ಕೈ ಸುಟ್ಟುಕೊಂಡ ವಿದ್ಯಾರ್ಥಿಗೆ ಪರಿಹಾರ ನೀಡಿ
ಗೋಕರ್ಣ: ರಾಷ್ಟ್ರೀಯ ಹೆದ್ದಾರಿ ಬಳಲೆ ಬಳಿ ವಿದ್ಯುತ್ ಆಘಾತದಿಂದ ಕೈ ಸುಟ್ಟುಕೊಂಡ ವಿದ್ಯಾರ್ಥಿಗೆ ಪರಿಹಾರ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ಹೆಸ್ಕಾಂನ ಧೋರಣೆ ವಿರೋಧಿಸಿ ಬಳಲೆ ಗ್ರಾಮಸ್ಥರು ಈಚೆಗೆ ರಸ್ತೆತಡೆ ನಡೆಸಿದರು.
ಫೆ. 2ರಂದು ದನ, ಕರುಗಳನ್ನು ಮನೆಗೆ ಕರೆತರಲು ಹೋಗಿದ್ದ ಹಿರೇಗುತ್ತಿ ಸೆಕೆಂಡರಿ ಪ್ರೌಢಶಾಲೆಯ 10ನೇ ತರಗತಿ ಹುಡುಗ ಗೋವಿಂದ ವಾಸುದೇವ ಗೌಡ (16) ತೀರಾ ಕೆಳಮಟ್ಟದಲ್ಲಿದ್ದ ಹೈಟೆನ್ಶನ್ ಲೈನ್ಗೆ ಆಕಸ್ಮಾತಾಗಿ ಕೈತಾಗಿಸಿದ್ದರಿಂದ ಎರಡೂ ಕೈ ಸುಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಬಾಂಬೋಲಿಯಮ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಹುಡುಗನನ್ನು ತೀವ್ರ ತಪಾಸಣೆಗೊಳಪಡಿಸಿದ ಅಲ್ಲಿನ ವೈದ್ಯರು ಆಘಾತಕ್ಕೊಳಗಾದ ಈತನ ಎರಡೂ ಕೈಗಳನ್ನು ತೆಗೆಯಬೇಕು ಎಂದು ವರದಿ ನೀಡಿದ್ದರು. ಈ ಸಂಬಂಧ ಹುಡುಗನನ್ನು ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಪರಿಹಾರದ ಭರವಸೆ ಸಿಗಲಿಲ್ಲ: ಬಳಲೆ ಗ್ರಾಪಂ ಅಧ್ಯಕ್ಷ ಸುಭಾಸ ಕಾರೇಬೈಲ್, ಇಷ್ಟೆಲ್ಲ ಘಟನೆ ನಡೆಯುತ್ತಿದ್ದಾಗಲೂ ಹೆಸ್ಕಾಂನ ಯಾವುದೇ ಅಧಿಕಾರಿಗಳು ಆಗಮಿಸಿ ಪರಿಹಾರದ ಭರವಸೆ ನೀಡದೆ ತೆಪ್ಪಗಿರುವುದು ಇಲ್ಲಿನ ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ. ಹೆಸ್ಕಾಂನ ಅಧಿಕಾರಿಗಳನ್ನು ಸಂಪರ್ಕಿಸಿದಾಗಲೂ ಸಮರ್ಪಕ ಪರಿಹಾರದ ಭರವಸೆ ನೀಡದ ಕಾರಣ ಬೇಸತ್ತು ಊರ ನಾಗರಿಕರ ಮತ್ತು ಸ್ಥಳೀಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಕೈಗೊಂಡಿರುವುದಾಗಿ ತಿಳಿಸಿದರು.
ಆಶ್ರಯ ಫೌಂಡೇಶನ್ನ ರಾಜೀವ ಗಾಂವಕರ, ಗಾಯಾಳುವಿಗೆ ಸೂಕ್ತ ಪರಿಹಾರ ಧನ ನೀಡಿ ಆತನಿಗೆ ಹೆಸ್ಕಾಂನಲ್ಲಿಯೇ ಉದ್ಯೋಗ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಇಲ್ಲದಿದ್ದಲ್ಲಿ ಪರಿಹಾರ ದೊರಕುವವರೆಗೂ ಹೋರಾಟ ನಡೆಸಿ ಹೆಸ್ಕಾಂಗೆ ಮುತ್ತಿಗೆ ಹಾಕಲಾಗುವುದು. ಇಲ್ಲದಿದ್ದರೆ ನ್ಯಾಯಾಲಯದ ಮೆಟ್ಟಿಲೇರಲೂ ನಾವು ಸಿದ್ಧ ಎಂಬುದಾಗಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎನ್. ಪಟಗಾರ, ಸ್ಥಳದಲ್ಲಿಯೇ ರು. 5,000 ಸಹಾಯಧನ ನೀಡಿ, ಮೇಲಧಿಕಾರಿಗಳ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ಒದಗಿಸಲು ಪ್ರಯತ್ನ ಮಾಡುವುದಾಗಿ ಪ್ರತಿಭಟನಾಕಾರರಿಗೆ ತಿಳಿಸಿದರು.
ಠಾಣೆಯಲ್ಲಿ ದೂರು: ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಸನ್ 338ರ ಪ್ರಕಾರ ಹೆಸ್ಕಾಂ ಅಧಿಕಾರಿಗಳ ಮೇಲೆ ದೂರು ದಾಖಲಾಗಿದೆ. ಪಿಎಸ್ಐ ಸಂತೋಷ ಕಾಯ್ಕಿಣಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಅಂಕೋಲಾ ಠಾಣೆಯ ಸಿಪಿಐ ದಿನೇಶ ಪ್ರಸಾದ, ಕುಮಟಾ ಸಿಪಿಐ ಶ್ರೀಕಾಂತ, ಸಗಡಗೇರಿ ಗ್ರಾಪಂ ಅಧ್ಯಕ್ಷೆ ಸೀತಾ ಗೌಡ, ಉಪಾಧ್ಯಕ್ಷ ನಾಗರಾಜ ನಾಯಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮುಖ್ಯಸ್ಥೆ ಗೋದಾವರಿ ನಾಯಕ, ಸ್ತ್ರೀಶಕ್ತಿ ಸಂಘದ ಸದಸ್ಯೆ ವಿದ್ಯಾ ವೈದ್ಯ, ಬಳಲೆ ಊರ ಗೌಡರಾದ ನಾರಾಯಣ ಗೌಡ, ಬೈರವ ಹರಿಕಂತ್ರ, ಈಶ್ವರ ಹಳ್ಳೇರ, ಸಂಜಯ ಗೌಡ, ಸತೀಶ ಗೌಡ, ಶೇಖರ ಆಚಾರಿ ಮಹೇಶ ನಾಯಕ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

