ಎಲ್ಲೆ ಮೀರಿದ ಪಕ್ಷ ರಾಜಕಾರಣ
ಶಿರಸಿ: ಗುರುವಾರ ನಡೆದ ಚುನಾವಣೆಯಲ್ಲಿ ಮತದಾರನ ಮನಸ್ಸನ್ನು ಗೆಲ್ಲುವ ಪಕ್ಷ ರಾಜಕಾರಣ ಎಲ್ಲೆ ಮೀರಿತ್ತು. ಮತದಾರನಿಗೆ ಆಮಿಷವೊಡ್ಡಿದ ಪ್ರಕರಣ ದಾಖಲಾಗಿದ್ದರೂ ನಡೆದಿದೆಯೆನ್ನಲಾಗಿದೆ.
ಶಿರಸಿಯ ವಿವೇಕಾನಂದ ನಗರದಲ್ಲಿ ಮದ್ಯ ಹಂಚಿಕೆ ನಡೆದಿದ್ದು ಪೊಲೀಸರು ತೀವ್ರ ಗಸ್ತು ಕೈಗೊಂಡಿದ್ದರು. ಆದಾಗ್ಯೂ ಮದ್ಯ ಹಂಚಿಕೆ ತಡೆಯಲು ಮತ್ತೊಂದು ರಾಜಕೀಯ ಪಕ್ಷದ ಕಾರ್ಯಕರ್ತರು ಪ್ರಯತ್ನಿಸಿದಾಗ ತೀವ್ರ ಮಾತಿನ ಚಕಮಕಿ ನಡೆದಿದೆ. ಸಕಾಲದಲ್ಲಿ ಪೊಲೀಸರ ಮಧ್ಯಪ್ರವೇಶದಿಂದಾಗಿ ಅಹಿತಕರ ಘಟನೆ ನಡೆದಿಲ್ಲವೆನ್ನಲಾಗಿದೆ. ಪ್ರತಿಷ್ಠಿತ ಅಯ್ಯಪ್ಪ ನಗರ ವಾರ್ಡ್ನಲ್ಲಿ ಕ್ರಿಮಿನಲ್ ಚಾರಿತ್ರ್ಯ ಹೊಂದಿರುವ ವ್ಯಕ್ತಿಗಳ ಗುಂಪು ಮತದಾರರಿಗೆ ಆಮಿಷವೊಡ್ಡಿದೆ ಎನ್ನುವ ದೂರು ಕೇಳಿ ಬಂದಿದೆ. ಇದರಿಂದಾಗಿ ಸ್ವತಃ ಅಭ್ಯರ್ಥಿಗಳು ಈ ದೃಶ್ಯ ಕಣ್ಣಿಗೆ ಕಂಡರೂ ಅಸಹಾಯಕರಾಗಿದ್ದರು. ಪ್ರಾದೇಶಿಕ ಪಕ್ಷವೊಂದರ ಅಭ್ಯರ್ಥಿ ಮತ್ತು ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿ ಈ ವ್ಯವಹಾರದಿಂದಾಗಿ ಅಸಹಾಯಕರಾಗಿದ್ದರು. ಕೇವಲ ಪತ್ರಿಕಾಲಯಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡುವುದಕ್ಕೆ ಸೀಮಿತವಾದರು. ಚುನಾವಣಾಧಿಕಾರಿಗಳು ಮಧ್ಯರಾತ್ರಿಯಲ್ಲಿ ಆಮಿಷವೊಡ್ಡಲು ಯತ್ನಿಸುತ್ತಿದ್ದ ಜನರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಂತೆ ಅವರೆಲ್ಲ ಪರಾರಿಯಾದರೆನ್ನಲಾಗಿದೆ.
ರಣರಂಗ: ಸಿದ್ದಾಪುರ ಪಪಂ ವ್ಯಾಪ್ತಿಯಲ್ಲಿ ಬುಧವಾರ ಅಕ್ಷರಶಃ ರಣರಂಗದ ವಾತಾವರಣ ನಿರ್ಮಾಣವಾಗಿತ್ತು. ಈ ಹಿಂದೆಂದೂ ಕಾಣದ ಗೂಂಡಾ ವರ್ತನೆ ಇದಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ರಾಷ್ಟ್ರೀಯ ಪಕ್ಷವೊಂದಕ್ಕೆ ಸೇರಿದ ಪ್ರಮುಖರು ಮತ್ತು ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು ಇಂತಹ ವರ್ತನೆ ತೋರಿರುವುದು ಸಿದ್ದಾಪುರ ಪಟ್ಟಣಿಗರಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಹೊಡೆದಾಟ, ಬಡಿದಾಟ ನಡೆಸುತ್ತಿದ್ದ ದೃಶ್ಯವನ್ನು ಪೊಲೀಸರು ಅಸಹಾಯಕರಾಗಿ ವೀಕ್ಷಿಸುತ್ತಿದ್ದರೆನ್ನುವ ಅಭಿಪ್ರಾಯ ಪ್ರತ್ಯಕ್ಷದರ್ಶಿಗಳದ್ದಾಗಿದೆ. ತಡರಾತ್ರಿಯಲ್ಲಿ ಅಂತೂ ಇಂತೂ ಗೂಂಡಾಗರ್ದಿ ತೋರಿದ ಐವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಆ ಐವರೆಂದರೆ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿರುವ ಬಿಜೆಪಿಯ ಕೆ.ಜಿ. ನಾಯ್ಕ ಹಣಜಿಬೈಲು, ಗುರು ದಾಮೋದರ ಶಾನಭಾಗ ರವೀಂದ್ರನಗರ, ನಾಗರಾಜ ಅಂಬಿಗ, ಅಣ್ಣಪ್ಪ ರಾಮಾ ನಾಯ್ಕ, ಶಾಮು ಅಂಬಿಗ ಅರವಿಂದ ನಗರ. ಇವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರ ಪುಂಡಾಟಿಕೆಗೆ ಒಳಗಾದವರು ಕಾಂಗ್ರೆಸ್ಸಿನ ವಸಂತ ಲಕ್ಷ್ಮಣ ನಾಯ್ಕ, ಹನುಮಂತ ಬೊಮ್ಮ ನಾಯ್ಕ ಇವರಾಗಿದ್ದು ಈ ಕುರಿತಂತೆ 2 ದೂರನ್ನು ನೀಡಲಾಗಿದೆ. ಈ ಇಬ್ಬರ ಪೈಕಿ ವಸಂತ ಲಕ್ಷ್ಮಣ ನಾಯ್ಕ ಐವರ ಮೇಲೆ ದೂರು ನೀಡಿದ್ದರೆ, ಹನುಮಂತ ಬೊಮ್ಮ ನಾಯ್ಕ ಅವರು ಕೆ.ಜಿ. ನಾಯ್ಕ, ಧನಂಜಯ ಮಾರ್ಯಾ ನಾಯ್ಕ, ಕೆ.ಜಿ. ನಾಯ್ಕ ಅವರ ಅಳಿಯನ ಮೇಲೆ ಪ್ರತ್ಯೇಕವಾಗಿ ದೂರನ್ನು ನೀಡಿದ್ದಾರೆ. ಅದೇ ರೀತಿ ಬಿಜೆಪಿಯಿಂದಲೂ ಪ್ರತಿದೂರು ದಾಖಲಾಗಿದ್ದು, ಬಿಜೆಪಿಯ ಪಿ.ಎ. ನಾಯ್ಕ ಅವರು ಕಾಂಗ್ರೆಸ್ಸಿನ ನಾಗ್ಯಾ ಯಾನೆ ನಾಗರಾಜ್ ಅನ್ನುವವರ ಮೇಲೆ ಹಾಗೂ ಗುರುರಾಜ ಶಾನಭಾಗ ಅವರು ಕಾಂಗ್ರೆಸ್ಸಿನ ವಸಂತ ಎಲ್. ನಾಯ್ಕ, ತಿಮ್ಮಪ್ಪ ಮಾ. ಮಡಿವಾಳ, ಈಶ್ವರ ಸಿ. ನಾಯ್ಕ, ಹನುಮಂತ ಬೊಮ್ಮ ನಾಯ್ಕ ಇವರ ಮೇಲೆ ದೂರು ದಾಖಲಿಸಿದ್ದಾರೆ. ಘಟನೆಯಿಂದ ಮತದಾರ ನಿರ್ಭೀತಿಯಿಂದ ಮತದಾನ ಮಾಡುವ ಪರಿಸ್ಥಿತಿ ಇರಲಿಲ್ಲ ಎನ್ನುವುದು ಪ್ರಜ್ಞಾವಂತ ಮತದಾರರ ಮಾತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

