ಉತ್ತರ ಕನ್ನಡ

ನಂಜುಂಡಪ್ಪ ವರದಿ ಅನುಷ್ಠಾನದ ಮೌಲ್ಯಮಾಪನ

Published On :

ಕನ್ನಡಪ್ರಭ ವಾರ್ತೆ, ಕಾರವಾರ, ಫೆ. 13
ಡಾ. ನಂಜುಂಡಪ್ಪ ವರದಿ ಅನುಷ್ಠಾನದ ಕುರಿತು ಮೌಲ್ಯಮಾಪನ ನಡೆಸಲಾಗುತ್ತಿದ್ದು, ಬಳಿಕ ವರದಿ ಜಾರಿಯ ಬಗ್ಗೆ ಸಮಗ್ರ ಚಿತ್ರಣ ಲಭಿಸಲಿದೆ ಎಂದು ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ತ್ರಿವಿಕ್ರಮ ಜೋಶಿ ಹೇಳಿದರು.
ಅವರು ಬುಧವಾರ ಜಿಪಂ ಸಭಾಭವನದಲ್ಲಿ ವರದಿ ಜಾರಿಯ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಡಾ. ನಂಜುಂಡಪ್ಪ 2001ರಲ್ಲಿ ರಾಜ್ಯದ 114 ತಾಲೂಕುಗಳ ಅಭಿವೃದ್ಧಿ ಕುರಿತು ವರದಿ ನೀಡಿದ್ದರು. ಆದರೆ, ಆ ವರದಿ ಅನುಷ್ಠಾನಕ್ಕೆ ಬಂದಿದ್ದು 2007-08ರಲ್ಲಿ, ವರದಿಯನ್ನಾಧರಿಸಿ 8 ವರ್ಷಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಬೇಕು ಎಂದು ನಿಗದಿ ಪಡಿಸಲಾಗಿತ್ತು. ಈ ವರದಿಯ ಪ್ರಕಾರ ರಾಜ್ಯದ 114 ತಾಲೂಕುಗಳಲ್ಲಿ 8 ವರ್ಷಗಳ ಅವಧಿಯಲ್ಲಿ ಒಟ್ಟು ರು. 31 ಸಾವಿರ ಕೋಟಿ ವಿನಿಯೋಗಿಸಬೇಕಾಗಿದೆ. ಈಗ ಕಾಮಗಾರಿ ಜಾರಿಯಾಗಿ 6 ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ. ಕಾಮಗಾರಿಗಳು ಹೇಗೆ ನಡೆದಿವೆ. ವರದಿಯಲ್ಲಿ ಹೇಳಲಾದ ತಾಲೂಕುಗಳ ಚಿತ್ರಣ ಹೇಗಿದೆ. ಇವೆಲ್ಲವುಗಳ ಬಗ್ಗೆ ಮೌಲ್ಯಮಾಪನ ನಡೆಯಬೇಕಾಗಿದೆ ಎಂದು ಹೇಳಿದರು.
ಈ ಮೌಲ್ಯಮಾಪನ ನಡೆದ ಬಳಿಕ ಹಿಂದುಳಿದ ತಾಲೂಕು ಮುಂದುವರಿದಿದೆಯೇ ಅಥವಾ ಹಾಗೇ ಉಳಿದಿದೆಯೇ, ಆ ತಾಲೂಕಿನ ಪರಿಸ್ಥಿತಿ ಹೇಗಿದೆ ಎನ್ನುವ ವಾಸ್ತವ ಚಿತ್ರಣ ಲಭಿಸಲಿದೆ. ಇದರಿಂದ ನಂಜುಂಡಪ್ಪ ವರದಿ ಅನುಷ್ಠಾನವನ್ನು ಮುಂದುವರಿಸುವ ಅಗತ್ಯವಿದೆಯೇ ಎನ್ನುವುದು ಗೊತ್ತಾಗಲಿದೆ ಎಂದು ಹೇಳಿದರು.
ನಂಜುಂಡಪ್ಪ ತಮ್ಮ ವರದಿಯಲ್ಲಿ ಹೇಳಲಾದ ತಾಲೂಕುಗಳ ಅಭಿವೃದ್ಧಿಗೆ ಇಂತಿಷ್ಟು ಹಣ ನೀಡಬೇಕೆಂದು ತಿಳಿಸಿದ್ದರು. ಆದರೆ, ವರದಿ ಅನುಷ್ಠಾನಕ್ಕೆ 6 ವರ್ಷ ವಿಳಂಬವಾಯಿತು. ನಂತರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಸಾಧನ, ಸಾಮಗ್ರಿಗಳ ಬೆಲೆಯಲ್ಲಾದ ಹೆಚ್ಚಳ ಮೊದಲಾದ ಕಾರಣಗಳಿಂದಾಗಿ ಆಗ ಸೂಚಿಸಿದ ಹಣದಿಂದ ಅಭಿವೃದ್ಧಿ ಸಾಧ್ಯವೇ ಅಥವಾ ಇನ್ನಷ್ಟು ನೆರವು ನೀಡಬೇಕೆ ಎನ್ನುವುದು ಮೌಲ್ಯಮಾಪನದಿಂದ ಬೆಳಕಿಗೆ ಬರಲಿದೆ ಎಂದರು.
ಡಾ. ನಂಜುಂಡಪ್ಪ ವರದಿ ಅನುಷ್ಠಾನದ ಪ್ರಗತಿಯ ಕುರಿತು ಪುಸ್ತಕವೊಂದನ್ನು ಹೊರತರಲು ಉದ್ದೇಶಿಸಲಾಗಿದೆ. ಇನ್ನು ಆರು ತಿಂಗಳಲ್ಲಿ ಪುಸ್ತಕ ಸಿದ್ಧಗೊಳ್ಳಲಿದೆ. ಈ ಪುಸ್ತಕ ಪ್ರತಿ ತಾಲೂಕುಗಳಲ್ಲಿ ಆದ ಅಭಿವೃದ್ಧಿ, ಛಾಯಾಚಿತ್ರ, ವೆಚ್ಚವಾದ ಹಣ ಇವುಗಳನ್ನು ಒಳಗೊಳ್ಳಲಿದೆ. ಈ ಪುಸ್ತಕದಿಂದ ವರದಿಯ ಅನುಷ್ಠಾನದ ಚಿತ್ರಣ ಸಿಗಲಿದೆ ಎಂದು ವಿವರಿಸಿದರು.
39 ಹಿಂದುಳಿದ ತಾಲೂಕು: ರಾಜ್ಯದಲ್ಲಿ ನಂಜುಂಡಪ್ಪ ವರದಿಯಲ್ಲಿ ಒಟ್ಟು 114 ತಾಲೂಕುಗಳನ್ನು ಗುರುತಿಸಲಾಗಿದೆ. ಇದರಲ್ಲಿ 39 ಅತ್ಯಂತ ಹಿಂದುಳಿದ, 40 ಅತೀ ಹಿಂದುಳಿದ ಹಾಗೂ 30 ಹಿಂದುಳಿದ ತಾಲೂಕುಗಳೆಂದು ಹೇಳಲಾಗಿದೆ. ವರದಿ ಅನುಷ್ಠಾನಕ್ಕೆ ಬಂದ ಮೇಲೆ ಇದುವರೆಗೆ ಶೇ. 60ರಷ್ಟು ಪ್ರಗತಿ ಸಾಧಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಪ್ರಗತಿ ಸಮಾಧಾನಕರ ರೀತಿಯಲ್ಲಿ ಆಗಿದೆ. ಕೆಲ ಜಿಲ್ಲೆಗಳಲ್ಲಿ ತಾಂತ್ರಿಕ ಕಾರಣಗಳಿಂದ ಅಂದರೆ ಭೂಮಿ ಲಭ್ಯವಿಲ್ಲದೇ ಇರುವುದು ಇತ್ಯಾದಿ ಕಾರಣಗಳಿಂದ ವಿಳಂಬವಾಗಿದೆ. ಈ ಸಮಸ್ಯೆಗಳನ್ನು ನಿವಾರಿಸಿಕೊಂಡು ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೊಳ್ಳಬೇಕೆಂದು ತಾವು ಸೂಚಿಸಿದ್ದಾಗಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಂಜುಂಡಪ್ಪ ವರದಿಯಲ್ಲಿ ತಿಳಿಸಲಾದ ನಾಲ್ಕು ತಾಲುಕುಗಳಿವೆ. ಈ ಜಿಲ್ಲೆಯಲ್ಲಿ ಈ ಬಾರಿ ರು. 24.66 ಕೋಟಿ ಈ ನಾಲ್ಕು ತಾಲುಕುಗಳ ಅಭಿವೃದ್ಧಿಗಾಗಿ ಬಿಡುಗಡೆಯಾಗಿತ್ತು. ಇದರಲ್ಲಿ ಶೇ. 75ರಷ್ಟು ಕಾಮಗಾರಿಗಳು ನಡೆದಿವೆ. ಪ್ರಗತಿ ಪರಿಶೀಲನೆಯಲ್ಲಿ ಈ ಅಂಶಗಳು ತಿಳಿದು ಬಂದಿವೆ ಎಂದು ಹೇಳಿದರು. ಜಿಲ್ಲಾಧಿಕಾರಿ ಇಂಕಾಂಗ್ಲೋ ಜಮೀರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಾಯ ಕಾಮತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.