ಮಾಣಿಕ್ಯ ಕೀರ್ತಿ ಶ್ರೀಗಳ ಪಟ್ಟಾಭಿಷೇಕ
ಕನ್ನಡಪ್ರಭ ವಾರ್ತೆ, ಶಿರಸಿ, ಫೆ. 13
ಸುಧಾಪುರ ಗ್ರಾಮದ ಶ್ರೀಕ್ಷೇತ್ರ ಸ್ವಾದಿ ಜೈನಮಠಕ್ಕೆ ಮಾಣಿಕ್ಯ ಕೀರ್ತಿ ಸ್ವಾಮೀಜಿಗಳು ನೂತನ ಪಟ್ಟಾಚಾರ್ಯರಾಗಿ ಬುಧವಾರ ಪಟ್ಟಾಭಿಷೇಕ ಹೊಂದಿದರು. ಮಠದ 22ನೇ ಸ್ವಾಮೀಜಿಗಳಾದ ಮಾಣಿಕ್ಯನಾಥರು ಭಟ್ಟಾಕಳಂಕ ಪೀಠದ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳಾಗಿ ಸಿಂಹಾಸನಾರೋಹಣ ಮಾಡಿದರು.
ಶ್ರವಣಬೆಳಗೋಳದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ಸಮಕ್ಷಮದಲ್ಲಿ ಈ ಪೀಠಾರೋಹಣ ನಡೆದಿದ್ದು, ಮಠಕ್ಕೆ ಆಗಮಿಸಿದ್ದ 10 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಈ ಶುಭಮುಹೂರ್ತಕ್ಕೆ ಸಾಕ್ಷಿಯಾದರು. ನೇಮಿನಾಥ ಸ್ವಾಮಿ ಹಾಗೂ ಕೂಷ್ಮಾಂಡಿನಿ ದೇವಿ ಸನ್ನಿಧಿಯಲ್ಲಿ ಫೆ. 13ರ ನಡು ಮಧ್ಯಾಹ್ನ 11.59ರಿಂದ 12.37ರ ನಡುವಿನ ವೃಷಭ ಲಗ್ನದ ಶುಭ ಸಂದರ್ಭದಲ್ಲಿ ನೂತನ ಸ್ವಾಮೀಜಿಗಳ ಪಟ್ಟಾಭಿಷೇಕ ನಡೆಯಿತು.
ವಿಧಿವಿಧಾನ: ಪ್ರಾತಃಕಾಲ 4 ಗಂಟೆಯಿಂದಲೇ ಪೂಜಾ ವಿಧಾನಗಳು ಆರಂಭಗೊಂಡವು. ಸ್ವಾಮೀಜಿಯವರನ್ನು ಪುರೋಹಿತ ವರ್ಗ ಮಂಗಲಾಷ್ಟಕ, ಸುಪ್ರಭಾತ, ಸ್ತೋತ್ರದೊಂದಿಗೆ ಬಸದಿಗೆ ಬರಮಾಡಿಕೊಂಡಿತು. ಧಾರ್ಮಿಕ ಕೈಂಕರ್ಯದಂತೆ ಸರಸಂಗಮಿ ಮನೆತನದ ಶಶಿಕಾಂತ ಪಿ. ಪಟೇಲ್ ನೀಡಿದ ಹೊಸ ವಸ್ತ್ರವನ್ನು ಧರಿಸಿದ ಮಾಣಿಕ್ಯ ಕೀರ್ತಿ ಸ್ವಾಮೀಜಿಯವರು ಜಿನಮಂದಿರ ದರ್ಶನ ಮಾಡಿದರು. ದೇವರ ಎದುರು ಸ್ವಾಮೀಜಿಗಳಿಗೆ ಪಟ್ಟಬಂಧ (ಮುಂಡಾಸು)ವನ್ನು ಕಟ್ಟಲಾಯಿತು. ನಂತರ ಮಂಗಳ ಕಳಸ ಸ್ಥಾಪನೆ ಕಾರ್ಯಕ್ರಮ ನಡೆಯಿತು.
ನೇಮಿನಾಥ ತೀರ್ಥಂಕರರಿಗೆ ನವಕಳಶಾಭಿಷೇಕ ಪೂಜೆ, ಮಹಾಶಾಂತಿಮಂತ್ರ ಪಠಣ, ಶಾಂತಿಧಾರಾ, ಕೂಷ್ಮಾಂಡಿನಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಷೋಡಶೋಪಚಾರಸಹಿತ ಮಂಗಳಾರತಿ ನಡೆಯಿತು. ನಂತರ ಬೆಳಗ್ಗೆ 11.59ಕ್ಕೆ ಶ್ರೀ ಮಾಣಿಕ್ಯಕೀರ್ತಿ ಶ್ರೀಗಳಿಗೆ ಚತುರ್ದಿಕ್ಕು ಮತ್ತು ಸಿಂಹಾಸನಕ್ಕೆ ವಂದನೆ ಸಲ್ಲಿಸಿದರು. ಪರಂಪರಾನುಗತವಾಗಿ ಪಟ್ಟ ಕಟ್ಟುತ್ತ ಬಂದಿರುವ ಸರಸಂಗಮಿ ಮನೆತನದ ಶಶಿಕಾಂತ ಪಿ. ಪಟೇಲ್ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಸಿಂಹಾಸನದ ಮೇಲೆ ಕೂರಿಸಿದ ನಂತರ ಮಂಗಲಾಷ್ಟಕ ಮಂತ್ರಾಕ್ಷತೆ ಅರ್ಪಿಸುವ ಮೂಲಕ ಪಟ್ಟಾಭಿಷೇಕದ ವಿಧಿ ಆರಂಭಗೊಂಡಿತು. ಪಟ್ಟದ ಸಿಂಹಾಸನದ ಬಳಿ ಕ್ಷೇತ್ರಪಾಲ ಪೂಜೆ, ವಾಸ್ತು, ವಾಯು, ಮೇಘ, ಅಗ್ನಿ, ನಾಗ ಪಂಚಕುಮಾರ ದೇವತೆಗಳ ಪೂಜೆ, ಭೂಮಿದೇವಿ ಪೂಜೆ, ಪಂಚಕಳಶ ಸ್ಥಾಪನೆ ಇತ್ಯಾದಿ ವಿಧಿ-ವಿಧಾನಗಳು ನಡೆದವು.
- ವಿಶ್ವಾಮಿತ್ರ ಹೆಗಡೆ/ವಿನಯ ದಂಟಕಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

