ಸತತ ಆನೆ ದಾಳಿ: ಇಲಾಖೆ ಮೌನ
ಕನ್ನಡಪ್ರಭ ವಾರ್ತೆ, ಜೋಯಿಡಾ, ಫೆ. 14
ಅಣಶಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸತತ ಆನೆದಾಳಿಗೆ ಅರಣ್ಯ ಇಲಾಖೆ ಮೌನವಹಿಸಿದ ಪರಿಣಾಮ ರೈತರ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದನ್ನು ವಿರೋಧಿಸಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬೆಳೆಹಾನಿ ಜೊತೆಯಲ್ಲಿ ಪ್ರಾಣಕ್ಕೆ ಕುತ್ತು ತರುತ್ತಿರುವ ಘಟನೆಗಳು ಘಟಿಸುತ್ತಿವೆ. ಆದರೂ ಅರಣ್ಯ ಇಲಾಖೆ ಜನರ ಬೆಳೆ, ಪ್ರಾಣಗಳ ಜೊತೆ ಚೆಲ್ಲಾಟವಾಡುತ್ತಿದೆ. ಕಾಡು ಪ್ರಾಣಿಗಳು ನಾಡಿಗೆ ನುಗ್ಗದಂತೆ ತಡೆಯುವ ಯಾವ ಕ್ರಮವನ್ನೂ ಮಾಡುತ್ತಿಲ್ಲ. ಇದರಿಂದಾಗಿ ಅಣಶಿ ವಲಯದ ರೈತಾಪಿ ವರ್ಗ ಅರಣ್ಯ ಇಲಾಖೆ ಕಾರ್ಯ ವೈಖರಿಗೆ ಬೇಸತ್ತು ಪ್ರತಿಭಟನೆಗೆ ಮುಂದಾಯಿತು.
ಸಾರ್ವಜನಿಕರ ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರದೇಶದ ಗ್ರಾಮಗಳಿಗೆ ನುಗ್ಗಿರುವ ಆನೆಗಳನ್ನು ಮೂರು ದಿನಗಳಲ್ಲಿ ಸ್ಥಳಾಂತರಿಸಲಾಗುವುದು. ಗ್ರಾಮಸ್ಥರ ಇತರ ಹತ್ತು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಾಡುವ ಭರವಸೆ ನೀಡಿದರು.
ಕ್ರಮ ಕೈಗೊಳ್ಳುತ್ತಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸದಸ್ಯೆ ಶುಭಾಂಗಿ ಗಾವಡಾ, ಎರಡು ತಿಂಗಳಿನಿಂದ ಒಂಟಿ ಸಲಗವೊಂದು ಅಣಶಿ, ಗುಂದ, ಪಣಸೋಲಿ ವಲಯ ಅರಣ್ಯ ವ್ಯಾಪ್ತಿಯ ರೈತರ ಜಮೀನಿಗೆ ನುಗ್ಗಿ ಅಪಾರ ಬೆಳೆ ಹಾನಿ ಎಸಗಿದ್ದಲ್ಲದೆ ಪಸೋಲಿ ಗ್ರಾಮದಲ್ಲಿ ಬೆಳೆ ಕಾಯುತ್ತಿದ್ದ ಮೂವರು ರೈತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಅರಣ್ಯ ಇಲಾಖೆಗೆ ಮಾಹಿತಿ ಇದ್ದರೂ ಅಧಿಕಾರಿಗಳು ನಿಯಂತ್ರಿಸುವ ಕ್ರಮ ಕೈಗೊಳ್ಳದೇ ಇರುವುದು ವಿಷಾದಕರ. ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಜನಾಕ್ರೋಶ ಎದುರಿಸಬೇಕಾದ ಪ್ರಸಂಗ ಬರಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರಮುಖ ಬೇಡಿಕೆಯಾದ ಹುಲಿ ಯೋಜನೆ ವ್ಯಾಪ್ತಿಯ ಪ್ರದೇಶದ ನಾಗರಿಕರಿಗೆ ಯೋಜನೆಯ ನಿಯಮದಂತೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕು. ದಿನಗೂಲಿಯಲ್ಲಿ ಕೆಲಸಮಾಡುವ ವಾಚ್ಮನ್ರನ್ನು ಕಾಯಂಗೊಳಿಸಬೇಕು. ಬತ್ತದ ಹಾನಿ ಪರಿಹಾರ ಕ್ವಿಂಟಲ್ಗೆ ರು. 600 ಬದಲಾಗಿ ರು. 1500ಕ್ಕೆ ಹೆಚ್ಚಿಸಬೇಕು. ಹುಲಿ ದಾಳಿಗೊಳಗಾದ ಸಾಕು ಪ್ರಾಣಿ ಜೀವ ಪರಿಹಾರ ರು. 1000 ಬದಲಾಗಿ ರು. 15,000 ವರೆಗೆ ನೀಡಬೇಕು. ಅರಣ್ಯ ಇಲಾಖೆಯ ಅಡಿಯಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ಸರ್ಕಾರದ ದಿನಗೂಲಿ ರು. 188.26ನ್ನು ನೇರವಾಗಿ ದುಡಿದ ಕೂಲಿ ಕಾರ್ಮಿಕರಿಗೆ ನೀಡುವಂತಾಗಬೇಕು. ಕಾಡಿನ ಕಿರು ಉತ್ಪನ್ನವನ್ನು ಉಪಜೀವನಕ್ಕೆ ಬಳಸಲು ಅವಕಾಶ ಕಲ್ಪಿಸಬೇಕು. ಅತಿಕ್ರಮಣ ಸಾಗುವಳಿ ಕೃಷಿ ಹಾನಿಗೆ ಪರಿಹಾರ ನೀಡಬೇಕು. ಕುಮರಿ ಬೇಸಾಯಕ್ಕೆ ಅವಕಾಶ ನೀಡುವುದು, ಸ್ವಂತ ವಾಸ್ತವ್ಯದ ಮನೆ ನಿರ್ಮಾಣಕ್ಕೆ ಹಾಗೂ ಕಚ್ಚಾವಸ್ತು ಬಳಕೆಗೆ ಅವಕಾಶ ಕಲ್ಪಿಸುವುದು ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು.
ಕಚೇರಿಗೆ ಮುತ್ತಿಗೆ: ಪ್ರತಿಭಟನೆ ಆರಂಭದಲ್ಲಿ ಅಣಶಿ ಸಾತೇರಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗುತ್ತಾ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಈ ಸಂದರ್ಭ ವಲಯ ಅರಣ್ಯ ಅಧಿಕಾರಿ ಮಳವಳ್ಳಿ ಪ್ರತಿಭಟನಾಕಾರರ ಬೇಡಿಕೆಯನ್ನು ಸರ್ಕಾರ ಮಟ್ಟದಲ್ಲಿ ತಿಳಿಸುವುದಾಗಿ ಹೇಳಿದರು. ಒಂಟಿ ಸಲಗವನ್ನು ಮೂರು ದಿನದೊಳಗಾಗಿ ಸ್ಥಳಾಂತರಿಸುವ ಭರವಸೆ ನೀಡಿದರು. ಪ್ರತಿಭಟನೆ ನೇತೃತ್ವವನ್ನು ಜನ್ಮಿ ಕುಣಬಿ ಹೋರಾಟ ಸಮಿತಿ, ಗ್ರೀನ್ ಇಂಡಿಯಾ ಸಂಸ್ಥೆ ಜೋಯಿಡಾ ಹಾಗೂ ಅಣಶಿ, ಕಾತೇಲಿ, ಉಳವಿ ಗ್ರಾಮ ಪಂಚಾಯಿತಿಗಳು ವಹಿಸಿದ್ದವು.
ಜನ್ಮಿ ಅಧ್ಯಕ್ಷ ತುಕಾರಾಮ ವೆಳೀಪ್, ಉಳವಿ ಗ್ರಾಪಂ ಅಧ್ಯಕ್ಷ ಶ್ವೇತಾ ಗಾಳಕರ, ಉಪಾಧ್ಯಕ್ಷ ಸಂತೋಷ ಗಾವಡಾ, ಕಾತೇಲಿ ಗ್ರಾಪಂನ ರಾಮದಾಸ ಗಾವಡಾ, ಗ್ರಾಪಂ ಸದಸ್ಯರಾದ ಕೃಷ್ಣಾ ಅಣಶಿಕರ, ಶಶಿಕಾಂತ ದೇಸಾಯಿ, ಪ್ರಮುಖರಾದ ಸೋಮಣ್ಣಾ ಹನೋಲಕರ, ಪ್ರಸನ್ನ ಗಾವಡಾ, ಪಾಂಡುರಂಗ ಅಣಶಿಕರ, ಸುಭಾಶ ವೆಳೀಪ್, ಗಜಾನನ ಗಾವಡಾ, ದಯಾನಂದ ಮಿರಾಶಿ, ಚಂದ್ರಕಾಂತ ವೆಳೀಪ್, ಪ್ರಭಾಕರ ಸೋಲೆಕರ, ದಿಲೀಪ್ ಮಿರಾಶಿ, ಮಾದೇವ ಪಾಟಣಕರ, ಅನಂತ ವೆಳೀಪ್, ಗಜಾನನ ಕಾಜುಗಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

