ಬಸ್ ತಡೆ: ಪ್ರಯಾಣಿಕರ ಪರದಾಟ ದಾಂಡೇಲಿ ಬಂದ್
ದಾಂಡೇಲಿ: ತಾಲೂಕು ಆಗಲು ಎಲ್ಲ ಅರ್ಹತೆಗಳಿದ್ದೂ ನೂತನ ಬಜೆಟ್ನಲ್ಲಿ ದಾಂಡೇಲಿಯನ್ನು ಸೇರಿಸದೇ ಇರುವುದನ್ನು ವಿರೋಧಿಸಿ ನಗರದ ಜೆಡಿಎಸ್ ಮುಖಂಡರು ಸೋಮವಾರ ಕರೆ ನೀಡಿದ ದಾಂಡೇಲಿ ಬಂದ್ಗೆ ಉತ್ತಮ ಸ್ಪಂದನೆ ದೊರಕಿದೆ.
ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದರೂ, ನಗರದ ವಾಣಿಜ್ಯ ಮಳಿಗೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿದವು. ಬೆಳಗ್ಗೆ 10ರ ವೇಳೆಗೆ ನಗರದ ಕಿತ್ತೂರು ಚನ್ನಮ್ಮ ಸರ್ಕಲ್ನಲ್ಲಿ ಜೆಡಿಎಸ್ ಕಾರ್ಯಕರ್ತರುಟೈರಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ ದಾಂಡೇಲಿ ತಾಲೂಕು ಆಗಲೇಬೇಕೆಂದು ಘೋಷಣೆಗಳನ್ನು ಕೂಗಿದರು.
ಪ್ರಯಾಣಿಕರ ಪರದಾಟ: ಧಾರವಾಡ, ಬೆಳಗಾವಿ, ಹಳಿಯಾಳ ಕಡೆಗಳಿಂದ ಬರುವ ಸಾರಿಗೆ ಬಸ್ಸುಗಳನ್ನು ಕಾರ್ಯಕರ್ತರು ತಡೆಹಿಡಿದ ಪರಣಾಮ ಪ್ರಯಾಣಿಕರು ಪರದಾಡಬೇಕಾಯಿತು. ಬ್ಯಾಂಕ್ಗಳು, ಪೆಟ್ರೋಲ್ ಬಂಕ್ಗಳು ಕೆಲಕಾಲ ಕಾರ್ಯ ನಿಲ್ಲಿಸಿ ಬಂದ್ಗೆ ಸಹಕಾರ ನೀಡಿದವು. ನಗರದ ಒಂದೆರಡು ಕಡೆಗಳಲ್ಲಿ ರಿಕ್ಷಾ ಚಾಲಕರು ಹಾಗೂ ಬಂದ್ನಲ್ಲಿ ಪಾಲ್ಗೊಂಡ ನಾಗರಿಕರ ಮಧ್ಯೆ ಮಾತಿನ ಚಕಮಕಿ ನಡೆದು ಕೆಲಕಾಲ ವಾತಾವರಣ ಉದ್ವಿಗ್ನಗೊಂಡಿತ್ತು. ಸಂಜೆ 5ರ ವೇಳೆಗೆ ದಾಂಡೇಲಿ ನಗರ ಸಹಜ ಸ್ಥಿತಿಗೆ ಬಂದಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರು. ಜೆಡಿಎಸ್ನ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಉಪ ತಹಸೀಲ್ದಾರ್ ಎ.ಎ. ಖತೀಭ್ ಅವರಿಗೆ ಮನವಿ ಸಲ್ಲಿಸಿ ದಾಂಡೇಲಿ ತಾಲೂಕು ಆಗಲೇಬೇಕೆಂದು ಆಗ್ರಹಿಸಿದರು.
ಜೆಡಿಎಸ್ ಅಧ್ಯಕ್ಷ ಟಿ.ಆರ್. ಚಂದ್ರಶೇಖರ, ಯುವ ಜೆಡಿಎಸ್ ಘಟಕದ ಅಧ್ಯಕ್ಷ ಬಾಲಮಣಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಸ್ತಾಕ್ ಶೇಕ್, ನಗರಸಭೆ ಅಧ್ಯಕ್ಷ ಗೋವಿಂದ ಮೆಲಗಿರಿ, ಉಪಾಧ್ಯಕ್ಷ ಶೋಭಾ ಜಾಧವ, ಸ್ಥಾಯಿ ಸಮಿತಿ ಚೇರಮನ್ ರಯಾಜ್ ಶೇಕ್, ನಗರಸಭೆ ಸದಸ್ಯರಾದ ಆದಂ ದೇಸೂರು, ಥಾಮಸ್ ಫರ್ನಾಂಡಿಸ್, ಯುವ ಮುಖಂಡರಾದ ಸುರೇಶ ದಂಡಗಲ್, ನರೇಂದ್ರ ಚವ್ಹಾಣ, ಶಶಿ ಒಶೀಮಠ ಪ್ರತಿಭಟನೆ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

