಿಗಳಲ್ಲಿ ಉಪ ಬೆಳೆಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳಬೇಕು. ಸರ್ಕಾರ ರೈತರಿಗೆ ನೀಡುವ ಪ್ರೋತ್ಸಾಹಧನದ ಮಾಹಿತಿ ತೋಟಗಾರಿಕಾ ಇಲಾಖೆಯ ಮೂಲಕ ರೈತರಿಗೆ ತಲುಪಬೇಕು. ಅದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಹೀಗೆ ಹತ್ತು ಹಲವಾರು ಆಶಯಗಳನ್ನು ಹೊಂದಿದ ಫಲ-ಪುಷ್ಪ ಪ್ರದರ್ಶನಗಳು ಅರ್ಥ ಕಳೆದುಕೊಂಡು ವಾರ್ಷಿಕವಾಗಿ ಆಚರಿಸಲ್ಪಡುವ ಸರ್ಕಾರದ ಮತ್ತೊಂದು ಹಬ್ಬವಾಗಿ ಮಾರ್ಪಟ್ಟಿವೆ.
ತೋಟಗಾರರಿಗಾಗಿ ಹಲವು ರೀತಿಯ ಉತ್ತೇಜಕರ ಯೋಜನೆಗಳು ಸರ್ಕಾರದ ಪಟ್ಟಿಯಲ್ಲಿದೆ. ಕೇಂದ್ರ ಸರ್ಕಾರ ಹಾರ್ಟಿಕಲ್ಚರ್ ಮಷಿನ್ ಮೂಲಕ ವಿವಿಧ ರೀತಿಯ ಸಹಾಯವನ್ನು ತೋಟಗಾರರಿಗೆ ನೀಡುತ್ತಿದೆ. ಕೆಲವೊಂದು ನಿರ್ದಿಷ್ಟ ಬೆಳೆಗಳಿಗೆ ಶೇ. 50ರ ವರೆಗೆ ಸಹಾಯಧನವಿದೆ. ಎರೆಹುಳು ತಯಾರಿಕಾ ಘಟಕ, ಬಾಳೆ, ಅನಾನಸ್, ಕೋಕೋ, ಮಾವು ಈ ಮುಂತಾದ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಬೇಕು ಎನ್ನುವುದು ಸರ್ಕಾರದ ಸದಾಶಯ. ಪ್ರತಿ ಮನೆಯಲ್ಲಿ ಎಂಬಂತೆ ಎರಹುಳು ಘಟಕವಿರಬೇಕು, ಪ್ರತಿ ಗ್ರಾಮವೂ ಸಾವಯವ ಗ್ರಾಮವಾಗಬೇಕು ಎನ್ನುವ ಕಲ್ಪನೆ ಸರ್ಕಾರದ್ದಾಗಿದೆ. ಆದರೆ ಇವೆಲ್ಲ ಎಷ್ಟರಮಟ್ಟಿಗೆ ರೈತರ ಮನೆಯನ್ನು ತಲುಪಿದೆ, ಬೆಳಗಿದೆ ಎನ್ನುವ ಪ್ರಶ್ನೆಗೆ ಈ ವರೆಗೂ ಸ್ಪಷ್ಟನೆ ದೊರೆತಿಲ್ಲ.
ಸಹಾಯಧನ ವಿಳಂಬ: ಸಹಾಯಧನ ವಿತರಣೆಯಲ್ಲಿ ವಿಳಂಬ, ಸಾಮೂಹಿಕವಾಗಿ ತೋಟಗಾರಿಕಾ ಬೆಳೆಗಾರರಿಗೆ ಸಹಾಯಧನ ವಿತರಣೆಯಲ್ಲಿ ಅಸಮತೋಲನ, ಸಹಾಯಧನ ಪಡೆಯಲು ಮಧ್ಯವರ್ತಿಗಳ ಕಾಟ ಹೀಗೆ ಹತ್ತು ಹಲವಾರು ತೊಡಕುಗಳಿಂದಾಗಿ ತೋಟಗಾರಿಕಾ ಬೆಳೆಗಾರ ತೋಟಗಾರಿಕಾ ಇಲಾಖೆಯ ಸನಿಹಕ್ಕೆ ಹೋಗುವುದಿಲ್ಲ. ಮೊದಲೆಲ್ಲ ಅಡಕೆ ಕೊಳೆ ರೋಗಕ್ಕೆ ಹೊಡೆಯುತ್ತಿದ್ದ ಔಷಧದ ಮೂಲವಾಗಿದ್ದ ಮೈಲುತುತ್ತ ಸಹಾಯಧನದಲ್ಲೂ ಕಡಿತ ಮಾಡಲಾಗಿದೆ. ಅಷ್ಟೋ ಇಷ್ಟೋ ನೀಡುವ ಮೈಲುತುತ್ತದ ಗುಣಮಟ್ಟ ಕಳಪೆಯದ್ದಾಗಿದೆ ಎನ್ನುವ ಅಪಸ್ವರವೂ ಕೇಳಿಬರುತ್ತಿದೆ. ಅಡಕೆ ಕೊಳೆರೋಗ, ಬೇರುಹುಳು ಬಾಧೆ, ಬಾಳೆಗೆ ತಗುಲುವ ಕಟ್ಟೆ ರೋಗ, ಬೆಂಕಿರೋಗ ಇಂಥವುಗಳಿಗೆ ಈ ವರೆಗೂ ನಿರ್ದಿಷ್ಟ ಔಷಧಗಳನ್ನು ಕಂಡುಕೊಳ್ಳಲಾಗಿಲ್ಲ. ಖಾಸಗಿ ವ್ಯಕ್ತಿಗಳ ಜೇಬು ತುಂಬಿಸುವ ಈ ಔಷಧಿ ಸಿಂಪಡನೆಗೆ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಸಹಕಾರಿ ಸಂಸ್ಥೆಗಳ ಮೂಲಕವೂ ಮಾರಾಟ ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಹಿತಾಸಕ್ತಿಯ ಕೈವಾಡ ಇದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಎಲ್ಲ ಸಂಶಯ ಅನುಮಾನಗಳಿಗೆ ಸ್ಪಷ್ಟನೆ ನೀಡುವ ಮೂಲಕ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ರೈತರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು.
ಮಾರ್ಗದರ್ಶನದ ಕೊರತೆ: ಈಗಾಗಲೇ ಸಾಕಷ್ಟು ರೈತರು ಪುಷ್ಪ ಕೃಷಿಗೆ ಕೈಹಾಕಿ ಕೈ ಸುಟ್ಟುಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಸಮರ್ಪಕ ಮಾರ್ಗದರ್ಶನದ ಕೊರತೆ, ಬೆಳೆದ ಹೂವುಗಳಿಗೆ ಸೂಕ್ತ ಮಾರುಕಟ್ಟೆ ಸಿಗದಿರುವುದು ಇವೆಲ್ಲವುಗಳ ಜೊತೆಗೆ ಹವಾಮಾನ ವೈಪರೀತ್ಯ. ಇದಕ್ಕೆಲ್ಲ ಪರಿಹಾರ ಸೂಚಿಸುವ ಜವಾಬ್ದಾರಿ ತೋಟಗಾರಿಕಾ ಇಲಾಖೆಯದ್ದಾಗಿತ್ತು. ಆದರೆ ಬೆಳೆಗಾರರ ಅಂಬೋಣದ ಪ್ರಕಾರ ಇಲಾಖೆ ಹೊಣೆಗಾರಿಕೆಯಿಂದ ದೂರ ಉಳಿದಿದೆ ಎನ್ನುವುದಾಗಿದೆ.
ಕೇವಲ ಪ್ರಚಾರಕ್ಕಾಗಿ ಎರಡು ಮೂರು ದಿನಗಳ ಮೇಳ ಮಾಡಿ, ಎಲ್ಲೆಲ್ಲಿಂದಲೋ ತಂದಿಡಲಾಗುವ ಹೂ ಮತ್ತು ಫಲಗಳನ್ನು ಪ್ರದರ್ಶಿಸಿ ಶಹಬಾಸ್ ಹೇಳಿಸಿಕೊಳ್ಳುವುದಕ್ಕೆ ಈ ಪ್ರದರ್ಶನ ಸೀಮಿತಗೊಳ್ಳುತ್ತಿರುವುದು ಮೂಲೋದ್ದೇಶ ಈಡೇರದಂತಾಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ರೈತ ಏನೆಲ್ಲ ಸಾಧಿಸಬಹುದೆನ್ನುವ ಮಾಹಿತಿ ನೀಡುವ ಕೆಲಸ ಇಲಾಖೆಯಿಂದ ರೈತರು ನಿರೀಕ್ಷೆ ಮಾಡುತ್ತಿದ್ದಾರೆ.
ಅದೇ ರೀತಿ ಸರ್ಕಾರದಿಂದ ಬರುವ ಸಹಾಯಧನ ಅಥವಾ ಮತ್ತಿತರ ಸೌಲಭ್ಯಗಳ ಯೋಜನೆಗಳು ಮಧ್ಯವರ್ತಿಗಳ ಕಾಟದಿಂದ ತಪ್ಪಿ, ನೇರವಾಗಿ ಬೆಳೆಗಾರನ ಕೈಗೆ ಸಿಗುವಂತಾಗಬೇಕು. ಸ್ಥಳೀಯವಾಗಿಯೇ ರೈತರು ತಾವು ಬೆಳೆದ ತೋಟಗಾರಿಕಾ ಬೆಳೆ ಮತ್ತು ಕೈಗೊಂಡ ಪುಷ್ಪ ಕೃಷಿಯಲ್ಲಿಯ ಹೂಗಳನ್ನು ಪ್ರದರ್ಶನಕ್ಕಿಟ್ಟು ಸೈ ಎನಿಸಿಕೊಂಡಾಗ ಮಾತ್ರ ಫಲಪುಷ್ಪ ಪ್ರದರ್ಶನ ಅರ್ಥ ಕಂಡುಕೊಳ್ಳಬಹುದಾಗಿದೆ.
- ವಿಶ್ವಾಮಿತ್ರ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.