ಉತ್ತರ ಕನ್ನಡ

ಗದ್ದಲ, ಗೊಂದಲದ ಮಧ್ಯೆ ಮತದಾನ

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 7
ಮಿನಿ ಮಹಾಸಮರವೆಂದೇ ಬಿಂಬಿತವಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಗುರುವಾರ ನಡೆದ ಮತದಾನದ ವೇಳೆ ರೋಣ ಪಟ್ಟಣದಲ್ಲಿ ಲಘು ಲಾಠಿ ಪ್ರಹಾರ ಹಾಗೂ ಗದಗ-ಬೆಟಗೇರಿ ಅವಳಿ ನಗರಗಳ ವಿವಿಧ ವಾರ್ಡ್‌ಗಳಲ್ಲಿ ಹಣ ಹಂಚಿದ ಆರೋಪ, ಕೆಲವೆಡೆ ಮತದಾನಕ್ಕೆ ಬರುವವರಿಗಾಗಿ ಬಾಡೂಟ, ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದದ ಮಧ್ಯೆಯೇ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದೆ.
ಲಕ್ಷ್ಮೇಶ್ವರ, ಮುಂಡರಗಿ, ಗಜೇಂದ್ರಗಡ, ನರಗುಂದ ಪುರಸಭೆ ಹಾಗೂ ಮುಳಗುಂದ, ಶಿರಹಟ್ಟಿ, ನರೇಗಲ್ಲ ಪಪಂಗಳಲ್ಲಿ ಯಶಸ್ವಿಯಾಗಿ ಮತದಾನ ಜರುಗಿದೆ. ರೋಣದ 4ನೇ ವಾರ್ಡ್ ಹೊರತುಪಡಿಸಿದರೆ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಸಣ್ಣ ಪುಟ್ಟ ಗೊಂದಲಗಳಾದರೂ ಯಶಸ್ವಿ ಮತದಾನ ಜರುಗಿದೆ. ಗದಗ-ಬೆಟಗೇರಿ ನಗರಸಭೆಯ ಹಲವು ವಾರ್ಡ್‌ಗಳಲ್ಲಿ ಸಣ್ಣ ಪುಟ್ಟ ಘರ್ಷಣೆ ನಡೆದಿವೆ. ಆದರೆ, ಇನ್ನುಳಿದ ವಾರ್ಡ್‌ಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.
ಗೊಂದಲದ ವಾತಾವರಣ: ಗದಗನಲ್ಲಿ ಅತ್ಯಂತ ತುರುಸಿನ ಮತದಾನ ಜರುಗಿದ 4ನೇ ವಾರ್ಡ್‌ನಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಪರಸ್ಪರ ಆರೋಪ, ಪ್ರತ್ಯಾರೋಪ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. 15ನೇ ವಾರ್ಡ್‌ನಲ್ಲಿ ಚಂದ್ರು ತಡಸದ ಹಾಗೂ ಸದಾನಂದ ಪಿಳ್ಳಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ಜರುಗುತ್ತಿದ್ದಂತೆ ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಗೊಳಿಸಿದರು. 26ನೇ ವಾರ್ಡ್‌ನಲ್ಲಿಯೂ ಇದೇ ರೀತಿಯ ವಾತಾವರಣ ನಿರ್ಮಾಣವಾಗಿತ್ತು.
ಕೈಕೊಟ್ಟ ಯಂತ್ರ: ನಗರದ 19ನೇ ವಾರ್ಡಿನ ವಿಭಾಗ 62ರಲ್ಲಿ ಮತದಾನದ ಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಮತಯಂತ್ರವನ್ನು ದುರಸ್ತಿಗೊಳಿಸಿದ ನಂತರ ಮತದಾನ ಪ್ರಾರಂಭವಾಯಿತು. ಇದರಿಂದಾಗಿ ಸುಮಾರು 1 ಗಂಟೆಯವರೆಗೆ ಮತದಾನ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಬಂದ ಸಾರ್ವಜನಿಕರು ಕಾಯುವಂತಾಯಿತು.
ಮತದಾರರಿಗೆ ಬಿಸಿಲಿನ ಪ್ರತಾಪ: ಬೆಳಗ್ಗೆ 9 ಗಂಟೆಯಿಂದ ಅತ್ಯಂತ ಚುರುಕುಗೊಂಡ ಮತದಾನ ಪ್ರಕ್ರಿಯೆಯಲ್ಲಿ ಮಧ್ಯಾಹ್ನ 12 ಗಂಟೆಯ ನಂತರದಲ್ಲಿ ಅಲ್ಪ ಪ್ರಮಾಣದ ಹಿನ್ನಡೆ ಕಂಡುಬಂದಿತು. ಮಧ್ಯಾಹ್ನದ ವೇಳೆಯಲ್ಲಿ ಜನರು ಮತ ಚಲಾಯಿಸಲು ಬಾರದೇ ಇರುವುದರಿಂದ ಮತದಾನ ಕೇಂದ್ರಗಳು ಖಾಲಿ ಖಾಲಿಯಾಗಿರುವುದು ಕಂಡುಬಂದಿತು. ನಂತರ 3 ಗಂಟೆಯ ವೇಳೆಗೆ ಮತ್ತೆ ಬಿರುಸಿನಿಂದ ಪ್ರಾರಂಭವಾದ ಮತದಾನವು ಕೆಲವು ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ 5 ಗಂಟೆಯ ಬಳಿಕ ನಡೆದಿರುವುದು ವಿಶೇಷವಾಗಿತ್ತು.
ವಯೋವೃದ್ಧರೂ ಭಾಗಿ: ಕೆಲವರು ತಮಗೆ ಮತದಾನದ ಹಕ್ಕಿದ್ದರೂ ಮತದಾನ ಮಾಡದೇ ಕಾಲಹರಣ ಮಾಡುವ ಸಂದರ್ಭದಲ್ಲಿ, ಜಿಲ್ಲೆಯಾದ್ಯಂತ ವಯೋವೃದ್ಧರು ಯುವಕರನ್ನು ನಾಚಿಸುವಂತೆ ಮತ ಚಲಾಯಿಸಿದರು. ನಗರದ 8ನೇ ವಾರ್ಡ್‌ನಲ್ಲಿ ವಯೋವೃದ್ಧ ಮಹಿಳೆಯೋರ್ವಳು ತಮ್ಮ ಮಗನೊಂದಿಗೆ ಮತದಾನ ಬಂದು ಮತ ಚಲಾಯಿಸಿದಳು. ಎಲ್ಲ ಪಕ್ಷದವರೂ ಮತದಾರರ ಕರೆತರಲು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿದ್ದು, ಮತದಾನ ಕೇಂದ್ರವರೆಗೆ ವಾಹನಗಳು ಬಂದರೂ ಪೊಲೀಸರು ಮಾತ್ರ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.