ಕೈಕೊಟ್ಟ ಮತಯಂತ್ರ
ಕಾರವಾರ: ಸೋನಾರವಾಡ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದರಿಂದ ಮತದಾನ ಪ್ರಕ್ರಿಯೆ ಹತ್ತು ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ನಂತರ ಮತಯಂತ್ರ ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಯಿತು. ಮತದಾನಕ್ಕಾಗಿ ಸರದಿಯಲ್ಲಿ ನಿಂತವರು ಮತಯಂತ್ರ ಸಿದ್ಧಗೊಳ್ಳುವ ತನಕ ಕಾಯಬೇಕಾಯಿತು. ಮತಯಂತ್ರ ಕೈಕೊಟ್ಟ ಬಗ್ಗೆ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಕ್ಷೇಪ: ವಾರ್ಡ್ ನಂ. 17ರ ಕೋಡಿಬಾಗದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ವಾರ್ಡ್ಗೆ ಸಂಬಂಧಪಡದ ಕೆಲವರನ್ನು ಮತಗಟ್ಟೆ ಬಳಿ ಕರೆತಂದ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ದೀಪಕ ವೈಂಗಣಕರ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲಿಸಿದ ಪೊಲೀಸರು ವಾರ್ಡ್ಗೆ ಸಂಬಂಧಪಡದ ವ್ಯಕ್ತಿಗಳನ್ನು ಮತಗಟ್ಟೆಯ ಆವರಣದಿಂದ ದೂರ ಕಳುಹಿಸಿದರು. ನಂತರ ಜನರ ಗುರುತಿನ ಚೀಟಿ ನೋಡಿ ಆ ವಾರ್ಡ್ನ ಮತದಾರರನ್ನು ಮಾತ್ರ ಮತಗಟ್ಟೆಯ ಆವರಣದೊಳಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಪೊಲೀಸರೇ ನಿರ್ವಹಿಸಿದರು. ಈ ಮತಗಟ್ಟೆ ಸೂಕ್ಷ್ಮ ಮತಗಟ್ಟೆಯಾಗಿದ್ದರಿಂದ ಹೆಚ್ಚುವರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಈ ವಾರ್ಡ್ನಲ್ಲಿ ಬಿಜೆಪಿಯಿಂದ ಮಹೇಶ ತಾಮ್ಸೆ, ಕಾಂಗ್ರೆಸ್ನಿಂದ ದೀಪಕ ವೈಂಗಣಕರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರವಣ ಶಿರೋಡ್ಕರ ನಡುವೆ ತೀವ್ರ ಸ್ಪರ್ಧೆ ಇದೆ.
ಬಿರು ಬಿಸಿಲು: ಕರಾವಳಿಯುದ್ದಕ್ಕೂ ಬಿರು ಬಿಸಿಲಿನಲ್ಲಿ ಮತದಾರರು ಬಸವಳಿದರು. ಮಧ್ಯಾಹ್ನ 12 ಗಂಟೆಯಿಂದ 3.30ರ ತನಕ ಬಿಸಿಲಿನಿಂದಾಗಿ ಮತದಾನದ ಪ್ರಮಾಣದಲ್ಲಿ ಇಳಿಮುಖವಾಗಿತ್ತು. ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಕ್ಷದ ಕಾರ್ಯಕರ್ತರು ಆಗಾಗ ತಂಪು ಪಾನೀಯದ ಮೊರೆ ಹೋದರು. ಕೆಲ ವಾರ್ಡ್ಗಳಲ್ಲಿ ಕಾರ್ಯಕರ್ತರು ಬೋಂಡಾ, ಬಜ್ಜಿ ಮತ್ತಿತರ ತಿಂಡಿಗಳನ್ನು ತಿಂದು ಸಂಜೆ ತನಕ ಇರಬೇಕಾಯಿತು.
ಮತ ಎಣಿಕೆ ಕೇಂದ್ರಗಳ ವಿವರ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಮಾ. 11ರಂದು ನಡೆಯಲಿದ್ದು, ಜಿಲ್ಲೆಯಲ್ಲಿರುವ ಎಣಿಕೆ ಕೇಂದ್ರಗಳ ವಿವರ ಇಂತಿವೆ.
ಕಾರವಾರ ನಗರಸಭೆ- ಸೈಂಟ್ ಜೋಸೆಫ್ ಹೈಸ್ಕೂಲ್, ಕಾರವಾರ. ಶಿರಸಿ ನಗರಸಭೆ- ಮಾರಿಕಾಂಬಾ ಪದವಿಪೂರ್ವ ಕಾಲೇಜು, ಶಿರಸಿ. ದಾಂಡೇಲಿ ನಗರಸಭೆ- ಕಾರ್ಮೆಲ್ ಪ್ರಾಥಮಿಕ ಶಾಲೆ ಹಳಿಯಾಳ, ಕುಮಟಾ ಪುರಸಭೆ- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಲ್ ಕುಮಟಾ. ಭಟ್ಕಳ ಪುರಸಭೆ- ನ್ಯೂ ಇಂಗ್ಲಿಷ್ ಸ್ಕೂಲ್ ಭಟ್ಕಳ. ಅಂಕೋಲ ಪಟ್ಟಣ ಪಂಚಾಯಿತಿ- ಜೆ.ಸಿ. ಕಾಲೇಜು ಅಂಕೋಲ. ಹೊನ್ನಾವರ ಪಟ್ಟಣ ಪಂಚಾಯಿತಿ - ತಹಸೀಲ್ದಾರ್ ಕಚೇರಿ ಹೊನ್ನಾವರ. ಸಿದ್ದಾಪುರ ಪಟ್ಟಣ ಪಂಚಾಯಿತಿ- ಮಹಾತ್ಮಾ ಗಾಂಧಿ ಶತಾಬ್ದಿ ಪದವಿಪೂರ್ವ ಮಹಾವಿದ್ಯಾಲಯ ಸಿದ್ದಾಪುರ. ಯಲ್ಲಾಪುರ ಪಟ್ಟಣ ಪಂಚಾಯಿತಿ- ವೈಟಿಎಸ್ಎಸ್ ಪದವಿಪೂರ್ವ ಮಹಾವಿದ್ಯಾಲಯ ಯಲ್ಲಾಪುರ. ಮುಂಡಗೋಡ ಪಟ್ಟಣ ಪಂಚಾಯಿತಿ- ಸರ್ಕಾರಿ ಪಿಯು ಕಾಲೇಜು ಮುಂಡಗೋಡು. ಹಳಿಯಾಳ ಪಟ್ಟಣ ಪಂಚಾಯಿತಿ- ಕಾರ್ಮೆಲ್ ಪ್ರೌಢಶಾಲೆ, ಹಳಿಯಾಳ. ಈ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

