ಪಟ್ಟಾಭಿಷೇಕ ಮಹೋತ್ಸವಕ್ಕೆ ಕ್ಷಣಗಣನೆ
ಕನ್ನಡಪ್ರಭ ವಾರ್ತೆ, ಶಿರಸಿ, ಫೆ. 10
ಪಟ್ಟಾಭಿಷೇಕ ಮಹೋತ್ಸವಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ಸೋಮವಾರ ಬೆಳಗಾಗುತ್ತಿದ್ದಂತೆಯೇ ನೂತನ ಯತಿವರ್ಯರ ಪಟ್ಟಾಭಿಷೇಕ ಕಾರ್ಯಕ್ರಮದ ಪೂರ್ವ ಸಿದ್ಧತೆಗಳು ಪ್ರಾರಂಭಗೊಳ್ಳಲಿವೆ.
ಪಟ್ಟಾಭಿಷೇಕಗೊಳ್ಳುವ ಅಭಿನವ ಸ್ವಾಮೀಜಿಗಳಾದ ಮಾಣಿಕ್ಯ ಕೀರ್ತಿ ಸ್ವಾಮೀಜಿಗಳ ಪುರ ಪ್ರವೇಶಕ್ಕಾಗಿ ಎದುರು ನೋಡುತ್ತಿರುವ ಭಕ್ತವೃಂದ ಪೂರ್ವಭಾವಿಯಾಗಿ ವಿವಿಧ ವಿಧಿ ವಿಧಾನಗಳಲ್ಲಿ ತೊಡಗಿಕೊಂಡಿದೆ. ಫೆ. 13ರಂದು ನಡೆಯುವ ಸ್ವಾಮೀಜಿಗಳ ಪಟ್ಟಾಭಿಷೇಕದಲ್ಲಿ ಶ್ರವಣಬೆಳಗೊಳದ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಧಾರ್ಮಿಕ ವಿಧಿಗಳನ್ನು ಕೈಗೊಳ್ಳಲು ಸ್ವಾದಿ ಮಠ ಸರ್ವ ಸನ್ನದ್ಧವಾಗಿದೆ.
10-12 ದಿನಗಳಿಂದ ಮಠದಲ್ಲಿ ಪಟ್ಟಾಭಿಷೇಕದ ಪೂರ್ವಭಾವಿಯಾಗಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ. ವಾಸ್ತು ಶಾಂತಿ, ಶಾಂತಿಚಕ್ರ ಆರಾಧನೆ, ಋಷಿಮಂಡಲ ಆರಾಧನೆ, ಭಕ್ತಾಂಬರ ಆರಾಧನೆ, ವಜ್ರಪಂಜರ ಆರಾಧನೆ, ಕಲ್ಯಾಣಮಂದಿರ ಆರಾಧನೆ, ಗಣಧರವಲಯ ಆರಾಧನೆ, ಸರ್ವದೋಷ ಪ್ರಾಯಶ್ಚಿತ್ತ ಆರಾಧನೆ, ಜಿನಗುಣಸಂಪತ್ತಿ ಆರಾಧನೆ, ಸಿದ್ಧಚಕ್ರ ಆರಾಧನೆ, ಕಲುಕುಂಡ ಆರಾಧನೆಗಳನ್ನು ಮಾಡಲಾಗಿದೆ ಎಂದು ಮಠದ ಪಟ್ಟದ ಪುರೋಹಿತರಾದ ಬಿ.ಪಿ. ಸಿದ್ಧಾರ್ಥ ಇಂದ್ರರು ಮಾಹಿತಿ ನೀಡಿದರು.
ವಿಧಿ ವಿಧಾನ: ಅಭಿನವ ಸ್ವಾಮೀಜಿಗಳು ಜನವರಿ ತಿಂಗಳಿನಿಂದಲೇ ದೀಕ್ಷೆಯನ್ನು ಸ್ವೀಕರಿಸುವ ವಿವಿಧ ವಿಧಿ ವಿಧಾನಗಳಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಈಗಾಗಲೇ ಬ್ರಹ್ಮಚಾರಿ ದೀಕ್ಷೆ, ಕ್ಷುಲ್ಲಕ ದೀಕ್ಷೆಗಳನ್ನು ನೀಡಲಾಗಿದೆ. ಈಗ ಸ್ವಾಮೀಜಿ ದೀಕ್ಷೆ ಅಥವಾ ಭಟ್ಟಾರಕ ದೀಕ್ಷೆಯನ್ನು ನೀಡಲಾಗುತ್ತಿದೆ. ಈ ದೀಕ್ಷೆ ಪಡೆದ ನಂತರ ಸ್ವಾಮೀಜಿಗಳು ದೀಕ್ಷೆ ಪಡೆಯುವ ಕೈಂಕರ್ಯಗಳು ಸಂಪೂರ್ಣಗೊಳ್ಳುತ್ತವೆ ಎಂದು ತಿಳಿಸಿದರು.
ಕೊಲ್ಲಾಪುರ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಸಿಂಹನಗದ್ದೆ ಜೈನಮಠದ ಶಾಂತಿಭೂಷಣ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಕಾರ್ಕಳದ ದಾನಶಾಲಾ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಅರಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೂತನ ಸ್ವಾಮೀಜಿಗಳ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ನಾಂದಣಿ ಜೈನಮಠದ ಜಿನಸೇನ ಭಟ್ಟಾರಕ ಸ್ವಾಮೀಜಿ, ಜಿನಕಂಚಿ ಜೈನಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಕಂಬದ ಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದರೆಯ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಅಮ್ಮಿನಭಾವಿ-ವರೂರು ಜೈನಮಠದ ಧರ್ಮಸೇನ ಭಟ್ಟಾರಕ ಸ್ವಾಮೀಜಿಗಳು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಲಿದ್ದಾರೆ. ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪಾಲ್ಗೊಂಡು ಪಟ್ಟಾಭಿಷೇಕ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ಸ್ವಾದಿ ಜೈನ ದಿಗಂಬರ ಮಠಕ್ಕೆ ದಾರಿ: ಸಾಗರ, ಸಿದ್ದಾಪುರ, ಶಿವಮೊಗ್ಗ ಅಥವಾ ಆ ಮೂಲಕ ಬರುವವರು ಶಿರಸಿಯಿಂದ ಹುಲೆಕಲ್ ರಸ್ತೆ ಮೂಲಕ ಸಾಗಬಹುದು. ಈ ರಸ್ತೆಯಲ್ಲಿ ಸಾಗಿದರೆ ಸ್ವಾದಿ ಮಠಕ್ಕೆ 19 ಕಿ.ಮೀ. ಶಿರಸಿಯಿಂದ ಯಲ್ಲಾಪುರ ರಸ್ತೆಯ ಸೋಂದಾ ಕತ್ರಿಯ ಮೂಲಕವೂ ಸಾಗಬಹುದಾಗಿದ್ದು ಈ ರಸ್ತೆಯಲ್ಲಿ ಸಾಗಿದರೆ 22 ಕಿ.ಮೀ. ದೂರವಾಗುತ್ತದೆ. ಯಲ್ಲಾಪುರ, ಕಲಘಟಗಿ, ಹುಬ್ಬಳ್ಳಿ, ಧಾರವಾಡ ಭಾಗದ ಭಕ್ತರು ಯಲ್ಲಾಪುರ ಶಿರಸಿ ಮಾರ್ಗದಲ್ಲಿ ಆಗಮಿಸಿ ಸೋಂದಾ ಕತ್ರಿಯ ಮೂಲಕ ಸಾಗಬಹುದಾಗಿದೆ. ಫೆ. 11ರ ಮಧ್ಯಾಹ್ನ 1ಕ್ಕೆ ಶ್ರೀ ಮಾಣಿಕ್ಯಕೀರ್ತಿ ಸ್ವಾಮೀಜಿ ಅವರ ಪುರಪ್ರವೇಶ-ಪಾದಾರ್ಪಣೆಯಾಗಲಿದೆ. ನಂತರ ಅವರಿಂದ ದೇವರ ದರ್ಶನ, ನವಕಲಶಾಭಿಷೇಕ. 24 ತೀರ್ಥಂಕರರ ಆರಾಧನೆ, ದಶದಿಕ್ಪಾಲಕರ ಪೂಜೆ, ಕ್ಷೇತ್ರಪಾಲ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಲಿದೆ.
ಸ್ವಾದಿ ದಿಗಂಬರ ಜೈನಮಠಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. 1200 ವರ್ಷಗಳ ಹಿಂದೆ ಈ ಮಠ ಸ್ವಾಮಿ ಅಕಲಂಕರಿಂದ ಸ್ಥಾಪಿಸಲ್ಪಟ್ಟಿತು. ಅಲ್ಲಿಂದ ಈ ವರೆಗೆ ಲಭ್ಯವಿರುವ ಮಾಹಿತಿ ಪ್ರಕಾರ 22 ಯತಿಗಳು ಆಗಿ ಹೋಗಿದ್ದಾರೆ. ಈಗ ಪಟ್ಟವನ್ನಲಂಕರಿಸುವ ಮಾಣಿಕ್ಯ ಕೀರ್ತಿ ಸ್ವಾಮಿಗಳು 23ನೇ ಯತಿಗಳಾಗಿದ್ದಾರೆ. ಸೋದೆಯ ಅರಸು ಮನೆತನ ಸ್ವಾದಿ ಜೈನ ಮಠಕ್ಕೆ ರಾಜಾಶ್ರಯ ನೀಡಿದ್ದನ್ನೂ ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ.
ಸೋದೆ ಅರಸರು ಜೈನಮಠಕ್ಕೆ 1665 ಎಕರೆ ಜಮೀನನ್ನು ಉಂಬಳಿಯಾಗಿ ನೀಡಿದ್ದರು. ಕಾಲಕ್ರಮೇಣ ಬೇರೆ ಬೇರೆ ಕಾರಣಗಳಿಂದಾಗಿ ಮಠದ ಆಸ್ತಿ 45 ಎಕರೆಗೆ ಸೀಮಿತಗೊಂಡಿತು. ಈ ಮಠಕ್ಕೆ ಸಂಬಂಧಪಟ್ಟಂತೆ ಶಿರಸಿಯಲ್ಲೂ ಜೈನ ಬಸದಿಗಳಿವೆ. ಯಲ್ಲಾಪುರ ತಾಲೂಕಿನ ಚವತ್ತಿಯಲ್ಲಿ ಹಾಗೂ ಭಟ್ಕಳ ತಾಲೂಕಿನಾದ್ಯಂತ ಬಸದಿಗಳಿವೆ. ಅದರಲ್ಲಿ ಹಲವಾರು ಬಸದಿಗಳು ಜೀರ್ಣಾವಸ್ಥೆಯಲ್ಲಿವೆ. ಜೈನಮಠ ನಾಡಿನ ಪರಂಪರೆ ಸಂಸ್ಕೃತಿಗೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದೆ. ಅಂತಹ ಮಠಕ್ಕೆ ಇನ್ನಷ್ಟು ಕಾಯಕಲ್ಪ ಕೊಡುವ ಕೆಲಸ ಸರ್ಕಾರ ಮತ್ತು ಸಾರ್ವಜನಿಕರಿಂದ ಆಗಬೇಕೆನ್ನುವ ಆಶಯ ವ್ಯಕ್ತವಾಗುತ್ತಿದೆ.
- ವಿನಯ ದಂಟಕಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

